CONNECT WITH US  

ವಾಯುಮಾಲಿನ್ಯಕ್ಕೆ ಪ್ರತಿ ವರ್ಷ 6 ಲಕ್ಷ ಭಾರತೀಯರು ಬಲಿ

ನವದೆಹಲಿ: ವಾಯುಮಾಲಿನ್ಯದಿಂದಾಗಿ ಆಗ್ನೇಯ ಏಷ್ಯಾ ಭಾಗದಲ್ಲಿ ಪ್ರತಿ ವರ್ಷ 8 ಲಕ್ಷ ಮಂದಿ ಸಾವನ್ನಪ್ಪುತ್ತಿದ್ದು, ಆ ಪೈಕಿ ಶೇ.75 ಮಂದಿ ಅಂದರೆ ಆರು ಲಕ್ಷಕ್ಕೂ ಅಧಿಕ ಜನರು ಭಾರತಕ್ಕೆ ಸೇರಿದವರಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆಯ (ಡಬ್ಲ್ಯುಎಚ್‌ಒ) ವರದಿಯೊಂದು ಮಂಗಳವಾರ ತಿಳಿಸಿದೆ. ವಾಯುಮಾಲಿನ್ಯದಿಂದಾಗಿ ಜನರು ಹೃದ್ರೋಗ, ಪಾರ್ಶ್ವವಾಯು ಹಾಗೂ ಶ್ವಾಸಕೋಶದ ಕ್ಯಾನ್ಸರ್‌ನಂತಹ ಸಮಸ್ಯೆ ತುತ್ತಾಗಿ ಸಾವನ್ನಪ್ಪುತ್ತಿದ್ದಾರೆ. ಜಾಗತಿಕವಾಗಿ ಪ್ರತಿ 10 ಜನರ ಪೈಕಿ 9 ಮಂದಿ ಕಳಪೆ ಗುಣಮಟ್ಟದ ಗಾಳಿಯನ್ನು ಸೇವಿಸುತ್ತಿದ್ದಾರೆ. ಕೆಳ ಹಾಗೂ ಮಧ್ಯಮ ಆದಾಯವಿರುವ ದೇಶಗಳಲ್ಲೇ ವಾಯುಮಾಲಿನ್ಯದಿಂದಾಗಿ ಸಾವುಗಳು ಸಂಭವಿಸುತ್ತಿವೆ. ಅದರಲ್ಲೂ ವಿಶೇಷವಾಗಿ ಪ್ರತಿ ಮೂರು ಸಾವುಗಳಲ್ಲಿ ಎರಡು ಸಾವು ಭಾರತವನ್ನೂ ಒಳಗೊಂಡ ಆಗ್ನೇಯ ಏಷ್ಯಾ ಹಾಗೂ ಪಶ್ಚಿಮ ಪೆಸಿಫಿಕ್‌ ವಲಯದಲ್ಲಿ ಸಂಭವಿಸುತ್ತಿವೆ. 

2012ರ ದಾಖಲೆಗಳನ್ನು ಇಟ್ಟುಕೊಂಡು ಭಾರತದಲ್ಲಿ ವಾಯುಮಾಲಿನ್ಯದಿಂದ ಉಂಟಾದ ಸಾವಿನ ಲೆಕ್ಕವನ್ನು 'ಆ್ಯಂಬಿಯೆಂಟ್‌ ಏರ್‌ ಪೊಲ್ಯೂಷನ್‌ 2016' ಎಂಬ ಈ ವರದಿಯಲ್ಲಿ ನೀಡಲಾಗಿದೆ. ಆ ಪ್ರಕಾರ, ಹೃದ್ರೋಗದಿಂದ 2.48 ಲಕ್ಷ, ಪಾರ್ಶ್ವವಾಯುವಿನಿಂದ 1.95 ಲಕ್ಷ, ಶ್ವಾಸಕೋಶ ಸಮಸ್ಯೆಯಿಂದ ಉಸಿರಾಟ ತೊಂದರೆಗೊಳಗಾಗಿ 11000, ಶ್ವಾಸಕೋಶ ಕ್ಯಾನ್ಸರ್‌ನಿಂದ 26 ಸಾವಿರ ಜನರು ಸಾವನ್ನಪ್ಪಿದ್ದಾರೆ. ಇದೊಂದು ಸಾರ್ವಜನಿಕ ಆರೋಗ್ಯದ ತುರ್ತು ಸ್ಥಿತಿ ಎಂದು ವಿಶ್ವಸಂಸ್ಥೆಯ ಸಾರ್ವಜನಿಕ ಆರೋಗ್ಯ ಪರಿಸರ ಇಲಾಖೆಯ ಮುಖ್ಯಸ್ಥೆ ಮಾರಿಯಾ ನೀರಾ ತಿಳಿಸಿದ್ದಾರೆ. ಅಲ್ಲದೆ,  ಸಾರಿಗೆ, ಗೃಹಬಳಕೆ ಇಂಧನ, ತ್ಯಾಜ್ಯ ಸುಡುವುದು, ಕಲ್ಲಿದ್ದಲು ಆಧರಿತ ವಿದ್ಯುತ್‌ ಘಟಕ ಹಾಗೂ ಕೈಗಾರಿಕಾ ಚಟುವಟಿಕೆಗಳು ವಾಯುಮಾಲಿನ್ಯಕ್ಕೆ ಪ್ರಮುಖ ಕೊಡುಗೆ ನೀಡುತ್ತಿವೆ ಎಂದಿದ್ದಾರೆ.

Trending videos

Back to Top