CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಹಿಂಸೆಯ ಬಳಿಕ ದಿಲ್ಲಿಯಲ್ಲಿ ಜಾಟ್‌ ಪ್ರತಿಭಟನೆ ಮುಂದಕ್ಕೆ

ಹರಿಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌.

ಹೊಸದಿಲ್ಲಿ: ದಿಲ್ಲಿ ನಿವಾಸಿಗಳಿಗೆ ದೊಡ್ಡ ರಿಲೀಫ್ ಎಂಬಂತೆ ಸೋಮವಾರ ನಡೆಯಬೇಕಿದ್ದ ಜಾಟ್‌ ಸಮುದಾಯದ ಪ್ರತಿಭಟನೆ ಮುಂದೂಡಲ್ಪಟ್ಟಿದೆ. ಸರಕಾರಿ ಉದ್ಯೋಗ ಮತ್ತು ಶಿಕ್ಷಣ ಸಂಸ್ಥೆಗಳಲ್ಲಿ ಮೀಸಲಾತಿಗೆ ಆಗ್ರಹಿಸಿ ಜಾಟ್‌ ಸಮುದಾಯವು ಸಂಸತ್‌ಭವನದ ಮುಂದೆ ನಡೆಸಲುದ್ದೇಶಿಸಿದ್ದ ಬೃಹತ್‌ ಪ್ರತಿಭಟನೆಯನ್ನು ಮುಂದೂಡುವುದಾಗಿ ಪ್ರತಿಭಟನಕಾರರು ಹೇಳಿದ್ದಾರೆ. ಹರಿಯಾಣ ಸಿಎಂ ಮನೋಹರ್‌ ಲಾಲ್‌ ಖಟ್ಟರ್‌ರನ್ನು ಭೇಟಿಯಾದ ಬಳಿಕ ಜಾಟ್‌ ನಾಯಕರು ಈ ನಿರ್ಧಾರ ಕೈಗೊಂಡಿದ್ದಾರೆ. ಹಿಂದುಳಿದ ವರ್ಗಗಳ ರಾಷ್ಟ್ರೀಯ ಆಯೋಗಕ್ಕೆ ಮುಖ್ಯಸ್ಥ ಹಾಗೂ ಸದಸ್ಯರನ್ನು ನೇಮಕ ಮಾಡಿದ ಬಳಿಕ ಜಾಟ್‌ ಮೀಸಲು ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಸಿಎಂ ಖಟ್ಟರ್‌ ಭರವಸೆ ನೀಡಿದ ಹಿನ್ನೆಲೆಯಲ್ಲಿ ಪ್ರತಿಭಟನೆ ಮುಂದೂಡಲಾಗಿದೆ. ಸಂಧಾನ ಮಾತುಕತೆಯ ವೇಳೆ ಕೇಂದ್ರ ಸಚಿವ ಬೀರೇಂದರ್‌ ಸಿಂಗ್‌ ಹಾಗೂ ಪಿ.ಪಿ. ಚೌಧರಿ ಕೂಡ ಉಪಸ್ಥಿತರಿದ್ದರು.

2 ಬಸ್‌ಗಳಿಗೆ ಬೆಂಕಿ: ಇದಕ್ಕೂ ಮೊದಲು ಹರ್ಯಾಣದ ಫ‌ತೇಹಾಬಾದ್‌ನಲ್ಲಿ ಜಾಟ್‌ ಸಮುದಾಯದ ಮಂದಿ ಹಿಂಸಾಚಾರಕ್ಕಿಳಿದಿದ್ದರು. ಪ್ರತಿಭಟನಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಲ್ಲದೆ, ಎರಡು ಬಸ್‌ಗಳಿಗೆ ಬೆಂಕಿ ಹಚ್ಚಿದರು. ಘಟನೆಯಲ್ಲಿ ಡಿಎಸ್ಪಿ ಗುರುದಯಾಳ್‌ ಸಿಂಗ್‌ ಸೇರಿದಂತೆ ಭಾರೀ ಸಂಖ್ಯೆಯ ಪೊಲೀಸರು ಗಾಯಗೊಂಡಿದ್ದರು. ದಿಲ್ಲಿಯಲ್ಲಿ ಮುನ್ನಚ್ಚರಿಕೆ ಕ್ರಮವಾಗಿ ಭದ್ರತೆ ಮುಂದುವರಿಸಲಾಗಿದೆ.

Back to Top