CONNECT WITH US  

ನಕ್ಸಲರಿಂದ 10 ಸಿಆರ್‌ಪಿಎಫ್ ಯೋಧರ ನರಮೇಧ

ಪಟನಾ: ಬಿಹಾರದ ಔರಾಂಗಾಬಾದ್‌ ಜಿಲ್ಲೆಯ ದಟ್ಟಾರಣ್ಯದಲ್ಲಿ ನಕ್ಸಲರು ಸೋಮವಾರ ರಾತ್ರಿ 200 ನಕ್ಸಲರು ಏಕಾಏಕಿ ಕೇಂದ್ರೀಯ ಮೀಸಲು ಪೊಲೀಸ್‌ ಪಡೆ (ಸಿಆರ್‌ಪಿಎಫ್) ಯೋಧರ ಕೋಬ್ರಾ ಪಡೆಯ ಮೇಲೆ ನಡೆಸಿದ ದಾಳಿಯಲ್ಲಿ 10 ಯೋಧರು ಹುತಾತ್ಮರಾಗಿದ್ದಾರೆ. ಇದೇ ವೇಳೆ ಪ್ರತಿದಾಳಿ ಕಾರ್ಯಾಚರಣೆಯಲ್ಲಿ ಮೂವರು ನಕ್ಸಲರನ್ನು ಹತ್ಯೆಗೈಯಲಾಗಿದೆ. 2008 ರಲ್ಲಿ ಸ್ಥಾಪನೆಯಾದ ಅತ್ಯಾಧುನಿಕ ಪಡೆಯಾದ ಕೋಬ್ರಾ ಯೋಧರು ಈ ಪ್ರಮಾಣದಲ್ಲಿ ನಕ್ಸಲ್‌ ದಾಳಿಗೆ ಬಲಿಯಾಗುತ್ತಿರುವುದು ಇದೇ ಮೊದಲು.

ಇಮಾಮ್‌ ಗಂಜ್‌ನ ಗಡಿ ಪ್ರದೇಶದಲ್ಲಿ ಚಕರ್‌ಬಂದಾ ಎಂಬಲ್ಲಿ  ಕೋಬ್ರಾ ಪೋಸ್ಟ್‌ನ ಕಮಾಂಡೋಗಳು ನಕ್ಸಲರ ವಿರುದ್ಧ ಕೂಂಬಿಂಗ್‌ ನಡೆಸುತ್ತಿದ್ದರು. ಈ ದಾಳಿ ನಡೆದಿದೆ. ದಾಳಿಯಲ್ಲಿ ಇನ್ನೂ ಕೆಲ ಕಮಾಂಡೋಗಳು ಗಂಭೀರವಾಗಿ ಗಾಯಗೊಂಡಿದ್ದು ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಸಿಆರ್‌ಪಿಎಫ್ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳದಲ್ಲಿ ಕೂಂಬಿಂಗ್‌ ಮುಂದುವರಿದಿದ್ದು, ನಕ್ಸಲರ ಬಳಿಯಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. ಘಟನೆಯ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಮತ್ತು ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ತೀವ್ರ ಆಘಾತ ವ್ಯಕ್ತಪಡಿಸಿದ್ದಾರೆ. ತಕ್ಷಣಕ್ಕೆ 5 ಲಕ್ಷ ರೂ. ಪರಿಹಾರ ಹುತಾತ್ಮರ ಕುಟುಂಬಕ್ಕೆ ಸಿಗಬೇಕು ಮತ್ತು ನಂತರ 20 ಲಕ್ಷ ರೂ. ವಿಮಾ ಪರಿಹಾರವು ಪ್ರತಿ ಕುಟುಂಬಕ್ಕೆ ಸಂದಾಯವಾಗಬೇಕೆಂದು ನಿತೀಶ್‌ ಆದೇಶಿಸಿದ್ದಾರೆ.

Trending videos

Back to Top