CONNECT WITH US  

ವಾಯು ಪಡೆ,ಹೆಲಿಕಾಪ್ಟರ್‌ ಮೂಲಕ ನಗದು; ವಿತರಣ ಅವಧಿ 6 ದಿನಕ್ಕೆ ಇಳಿಕೆ

ಹೊಸದಿಲ್ಲಿ : 500 ರೂ. ಮತ್ತು 1,000 ರೂ. ಕರೆನ್ಸಿ ನೋಟುಗಳ ಅಪನಗದೀಕರಣದಿಂದ ದೇಶಾದ್ಯಂತ ಉಂಟಾಗಿರುವ ನಗದು ಹಣದ ತೀವ್ರ ಕೊರತೆಯನ್ನು ಸಮರೋಪಾದಿಯಲ್ಲಿ ನಿಭಾಯಿಸುವ ನಿಟ್ಟಿನಲ್ಲಿ ಸರಕಾರ ಇದೀಗ ಹೆಲಿಕಾಪ್ಟರ್‌ ಹಾಗೂ ವಾಯು ಪಡೆ ವಿಮಾನಗಳನ್ನು ಬಳಸಿಕೊಳ್ಳಲು ಮುಂದಾಗಿದೆ.

ಇದರಿಂದಾಗಿ ನೋಟು ಮುದ್ರಣದಿಂದ ತೊಡಗಿ ಅದನ್ನು ವಿತರಣ ಕೇಂದ್ರಗಳಿಗೆ ತಲುಪಿಸುವ ತನಕದ 21 ದಿನಗಳ ಸಾರಿಗೆ ಅವಧಿ ಇದೀಗ ಕೇವಲ ಆರು ದಿನಗಳಿಗೆ ಇಳಿದಿದೆ. ಮುಂದಿನ ದಿನಗಳಲ್ಲಿ ಈ ಅವಧಿಯನ್ನು ಇನ್ನೂ ಕಡಿತಗೊಳಿಸಲು ಸರಕಾರ ಉದ್ದೇಶಿಸಿದೆ ಎಂದು ಟೈಮ್ಸ್‌ ಆಫ್ ಇಂಡಿಯಾ ವರದಿ ಮಾಡಿದೆ. 

ದೇಶದ ನಗರ ಪ್ರದೇಶಗಳಲ್ಲೀಗ ಹೊಸ ನೋಟುಗಳ ಪರ್ಯಾಪ್ತ ಲಭ್ಯತೆಯು ಗಮನಾರ್ಹವಾಗಿ ಸುಧಾರಿಸಿದೆ. ಆದರೆ ಗ್ರಾಮೀಣ ಭಾಗಗಳಲ್ಲಿ ಈಗಲೂ ನಗದು ಕೊರತೆ ಹಾಗೆಯೇ ಉಳಿದಿದೆ.

ಅಂತೆಯೇ ಸರಕಾರ ಈಗ ಗ್ರಾಮೀಣ ಭಾಗಗಳಿಗೆ ಹೊಸ ನೋಟುಗಳ ಪೂರೈಕೆಗೆ ಆದ್ಯತೆ ನೀಡುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಎಲ್ಲೆಡೆ ಹೊಸ ನೋಟುಗಳ ಪರ್ಯಾಪ್ತ ಲಭ್ಯತೆಯು ಕಂಡುಬರಲಿದೆ; ನಗದು ಹಣ ಹಾಹಾಕಾರ ನಿವಾರಣೆಗೊಳ್ಳಲಿದೆ ಎಂದು ಸರಕಾರ ಹೇಳಿದೆ.

ನ.8ರಂದು ಪ್ರಧಾನಿ ನರೇಂದ್ರ ಮೋದಿ ಅವರು 500 ಮತ್ತು 1,000 ರೂ. ನೋಟುಗಳ ಅಪನಗದೀಕರಣ ಕೈಗೊಳ್ಳುವುದಕ್ಕೆ ಮುನ್ನ ಇದ್ದ ಮಾಮೂಲಿ ಸ್ಥಿತಿಯು ದೇಶಾದ್ಯಂತ ಜನವರಿ 15ರ ಒಳಗೆ ನೆಲೆಗೊಳ್ಳುವ ವಿಶ್ವಾಸ ಸರಕಾರಕ್ಕೆ ಇದೆ ಎಂದು ಉನ್ನತ ಸರಕಾರಿ ಮೂಲಗಳನ್ನು ವರದಿಯು ಉಲ್ಲೇಖೀಸಿದೆ. 

ನೋಟು ಅಪನಗದೀಕರಣದಿಂದ ಸರಕಾರಕ್ಕೆ ಸಿಗುವ ಲಾಭವನ್ನು ಪೂರ್ಣವಾಗಿ ಬ್ಯಾಂಕುಗಳ ಬಂಡವಾಳ ಮರುಪೂರಣಕ್ಕೆ, ಮೂಲ ಸೌಕರ್ಯ ನಿರ್ಮಾಣಕ್ಕೆ, ಸೇನೆಗೆ ಅವಶ್ಯವಿರುವ ಅತ್ಯಾಧುನಿಕ ಶಸ್ತ್ರಾಸ್ತ್ರ ಖರೀದಿಗೆ ವಿನಿಯೋಗಿಸಲಾಗುವುದು. ನೋಟು ಅಪನಗದೀಕರಣಕ್ಕೆ ಮುನ್ನ ಆರ್‌ ಬಿ ಐ ದೇಶದ ಹಣಕಾಸು ವ್ಯವಸ್ಥೆಯಲ್ಲಿ ತುಂಬಿದ್ದ ಉನ್ನತ ಮೌಲ್ಯದ ನೋಟುಗಳ ಬೃಹತ್‌ ಪ್ರಮಾಣವು ಈಗಿನ್ನು ಮರಳಿ ಬಾರದು; ಹಾಗಾಗಿ ಆರ್‌ ಬಿ ಐನ ಬಾಧ್ಯತೆಯು ಗಮನಾರ್ಹವಾಗಿ ಕಡಿಮೆಯಾಗಲಿದೆ; ತತ್‌ಪರಿಣಾಮವಾಗಿ ಸರಕಾರಕ್ಕೆ ಬೃಹತ್‌ ಮೊತ್ತದ ಡಿವಿಡೆಂಡ್‌ ನೀಡುವುದು ಆರ್‌ಬಿಐಗೆ ಸಾಧ್ಯವಾಗಲಿದೆ ಎಂದು ಮೂಲಗಳು ಹೇಳಿವೆ. 

ಬ್ಯಾಂಕಗಳಲ್ಲಿ ಜನರು ಅಪಾರ ಮೊತ್ತದ ನಿಷೇಧಿತ ನೋಟುಗಳನ್ನು ಜಮೆ ಮಾಡುತ್ತಿರುವುದರಿಂದ ಇದಕ್ಕೆ ಸಮನಾದ ಪ್ರಮಾಣದಲ್ಲಿ ಹೊಸ ನಗದನ್ನು ಹೊಂದುವ ಬ್ಯಾಂಕುಗಳ ಸಾಲ ನೀಡಿಕೆ ಸಾಮರ್ಥ್ಯವು ದೊಡ್ಡ ಮಟ್ಟದಲ್ಲಿ ಹೆಚ್ಚುವುದನ್ನು ನಿರೀಕ್ಷಿಸಲಾಗಿದೆ. 

Trending videos

Back to Top