CONNECT WITH US  

2.5 ಲಕ್ಷ ಮೇಲ್ಪಟ್ಟು ಜಮೆ ಮಾಡಿದವರಿಗೆ ಬಿಸಿ ಶುರು

ಹೊಸದಿಲ್ಲಿ: ಅಪನಗದೀಕರಣ ಪ್ರಕ್ರಿಯೆ ಮುಕ್ತಾಯ ಗೊಂಡ ಬೆನ್ನಲ್ಲೇ ಕಪ್ಪು ಕುಳಗಳ ಕಳ್ಳ ವ್ಯವಹಾರಗಳನ್ನು ಬಯಲಿಗೆಳೆಯುವ ಕೆಲಸಕ್ಕೆ ಕೇಂದ್ರ ಸರಕಾರ ಕೈ ಹಾಕಿದೆ. ನೋಟು ರದ್ದತಿ ನಿರ್ಧಾರ ಘೋಷಣೆಯಾದ ದಿನದಿಂದ ಅಂದರೆ ನ.8ರಿಂದ ಡಿ.30ರವರೆಗೆ 2.5 ಲಕ್ಷ ರೂ. ಮೇಲ್ಪಟ್ಟು ಹಣವನ್ನು ಖಾತೆಗೆ ಜಮೆ ಮಾಡಿದವರ ವಿವರಗಳನ್ನು ಜ.15ರೊಳಗೆ ಸಲ್ಲಿಸುವಂತೆ ಬ್ಯಾಂಕುಗಳು ಹಾಗೂ ಅಂಚೆ ಕಚೇರಿಗಳಿಗೆ ಸೂಚನೆ ನೀಡಿದೆ.

ಮತ್ತೂಂದೆಡೆ, 2.5 ಲಕ್ಷ ರೂ. ಮೇಲ್ಪಟ್ಟು ಜಮೆ ಮಾಡಿದ ವ್ಯಕ್ತಿಗಳು ಅಪನಗದೀಕರಣಕ್ಕೂ ಮುನ್ನ ಅಂದರೆ ಏ.1ರಿಂದ ನ.9ರವರೆಗೆ ನಡೆಸಿರುವ ವ್ಯವಹಾರದ ಮಾಹಿತಿಯನ್ನೂ ನೀಡಲು ಸರಕಾರ ನಿರ್ದೇಶನ ನೀಡಿದೆ. ಈ ವ್ಯಕ್ತಿಗಳ ಖಾತೆಗೆ ಏಕಾಏಕಿ ಹಣ ಹರಿದುಬಂದಿದೆಯೇ? ಅಥವಾ ಖಾತೆಯಲ್ಲಿ ಹಣಕಾಸು ವ್ಯವಹಾರ ಮೊದಲಿನಿಂದಲೂ ನಡೆಯುತ್ತಿದೆಯೇ ಎಂಬುದನ್ನು ತುಲನೆ ಮಾಡುವ ಪ್ರಕ್ರಿಯೆ ಇದಾಗಿರಬಹುದು ಎಂದು ಹೇಳಲಾಗಿದೆ.

ನ.9ರಿಂದ ಡಿ.30ರವರೆಗಿನ ಅವಧಿಯಲ್ಲಿ ಚಾಲ್ತಿ ಖಾತೆಗಳಲ್ಲಿ 12.5 ಲಕ್ಷ ರೂ. ಹಾಗೂ ಯಾವುದೇ ವ್ಯಕ್ತಿಯ ಒಂದು ಅಥವಾ ಒಂದಕ್ಕಿಂತ ಹೆಚ್ಚು ಖಾತೆಗಳಲ್ಲಿ (ಚಾಲ್ತಿ ಖಾತೆರಹಿತ) 2.5 ಲಕ್ಷ ರೂ. ಮೇಲ್ಪಟ್ಟು ವ್ಯವಹಾರ ನಡೆದಿದ್ದರೆ, ಅಂತಹ ವ್ಯಕ್ತಿಗಳು 2016ರ ಏ.1ರಿಂದ ಹಾಗೂ 2016ರ ನ.9ರವರೆಗೆ ಮಾಡಿರುವ ಹಣ ಜಮೆ ವಿವರವನ್ನು ನೀಡಬೇಕು ಎಂದು ಬ್ಯಾಂಕು ಹಾಗೂ ಅಂಚೆ ಕಚೇರಿಗಳಿಗೆ ಸೂಚಿಸಲಾಗಿದೆ. ಕೇಂದ್ರೀಯ ನೇರ ತೆರಿಗೆಗಳ ಮಂಡಳಿ ಶುಕ್ರವಾರ ಹೊರಡಿಸಿರುವ ಅಧಿಸೂಚನೆಯಲ್ಲಿ ಈ ಮಾಹಿತಿ ಇದೆ.

ಪಾನ್‌ ಸಂಖ್ಯೆ ಫೆ.28ರೊಳಗೆ ಸಲ್ಲಿಸಿ
ಹೊಸದಿಲ್ಲಿ:
ಕಪ್ಪು ಹಣದ ವಿರುದ್ಧ ಸಮರ ಸಾರಿರುವ ಕೇಂದ್ರ ಸರಕಾರ ಇದೀಗ ಪಾನ್‌ ಸಂಖ್ಯೆ ರಹಿತ ಖಾತೆಗಳ ಮೇಲೆ ನಿಗಾ ಇಡಲು ಮುಂದಾಗಿದೆ. ಬ್ಯಾಂಕುಗಳು ಹಾಗೂ ಅಂಚೆ ಕಚೇರಿಗಳಲ್ಲಿ ಉಳಿತಾಯ ಖಾತೆ ಹೊಂದಿದ್ದರೂ ಇದುವರೆಗೂ ಪಾನ್‌ ಅಥವಾ ಫಾರ್ಮ್ 60 ಕೊಡದ ಗ್ರಾಹಕರು ಫೆ.28ರೊಳಗೆ ಸಲ್ಲಿಸಬೇಕು ಎಂದು ಸೂಚಿಸಿದೆ. 50 ಸಾವಿರ ರೂ. ಮೇಲ್ಪಟ್ಟ ಹಣವನ್ನು ಖಾತೆಗೆ ಜಮೆ ಮಾಡುವಾಗ ಪಾನ್‌ ಸಂಖ್ಯೆ ನಮೂದಿಸುವುದು ಅಥವಾ ಫಾರ್ಮ್ 60 ನೀಡುವುದು ಈಗಾಗಲೇ ಕಡ್ಡಾಯವಿದೆ.

Trending videos

Back to Top