CONNECT WITH US  

ಉಗ್ರರ ವಿರುದ್ಧ ಕಠಿಣ ಕ್ರಮಕ್ಕೆ ಪಾಕಿಗೆ ಸರ್ವ ರೀತಿಯ ಬೆಂಬಲ: ಭಾರತ

ಜೈಪುರ : ಭಾರತದಲ್ಲಿ ಘಟಿಸಿರುವ ಹೆಚ್ಚಿನ ಭಯೋತ್ಪಾದಕ ದಾಳಿಗಳಿಗೆ ಪಾಕಿಸ್ಥಾನವೇ ಕಾರಣವಾಗಿದೆ ಎಂದು ಆರೋಪಿಸಿರುವ ಭಾರತ, ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಭಯೋತ್ಪಾದಕರನ್ನು ನಿಗ್ರಹಿಸಲು ಪಾಕಿಸ್ಥಾನ ಕಠಿನ ಕ್ರಮಕೈಗೊಂಡರೆ ತಾನು ಅದನ್ನು ಸರ್ವ ರೀತಿಯಲ್ಲಿ ಬೆಂಬಲಿಸುವುದಾಗಿ ಹೇಳಿದೆ.

ಪಾಕಿಸ್ಥಾನ ತನ್ನ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರರನ್ನು ಮಟ್ಟಹಾಕಲು ನಿರ್ಣಾಯಕ ಕಠಿನ ಕ್ರಮಗಳನ್ನು ತೆಗೆದುಕೊಂಡರೆ ಅದರಿಂದ ಭಾರತ - ಪಾಕ್‌ ದ್ವಿಪಕ್ಷೀಯ ಸಂಬಂಧಗಳು ಸುಧಾರಿಸುತ್ತವೆ ಮತ್ತು ಇಡಿಯ ದಕ್ಷಿಣ ಏಶ್ಯ ಪ್ರಾಂತ್ಯದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಗೊಳ್ಳುತ್ತದೆ ಎಂದು ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌ ಹೇಳಿದರು.

"ಭಾರತದಲ್ಲಿ ನಡೆದಿರುವ ಹೆಚ್ಚಿನೆಲ್ಲ ಭಯೋತ್ಪಾದಕ ದಾಳಿಗಳು ಪಾಕ್‌ ನೆಲದಿಂದ ಕಾರ್ಯಾಚರಿಸುತ್ತಿರುವ ಉಗ್ರರಿಂದಲೇ ಆಗಿವೆ. ಆದುದರಿಂದ ಪಾಕಿಸ್ಥಾನ ತನ್ನ ನೆಲದಿಂದ ಕಾರ್ಯವೆಸಗುವ ಉಗ್ರರನ್ನು ಮಟ್ಟ ಹಾಕುವ ಪ್ರಾಮಾಣಿಕತೆಯನ್ನು ತೋರಬೇಕು ಮತ್ತು ಆ ನಿಟ್ಟಿನಲ್ಲಿ ಕಠಿನ ಕ್ರಮಗಳನ್ನು ತೆಗೆದುಕೊಳ್ಳಬೇಕು' ಎಂದು ರಾಜನಾಥ್‌ ಸಿಂಗ್‌ ಹೇಳಿದರು.

"ಪಾಕಿಸ್ಥಾನ ತನ್ನ ನೆಲದಿಂದ ಭಾರತದ ವಿರುದ್ಧ ಉಗ್ರ ದಾಳಿ ಕೈಗೊಳ್ಳುವ ಭಯೋತ್ಪಾದಕ ಸಂಘಟನೆಗಳನ್ನು ಮಟ್ಟಹಾಕಲು ನಿರ್ಣಾಯಕ ಕ್ರಮ ತೆಗೆದುಕೊಂಡಲ್ಲಿ ಭಾರತವು ಸರ್ವ ರೀತಿಯಲ್ಲಿ ಪಾಕ್‌ ಬೆಂಬಲಕ್ಕೆ ನಿಲ್ಲುತ್ತದೆ; ಇದರಿಂದ ಉಭಯ ದೇಶಗಳ ನಡುವಿನ ಸಂಬಂಧ ಗಟ್ಟಿಯಾಗುತ್ತದೆ' ಎಂದು ರಾಜನಾಥ್‌ ಹೇಳಿದರು.

26/11ರ ಮುಂಬಯಿ ಉಗ್ರ ದಾಳಿ ಮತ್ತು ಈ ವರ್ಷ ಜನವರಿ 1-2ರಂದು ನಡೆದಿರುವ ಪಠಾಣ್‌ಕೋಟ್‌ ವಾಯು ನೆಲೆ ಮೇಲಿನ ದಾಳಿಗಳು ಭಾರತದ ವಿರುದ್ಧ ಪಾಕ್‌ ಭಯೋತ್ಪಾದನೆಯಲ್ಲಿ ಉಂಟಾಗಿರುವ ಸ್ಪಷ್ಟ ಬದಲಾವಣೆಗಳನ್ನು ಸೂಚಿಸುತ್ತವೆ ಎಂದು ರಾಜನಾಥ್‌ ಹೇಳಿದರು.
 

Trending videos

Back to Top