CONNECT WITH US  

ನಾಳೆಯಿಂದ ಬ್ರಿಕ್ಸ್‌ ಶೃಂಗಸಭೆ; ಇಂದು ಮೋದಿ- ಪುಟಿನ್‌ ಮಾತುಕತೆ 

ಪಣಜಿ: ಉದಯೋನ್ಮುಖ ಆರ್ಥಿಕ ಶಕ್ತಿ ಗಳ ಕೂಟವಾಗಿರುವ  "ಬ್ರಿಕ್ಸ್‌' ದೇಶಗಳ ಶೃಂಗಸಭೆ ರವಿವಾರ ಗೋವಾದ ರಾಜಧಾನಿ ಪಣಜಿಯಲ್ಲಿ ನಡೆಯಲಿದೆ. ಬ್ರಿಕ್ಸ್‌ನ ಐದು ಸದಸ್ಯ ದೇಶಗಳಲ್ಲಿ ರಷ್ಯಾ ಕೂಡ ಒಂದಾಗಿದ್ದು, ಯುದೊನ್ಮಾದದಲ್ಲಿದ್ದಾರೆ ಎಂದು ಹೇಳಲಾಗಿರುವ ಆ ದೇಶದ ಅಧ್ಯಕ್ಷ ವ್ಲಾದಿಮಿರ್‌ ಪುತಿನ್‌ ಗೋವೆಗೆ ಆಗಮಿಸಲಿರುವುದು ಮಹತ್ವ ಪಡೆದಿದೆ.

ಬ್ರಿಕ್ಸ್‌ ಶೃಂಗಸಭೆಗೆ ಪೂರ್ವಭಾವಿಯಾಗಿ ಶನಿ ವಾರ ಪ್ರಧಾನಿ ನರೇಂದ್ರ ಮೋದಿ ಅವರು ಪುತಿನ್‌ ಜತೆ ಮಾತುಕತೆ ನಡೆಸಲಿದ್ದಾರೆ. ಆ ವೇಳೆ ಪಾಕ್‌ ಭಯೋತ್ಪಾದನೆ, ಜಾಗತಿಕ ಉಗ್ರವಾದ ಹಾಗೂ ಪ್ರಸಕ್ತ ವಿದ್ಯಮಾನಗಳ ಬಗ್ಗೆ ಚರ್ಚೆ ನಡೆಯುವ ನಿರೀಕ್ಷೆಯಿದೆ. ಇದೇ ವೇಳೆ, ರಷ್ಯಾ ಜತೆ ಮಹತ್ವದ ಕ್ಷಿಪಣಿ ಖರೀದಿ ಒಪ್ಪಂದ, ಕೂಡಂಕುಲಂ ಅಣುವಿದ್ಯುತ್‌ ಉತ್ಪಾದನಾ ಯೋಜನೆ ಗಳ ಒಪ್ಪಂದಕ್ಕೆ ಭಾರತ-ರಷ್ಯಾ ಸಹಿ ಹಾಕಲಿವೆ.

ಪಾಕ್‌ ಮುಖ್ಯ ಅಜೆಂಡಾ: ಪಾಕಿಸ್ಥಾನ ಮೂಲದ ಭಯೋತ್ಪಾದನೆ ವಿರುದ್ಧ ರಾಜತಾಂತ್ರಿಕ ಹೋರಾಟ ನಡೆಸಿಕೊಂಡು ಬಂದಿರುವ ಭಾರತ, ಅದನ್ನು ಬ್ರಿಕ್ಸ್‌ ಶೃಂಗದಲ್ಲೂ ಮುಂದುವರಿಸಿ, ಶತ್ರು ದೇಶವನ್ನು ಮೂಲೆಗುಂಪು ಮಾಡಲು ಯತ್ನಿಸುವ ನಿರೀಕ್ಷೆ ಇದೆ. ಪುತಿನ್‌ ಅಲ್ಲದೇ ಚೀನ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌ ಕೂಡ ಗೋವಾಕ್ಕೆ ಆಗಮಿಸಲಿದ್ದು, ಅವರ ಜತೆಗಿನ ಭೇಟಿ ವೇಳೆ ಮೋದಿ ಅವರು ಪಾಕ್‌ ಉಗ್ರವಾದ, ಉಗ್ರ ಮೌಲಾನಾ ಮಸೂದ್‌ ಅಜರ್‌ ನಿಷೇಧಕ್ಕೆ ಹಾಗೂ ಭಾರತದ ಎನ್‌ಎಸ್‌ಜಿ ಸದಸ್ಯತ್ವಕ್ಕೆ ಚೀನ ಅಡ್ಡಗಾಲು, ಗಡಿ ವಿವಾದ- ಇತ್ಯಾದಿಗಳ ಬಗ್ಗೆ ಪ್ರಸ್ತಾವಿಸುವ ಸಾಧ್ಯತೆಗಳಿವೆ.

ಜಮ್ಮು-ಕಾಶ್ಮೀರದ ಉರಿ ಭಯೋತ್ಪಾದಕ ದಾಳಿ ಸಂಭವಿಸಿದ ಕೆಲವೇ ವಾರಗಳ ಅಂತರದಲ್ಲಿ ನಡೆಯು ತ್ತಿರುವ ಈ ಶೃಂಗಸಭೆಯಲ್ಲಿ ಭಯೋತ್ಪಾದಕರಿಗೆ ಆಶ್ರಯ ನೀಡಿ ಅವರಿಗೆ ಶಕ್ತಿ ತುಂಬುತ್ತಿರುವ ದೇಶಗಳ ವಿರುದ್ಧ ಕ್ರಮ ಜರಗಿಸುವುದು ಸಹಿತ ಉಗ್ರವಾದ ನಿಯಂತ್ರಣಕ್ಕೆ ಸಂಬಂಧಿಸಿದ ಹೋರಾಟಕ್ಕೆ ಒತ್ತು ನೀಡಲು ಭಾರತ ಪ್ರಯತ್ನಿಸುವ ಸಂಭವವಿದೆ.

ಭೂತಾನ್‌, ಬಾಂಗ್ಲಾದೇಶ, ನೇಪಾಲ, ಶ್ರೀಲಂಕಾ, ಥಾಯ್ಲೆಂಡ್‌ ಹಾಗೂ ಮ್ಯಾನ್ಮಾರ್‌ ಒಳಗೊಂಡ  ಬಿಮ್‌ಸ್ಟೆಕ್‌' (ಬೆಂಗಾಲ್‌ ಇನಿಶಿಯೇಟಿವ್‌ ಫಾರ್‌ ಮಲ್ಟಿ ಸೆಕ್ಟೋರಲ್‌ ಟೆಕ್ನಿಕಲ್‌ ಆ್ಯಂಡ್‌ ಎಕನಾಮಿಕ್‌ ಕೋಆಪರೇಷನ್‌) ಹಾಗೂ ಬ್ರಿಕ್ಸ್‌ ಜತೆ ಸಭೆಯನ್ನೂ ಭಾರತ ಆಯೋಜಿಸುತ್ತಿದೆ. ಹೀಗಾಗಿ  ಬಿಮ್‌ಸ್ಟೆಕ್‌' ದೇಶದ ಪ್ರಧಾನ ಮಂತ್ರಿಗಳು ಕೂಡ ಗೋವಾಕ್ಕೆ ಆಗಮಿಸುತ್ತಿದ್ದಾರೆ.

ಎದುರು ನೋಡುತ್ತಿರುವೆ: ಬ್ರಿಕ್ಸ್‌ ಸಭೆ ಹಿನ್ನೆಲೆಯಲ್ಲಿ ಫೇಸ್‌ಬುಕ್‌ನಲ್ಲಿ ಹೇಳಿಕೆ ನೀಡಿರುವ ಪ್ರಧಾನಿ ಮೋದಿ, ಹೊಸ ಪಾಲುದಾರಿಕೆಯ ಸೇತುವೆ ನಿರ್ಮಾಣ ಮಾಡಲು ಹಾಗೂ ಈ ಭಾಗದಲ್ಲಿ ಬೇರುಬಿಟ್ಟಿರುವ ಸಮಸ್ಯೆಗಳಿಗೆ ಪರಿಹಾರ ಹುಡುಕುಲು ಬ್ರಿಕ್ಸ್‌ ಸಭೆಯನ್ನೇ ಎದುರು ನೋಡುತ್ತಿರುವುದಾಗಿ ತಿಳಿಸಿದ್ದಾರೆ.

ಭದ್ರತೆಗೆ ಕರ್ನಾಟಕ ಪೊಲೀಸರು: ಶೃಂಗದ ವೇಳೆ ಉಗ್ರರು ದಾಳಿ ನಡೆಸುವ ಭೀತಿ ಎದುರಾಗಿರುವ ಕಾರಣ ಗೋವಾದಾದ್ಯಂತ ಹಿಂದೆಂದೂ ಕಂಡು ಕೇಳರಿಯದ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಕರ್ನಾಟಕದ ಪೊಲೀಸರು ಕೂಡ ಭದ್ರತಾ ಕಾರ್ಯಕ್ಕೆ ಗೋವಾದಲ್ಲಿ ನಿಯೋಜನೆಯಾಗಿದ್ದಾರೆ.

Trending videos

Back to Top