CONNECT WITH US  

ಗರ್ಭಿಣಿಯರೇ ಜೀಕಾ ದೇಶಕ್ಕೆ ಹೋಗಬೇಡಿ!

ಹೊಸದಿಲ್ಲಿ: ವಿಶ್ವದ ಹಲವು ರಾಷ್ಟ್ರಗಳಿಗೆ  "ಜೀಕಾ' ವೈರಾಣು ವ್ಯಾಪಿಸುತ್ತಿರುವ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಘೋಷಿ ಸಿದ್ದು, ಎಲ್ಲ ದೇಶಗಳಲ್ಲಿ ಮುಂಜಾಗ್ರತಾ ಕ್ರಮ ಜರಗಿಸಬೇಕು ಮತ್ತು ರೋಗ ಪತ್ತೆಗೆ ಲ್ಯಾಬ್‌ಗಳನ್ನು ಸ್ಥಾಪಿಸಬೇಕು ಎಂದು ಸೂಚಿಸಿದೆ. ಇದರ ಬೆನ್ನಲ್ಲೇ ಭಾರತ ಸರಕಾರವೂ ಜೀಕಾ ವೈರಾಣುಪೀಡಿತ ರಾಷ್ಟ್ರಗಳಿಗೆ ತೆರಳುವ ಹಾಗೂ ಅಲ್ಲಿಂದ ಆಗಮಿಸುವ ಗರ್ಭಿಣಿಯರಿಗಾಗಿ ಪ್ರಯಾಣ ಮಾರ್ಗಸೂಚಿ ಪ್ರಕಟಿಸಿದೆ. ಅಮೆರಿಕ, ಮೆಕ್ಸಿಕೋ, ನೈಜೀರಿಯಾ, ಇಂಡೋನೇಷ್ಯಾ, ಬ್ರೆಜಿಲ್‌, ಫಿಲಿಪ್ಪೀನ್ಸ್‌, ಥಾಯ್ಲೆಂಡ್‌ನ‌ಲ್ಲಿ ಜೀಕಾ ವೈರಾಣು ಹರಡುತ್ತಿದೆ. 

ಭಾರತದಲ್ಲಿ ಈ ವರೆಗೂ ಈ ವ್ಯಾಧಿ ಎಲ್ಲೂ ಕಂಡುಬಂದ ವರದಿಯಾಗಿಲ್ಲ. ಆದಾಗ್ಯೂ ಗರ್ಭಿಣಿ ಯರು ಈ ರೋಗಕ್ಕೆ ಸುಲಭದಲ್ಲಿ ತುತ್ತಾಗುವ ಭೀತಿ ಇರುವ ಕಾರಣ ಮುಂಜಾಗ್ರತಾ ಕ್ರಮವಾಗಿ ಬಾಧಿತ ದೇಶಗಳಿಗೆ ಅವರು ಪ್ರಯಾಣ ಮಾಡಬಾರದು ಅಥವಾ ಮುಂದೂಡಬೇಕು ಎಂದು ಸರಕಾರವು ಮಾರ್ಗಸೂಚಿಯಲ್ಲಿ ಒತ್ತಿ ಹೇಳಿದೆ.

ಎಲ್ಲ ವಿಮಾನ ನಿಲ್ದಾಣಗಳಲ್ಲಿ ಜೀಕಾ ಬಗ್ಗೆ ಸೂಚನಾ ಫ‌ಲಕ ಅಳವಡಿಸಲಾಗುವುದು. ಬಾಧಿತ ದೇಶಗಳಿಂದ ಆಗಮಿಸಿದ ಪ್ರಯಾಣಿಕರು ಕಸ್ಟಮ್ಸ್‌ ನಲ್ಲಿ ಮಾಹಿತಿ ನೀಡಬೇಕು. ಅಂಥ ದೇಶಗಳಿಂದ ಮರಳಿ ಅನಾರೋಗ್ಯ ಪೀಡಿತರಾಗಿದ್ದರೆ ಸಮೀಪದ ಆರೋಗ್ಯ ಕೇಂದ್ರ ಸಂಪರ್ಕಿಸಬೇಕು ಎಂದಿದೆ.

ಅಡೇಸ್‌ ಈಜಿಪ್ತಿ ಎಂಬ ಸೊಳ್ಳೆಯಿಂದ ಜೀಕಾ ವೈರಸ್‌ ಕಾಯಿಲೆ ಹರಡುತ್ತದೆ. ಮುಂದಿನ ವರ್ಷ ಜೀಕಾ ವೈರಾಣು ಅಮೆರಿಕದ 4 ಲಕ್ಷ ಜನರಿಗೆ ತಗಲಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಮುನ್ನೆಚ್ಚರಿಕೆ ನೀಡಿದೆಯಾದರೂ ಜೀಕಾ ವೈರಾಣುಪೀಡಿತ ರಾಷ್ಟ್ರಗಳಿಗೆ ಪ್ರಯಾಣ ನಿರ್ಬಂಧ ಹೇರುವ ಕುರಿತು ಯಾವುದೇ ನಿರ್ದೇಶನ ನೀಡಿಲ್ಲ. ಆದರೆ ಅಮೆರಿಕ ಮಾತ್ರ ಬ್ರೆಜಿಲ್‌ ಸಹಿತ ಜೀಕಾ ಬಾಧೆ ಇರುವ ದೇಶಗಳಿಗೆ ಭೇಟಿ ನೀಡುವ ಕಾರ್ಯಕ್ರಮವನ್ನು ಮುಂದೂಡಿ ಎಂದು ಗರ್ಭಿಣಿಯರಿಗೆ ಸಲಹೆ ಮಾಡಿದೆ. ಅಲ್ಲದೆ, ಜೀಕಾ ಸ್ಪಂದನೆ ಕೇಂದ್ರವನ್ನು ತೆರೆದಿದೆ.

ಆಫ್ರಿಕಾ ಖಂಡದಲ್ಲಿ 11 ಸಾವಿರ ಮಂದಿಯನ್ನು ಎಬೋಲಾ ರೋಗ ಬಲಿ ಪಡೆದಾಗ ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಘೋಷಿಸಿತ್ತು. ಅನಂತರ ಇದೇ ಮೊದಲ ಬಾರಿಗೆ ತುರ್ತು ಪರಿಸ್ಥಿತಿ ಜಾರಿ ಮಾಡಿದೆ. 

Trending videos

Back to Top