CONNECT WITH US  

ಚಿಕ್ಕಜಾಜೂರು, ಹುಬ್ಬಳ್ಳಿ ಜೋಡಿ ರೈಲು ಮಾರ್ಗಕ್ಕೆ ಕೇಂದ್ರ ಸಮ್ಮತಿ

ನವದೆಹಲಿ: ಹುಬ್ಬಳ್ಳಿ- ಚಿಕ್ಕಜಾಜೂರು ನಡುವಣ 190 ಕಿ.ಮೀ. ಉದ್ದದ ಜೋಡಿ ರೈಲು ಮಾರ್ಗಕ್ಕೆ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಕೇಂದ್ರ ಸಂಪುಟ ಸಮಿತಿ ಅನುಮೋದನೆ ನೀಡಿದೆ. ಇದರಿಂದ ಬೆಂಗಳೂರು-ಹುಬ್ಬಳ್ಳಿ ನಡುವಿನ ರೈಲುಯಾನ ಮತ್ತಷ್ಟು ಸುಗಮವಾಗಲಿದೆ.

ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿ ಬುಧವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ದೇಶಾದ್ಯಂತ ಆರು ರೈಲು ಮಾರ್ಗ ಹಾಗೂ ಒಂದು ರೈಲ್ವೆ ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ 10700 ಕೋಟಿ ರೂ. ಮೊತ್ತದ ಯೋಜನೆಗಳಿಗೆ ಅನುಮೋದನೆ ನೀಡಲಾಗಿದೆ. ಆರು ಯೋಜನೆಗಳಲ್ಲಿ ಹುಬ್ಬಳ್ಳಿ- ಚಿಕ್ಕಜಾಜೂರು ಮಾರ್ಗವೂ ಒಂದು.

ಅನುಮೋದನೆ ಪಡೆದಿರುವ ಈ ಮಾರ್ಗದಲ್ಲಿ ಜೋಡಿ ರೈಲು ಮಾರ್ಗ ನಿರ್ಮಾಣ ಕಾಮಗಾರಿ 13ನೇ ಪಂಚವಾರ್ಷಿಕ ಯೋಜನೆ ಅವಧಿಯಲ್ಲಿ ಅಂದರೆ ಇನ್ನು ನಾಲ್ಕು ವರ್ಷಗಳ ನಂತರ ಪೂರ್ಣಗೊಳ್ಳಲಿದೆ. ಈ ಯೋಜನೆಯಿಂದ ಚಿತ್ರದುರ್ಗ, ದಾವಣಗೆರೆ, ಹಾವೇರಿ ಹಾಗೂ ಧಾರವಾಡ ಜಿಲ್ಲೆಗೆ ಅನುಕೂಲವಾಗಲಿದೆ ಎಂದು ಕೇಂದ್ರ ಸರ್ಕಾರದ ಪ್ರಕಟಣೆ ತಿಳಿಸಿದೆ.

ಮುಂಬೈ- ಬೆಂಗಳೂರು ನಡುವಣ ಪ್ರಯಾಣಿಕ ರೈಲು ಹಾಗೂ ಮಂಗಳೂರಿಗೆ ತೆರಳುವ ಸರಕು ಸಾಗಣೆ ರೈಲುಗಳ ದೃಷ್ಟಿಯಿಂದ ಹುಬ್ಬಳ್ಳಿ- ಚಿಕ್ಕಜಾಜೂರು ಮಾರ್ಗ ಅತ್ಯಂತ ಮುಖ್ಯವಾಗಿದೆ. ಪುಣೆ- ಮೀರಜ್‌- ಹುಬ್ಬಳ್ಳಿ- ಬೆಂಗಳೂರು ಮಾರ್ಗವನ್ನು ಡಬ್ಲಿಂಗ್‌ ಮಾಡಲು ಕೇಂದ್ರ ಸರ್ಕಾರ ಈಗಾಗಲೇ ಉದ್ದೇಶಿಸಿದೆ. ಆ ಪೈಕಿ ಬೆಂಗಳೂರು- ತುಮಕೂರು ಹಾಗೂ ಅರಸೀಕೆರೆ- ಚಿಕ್ಕಜಾಜೂರು ನಡುವಣ ರೈಲು ಮಾರ್ಗದ ಡಬ್ಲಿಂಗ್‌ ಪ್ರಕ್ರಿಯೆ ಪೂರ್ಣಗೊಂಡಿದೆ. ಹುಬ್ಬಳ್ಳಿ- ಲೋಂಡಾ ಜೋಡಿ ಮಾರ್ಗ ಕಾಮಗಾರಿ ಪ್ರಗತಿಯಲ್ಲಿದೆ.

Trending videos

Back to Top