CONNECT WITH US  

ಕೇಂದ್ರಕ್ಕೆ ತೀವ್ರ ಮುಖಭಂಗ; ಅರುಣಾಚಲದಲ್ಲಿ ಮತ್ತೆ ಕೈ ಆಡಳಿತ;ಸುಪ್ರೀಂ

ಹೊಸದಿಲ್ಲಿ : ಕೇಂದ್ರ ಸರಕಾರಕ್ಕೆ ಭಾರೀ ದೊಡ್ಡ ಹಿನ್ನಡೆ ಎನಿಸುವ ರೀತಿಯಲ್ಲಿ ಸುಪ್ರೀಂ ಕೋರ್ಟ್‌ ಇಂದು ಬುಧವಾರ, ಕಳೆದ ವರ್ಷ ಡಿಸೆಂಬರ್‌ನಲ್ಲಿ ಅರುಣಾಚಲ ಪ್ರದೇಶದಲ್ಲಿನ ಕಾಂಗ್ರೆಸ್‌ ಸರಕಾರದ ಪತನಕ್ಕೆ ಕಾರಣವಾಗುವಂತೆ ರಾಜ್ಯಪಾಲ ಜ್ಯೋತಿ ರಾಜಖೋವಾ ಅವರು ಹೊರಡಿಸಿದ್ದ ಎಲ್ಲ ಆದೇಶಗಳನ್ನು ರದ್ದುಪಡಿಸಿ, ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್‌ ಸರಕಾರವನ್ನು ಪುನರ್‌ ಸ್ಥಾಪನೆ ಮಾಡಿದೆ.

ಅರುಣಾಚಲ ಪ್ರದೇಶದ ವಿಧಾನಸಭೆ ಅಧಿವೇಶನವನ್ನು ಹಿಂದಕ್ಕೆ ಹಾಕಿರುವ ರಾಜ್ಯಪಾಲರ ಕ್ರಮವು ಸಂವಿಧಾನದ 163ನೇ ವಿಧಿಯ ಉಲ್ಲಂಘನೆಯಾಗಿದೆ ಎಂದು ಜಸ್ಟಿಸ್‌ ಜೆ ಎಸ್‌ ಖೇಹರ್‌ ನೇತೃತ್ವದ ಐವರು ನ್ಯಾಯಾಧೀಶರ ಪೀಠವು ಹೇಳಿದೆ.

ಡಿಸೆಂಬರ್‌ 9ರ ಬಳಿಕ ರಾಜ್ಯಪಾಲರು ತೆಗೆದುಕೊಂಡಿರುವ ಎಲ್ಲ ನಿರ್ಧಾರಗಳು ಸಂವಿಧಾನ ಬಾಹಿರವಾಗಿದೆ ಎಂದಿರುವ ಸುಪ್ರೀಂ ಕೋರ್ಟ್‌ ನ್ಯಾಯ ಪೀಠ, ರಾಜ್ಯಪಾಲರು ವಿಧಾನಸಭಾ ಅಧಿವೇಶನವನ್ನು ಹಿಂದಕ್ಕೆ ನಿಗದಿಸಿ ಆದೇಶಿಸಿರುವ 2015ರ ಡಿಸೆಂಬರ್‌ 15ರ ಯಥಾಸ್ಥಿತಿಯನ್ನು ಕಾಪಿಡುವಂತೆ ಆದೇಶಿಸಿದೆ.

ಕಳೆದ ವರ್ಷ ಡಿಸೆಂಬರ್‌ 16ರಂದು,ಹಿಂದಿನ ದಿನ ಅನರ್ಹರಾಗಿದ್ದ 14 ಕಾಂಗ್ರೆಸ್‌ ಶಾಸಕರ ಸಹಿತವಾದ 21 ಬಂಡುಕೋರ ಕಾಂಗ್ರೆಸ್‌ ಶಾಸಕರು 11 ಬಿಜೆಪಿ ಶಾಸಕರು ಮತ್ತು ಇಬ್ಬರು ಪಕ್ಷೇತರ ಶಾಸಕರ ಜೊತೆಗೆ ಕೈಜೋಡಿಸಿ ತಾತ್ಕಾಲಿಕ ತಾಣವೊಂದರಲ್ಲಿ ಕಲಾಪ ನಡೆಸಿ ಅಸೆಂಬ್ಲಿ ಸ್ಪೀಕರ್‌ ನಬಮ್‌ ರೆಬಿಯಾ ವಿರುದ್ದ ದೋಷಾರೋಪ ಹೊರಿಸಿದ್ದರು. ಆದರೆ ಅವರ ಈ ಕ್ರಮವು ಕಾನೂನುಬಾಹಿರ ಮತ್ತು ಅಸಾಂವಿಧಾನಿಕ ಎಂದು ಸ್ಪೀಕರ್‌ ಪರಿಗಣಿಸಿದ್ದರು. ಬಂಡುಕೋರರ ಈ ತಥಾಕಥಿತ ಅಧಿವೇಶನದ ಅಧ್ಯಕ್ಷತೆಯನ್ನು ಉಪ ಸ್ಪೀಕರ್‌ ಟಿ ನೋಬುì ತೋಂಗ್‌ಡೋಕ್‌ ವಹಿಸಿದ್ದರು.

ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳು ಸೇರಿದಂತೆ 60 ಸದಸ್ಯ ಬಲದ ಸದನದಲ್ಲಿನ 27 ಶಾಸಕರು, ಈ ಅನಧಿಕೃತ ಕಲಾಪವನ್ನು ಬಹಿಷ್ಕರಿಸಿದ್ದರು.

ಒಂದು ದಿನದ ತರವಾಯ ವಿರೋಧ ಪಕ್ಷದ ಬಿಜೆಪಿ ಹಾಗೂ ಬಂಡುಕೋರ ಕಾಂಗ್ರೆಸ್‌ ಶಾಸಕರು ಮುಖ್ಯಮಂತ್ರಿ ನಬಮ್‌ ತುಕಿ ಅವರನ್ನು ಪದಚ್ಯುತಗೊಳಿಸಿ ಅವರ ಸ್ಥಾನಕ್ಕೆ ಬಂಡುಕೋರ ಕಾಂಗ್ರೆಸ್‌ ಶಾಸಕರೊಬ್ಬರನ್ನು ಆಯ್ಕೆ ಮಾಡಲು ಸ್ಥಳೀಯ ಹೊಟೇಲ್‌ ಒಂದರಲ್ಲಿ ಸೇರಿದ್ದರು.

ಆದರೆ ಆ ಮಧ್ಯೆ ಗುವಾಹಟಿ ಹೈಕೋರ್ಟ್‌ ಮಧ್ಯ ಪ್ರವೇಶಿಸಿ ಬಂಡುಕೋರರ ಅಧಿವೇಶನದ ನಿರ್ಧಾರಕ್ಕೆ ತಡೆ ನೀಡಿತ್ತು.

ಈ ಬಿಕ್ಕಟ್ಟನ್ನು ಅನುಸರಿಸಿ ಕೇಂದ್ರ ಗೃಹ ಸಚಿವಾಲಯದ ಸಲಹೆಯ ಪ್ರಕಾರ ರಾಷ್ಟ್ರಪತಿಗಳು 2016ರ ಜನವರಿ 26ರಂದು ಅರುಣಾಚಲ ಪ್ರದೇಶದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಜಾರಿಗೊಳಿಸಿದ್ದರು.

ಆ ಬಳಿಕ ಫೆಬ್ರವರಿಯಲ್ಲಿ, ಬಂಡುಕೋರ ಕಾಂಗ್ರೆಸ್‌ ನಾಯಕ ಕಾಲಿಖೋ ಪುಲ್‌ ಅವರ ನೇತೃತ್ವದ ಹೊಸ ಸರಕಾರಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ರಾಷ್ಟ್ರಪತಿ ಆಡಳಿತೆಯನ್ನು ತೆರವುಗೊಳಿಸಲಾಗಿತ್ತು.

ಇದೀಗ ಸುಪ್ರೀಂ ಕೋರ್ಟ್‌ ತೀರ್ಪಿನ ಫ‌ಲವಾಗಿ ನಬಂ ಟುಕಿ ಅವರು ಇದೀಗ ಮತ್ತೆ ಮುಖ್ಯಮಂತ್ರಿ ಪದಕ್ಕೆ ಮರಳಲಿದ್ದು "ಸರ್ವೋಚ್ಚ ನ್ಯಾಯಾಲಯವು ರಾಜ್ಯದಲ್ಲಿ ಕಾನೂನಿನ ಆಡಳಿತೆಯನ್ನು ಪುನರ್‌ಸ್ಥಾಪಿಸಿದೆ' ಎಂದು ಪ್ರತಿಕ್ರಿಯಿಸಿದ್ದಾರೆ.

Trending videos

Back to Top