CONNECT WITH US  
Please Select Your Default Edition         ಕರ್ನಾಟಕ ಆವೃತ್ತಿ    |     ಕರಾವಳಿ ಆವೃತ್ತಿ     |     English Edition

ಯೋಗಿ ಸರ್ಕಾರದ ಮೊದಲ ದಿನ; 2ಕಸಾಯಿಖಾನೆ ಬಂದ್, ಕ್ರೈಂಗೆ ಕಡಿವಾಣ ಹಾಕಿ

ಅಲಹಾಬಾದ್: ಉತ್ತರಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಬೆನ್ನಲ್ಲೇ ಯೋಗಿಯ ಯುಗ ಆರಂಭವಾಗಿದ್ದು, ಸೋಮವಾರ ಅಕ್ರಮವಾಗಿ ನಡೆಸುತ್ತಿದ್ದ 2 ಕಸಾಯಿ ಖಾನೆಗೆ ಅಲಹಾಬಾದ್ ನಗರ್ ನಿಗಮ್ ಅಧಿಕಾರಿಗಳು  ಬೀಗ ಹಾಕಿದ್ದಾರೆ.

ಸೋಮವಾರ ತಮ್ಮ ಆಡಳಿತದ ಮೊದಲ ದಿನ ಆರಂಭಿಸಿದ ಸಿಎಂ ಯೋಗಿ ಅವರು ಮಾಯಾವತಿ ಪಕ್ಷದ ಮೊಹಮ್ಮದ್ ಶಮಿಯನ್ನು ಹತ್ಯೆಗೈದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ಅಧಿಕಾರಿಗಳ ಜೊತೆ ಚರ್ಚೆ ನಡೆಸಿದರು.

ಅಷ್ಟೇ ಅಲ್ಲ ಉತ್ತರಪ್ರದೇಶದಲ್ಲಿ ಅಪರಾಧ ಕೃತ್ಯ ಮಟ್ಟಹಾಕುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಪೊಲೀಸ್ ವರಿಷ್ಠಾಧಿಕಾರಿ ಜಾವೇದ್ ಅಹ್ಮದ್ ಅವರಿಗೆ ಸಿಎಂ ಯೋಗಿ ಸೂಚನೆ ನೀಡಿರುವುದಾಗಿ ವರದಿ ವಿವರಿಸಿದೆ.

ಭಾನುವಾರ ಸಂತ, ರಾಜಕಾರಣಿ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿಯಾಗಿ ಹಾಗೂ ಕೇಶವ್ ಪ್ರಸಾದ್ ಮೌರ್ಯ ಮತ್ತು ದಿನೇಶ್ ಶರ್ಮಾ ಉಪ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರು.

ಸಿಎಂ ಯೋಗಿ ಅವರ ಟಾಪ್ 10 ಹೈಲೈಟ್ಸ್:
1)ಕಳೆದ ರಾತ್ರಿ ಕೊಲೆಯಾದ ಬಿಎಸ್ಪಿ ಮುಖಂಡ ಮೊಹಮ್ಮದ್ ಶಮಿ ಅವರ ಹಂತಕರನ್ನು ಕೂಡಲೇ ಬಂಧಿಸುವಂತೆ ಸಿಎಂ ಯೋಗಿ ಅವರು ಪೊಲೀಸ್ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಪೊಲೀಸ್ ವ್ಯವಸ್ಥೆ ಯುಪಿಯಲ್ಲಿ ಮತ್ತಷ್ಟು ಸುಧಾರಿಸುವ ಬಗ್ಗೆ 15 ದಿನದೊಳಗೆ ನೀಲನಕ್ಷೆ ತಯಾರಿಸುವಂತೆಯೂ ಆದೇಶ ನೀಡಿದ್ದಾರೆ.

2)ಕಸಾಯಿ ಖಾನೆಗಳನ್ನು ಮುಚ್ಚಿಸುವುದಾಗಿ ಚುನಾವಣೆ ವೇಳೆ ನೀಡಿದ್ದ ಭರವಸೆಯಂತೆ ಬಿಜೆಪಿ ನಡೆದುಕೊಳ್ಳಲಿದೆ, ಆ ನಿಟ್ಟಿನಲ್ಲಿ ಮೊದಲ ದಿನವೇ ಹೊಸ ಸರ್ಕಾರ ಕೈಗೊಂಡ ತೀರ್ಮಾನ ಉತ್ತಮ ಸಂದೇಶ ನೀಡಿದೆ ಎಂದು ಉಪ ಮುಖ್ಯಮಂತ್ರಿ ಕೆಪಿ ಮೌರ್ಯ ತಿಳಿಸಿದ್ದಾರೆ.

3)ಅಲಹಾಬಾದ್ ನಲ್ಲಿ ಅಕ್ರಮವಾಗಿ ನಡೆಸುತ್ತಿದ್ದ 2 ಕಸಾಯಿಖಾನೆಗಳನ್ನು ಬಂದ್ ಮಾಡಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಇಂತಹ ಕಸಾಯಿಖಾನೆ ಮುಚ್ಚಿಸಬೇಕೆಂದು ಯೋಗಿ ಆದಿತ್ಯನಾಥ್ ಈ ಹಿಂದೆಯೂ ಹಲವು ಬಾರಿ ಹೇಳಿದ್ದರು. ಆದರೆ ಈ ಕ್ರಮದಿಂದ ಆದಾಯಕ್ಕೆ ಹೊಡೆತ ಬೀಳಲಿದ್ದು, ಸಾವಿರಾರು ಮಂದಿ ಬದುಕಿಗೆ ತೊಂದರೆಯಾಗಲಿದೆ ಎಂದು ಮಾಂಸದಂಗಡಿ ವ್ಯಾಪಾರಸ್ಥರು ಆತಂಕವ್ಯಕ್ತಪಡಿಸಿದ್ದಾರೆ.

4)ಸೋಮವಾರ ಬೆಳಗ್ಗೆ ವಿವಿಐಪಿ ಅತಿಥಿಗೃಹದಲ್ಲಿ ಸರ್ಕಾರದ ಮುಖ್ಯಕಾರ್ಯದರ್ಶಿ ರಾಹುಲ್ ಭಟ್ನಾಗರ್ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಅದೇ ರೀತಿ ರಾಜ್ಯಪಾಲ ರಾಮ್ ನಾಯ್ಕ್ ಅವರನ್ನು ಭೇಟಿಯಾಗಿದ್ದರು.

5)ಭಾನುವಾರ ಸಿಎಂ ಯೋಗಿ ಆದಿತ್ಯನಾಥ್ ಅವರು ಸಾಂಕೇತಿಕವಾಗಿ ಅಧಿಕಾರ ಸ್ವೀಕರಿಸಿದ ಬಳಿಕ ನೂತನ ಸಚಿವ ಸಂಪುಟದ ಜೊತೆ ಮಾತುಕತೆ ನಡೆಸಿ, 15 ದಿನದೊಳಗೆ ಎಲ್ಲಾ ಸಚಿವರು ತಮ್ಮ ಆಸ್ತಿ, ಪಾಸ್ತಿ ವಿವರ ನೀಡುವಂತೆ ಸೂಚಿಸಿದ್ದರು.

6)ಉತ್ತರಪ್ರದೇಶ ಸರ್ಕಾರದ ವಕ್ತಾರರಾದ ಶ್ರೀಕಾಂತ್ ಶರ್ಮಾ ಮತ್ತು ಸಿದ್ದಾರ್ಥ ನಾಥ್ ಸಿಂಗ್ ಮಾತ್ರ ಮಾಧ್ಯಮಗಳ ಜೊತೆ ಮಾತನಾಡಬೇಕು. ಯಾವುದೇ ಕಾರಣಕ್ಕೂ ಸಚಿವರು ಮಾಧ್ಯಮದವರ ಜೊತೆ ಮಾತನಾಡುವಂತಿಲ್ಲ ಎಂಬ ಕಠಿಣ ಸಂದೇಶ ರವಾನಿಸಲಾಗಿದೆ.

7)ಆಡಳಿತಾರೂಢ ಸರ್ಕಾರದ ಜೊತೆ ಆಯ್ಕೆಯಾದ ಶಾಸಕರು ಯಾವ ರೀತಿ ಸಹಕಾರ ನೀಡಬೇಕು ಎಂಬ ಬಗ್ಗೆ ತರಬೇತುಗೊಳಿಸುವ ನಿಟ್ಟಿನಲ್ಲಿ ಉತ್ತರಪ್ರದೇಶದ ಇಬ್ಬರು ಹಿರಿಯ ಸಚಿವರಿಗೆ ಉಸ್ತುವಾರಿ ವಹಿಸಲಾಗಿದೆ.

8)ಲೋಕ್ ಭವನದ ಆಡಿಟೋರಿಯಂನಲ್ಲಿ ಎಲ್ಲಾ ಇಲಾಖೆಯ ಅಧಿಕಾರಿಗಳನ್ನು ಸಿಎಂ ಹಾಗೂ ಉಪಮುಖ್ಯಮಂತ್ರಿಗಳು ಭೇಟಿಯಾಗಲಿದ್ದಾರೆ. ಯೋಗಿ ಅವರು ಅಧಿಕಾರವಹಿಸಿಕೊಂಡ ಬೆನ್ನಲ್ಲೇ ಆಯಾಕಟ್ಟಿನ ಇಲಾಖೆಯಲ್ಲಿ ಕುಳಿತುಕೊಂಡಿದ್ದ ಅಧಿಕಾರಿಗಳನ್ನು ವರ್ಗಾಯಿಸಲಾಗುವುದು ಎಂಬ ಊಹಾಪೋಹ ಹರಿದಾಡುತ್ತಿದೆ.

9)ನೂತನ ಸಿಎಂ ಯೋಗಿ ಅವರ ನೂತನ ಅಧಿಕೃತ ನಿವಾಸ ಲಕ್ನೋದ ಕಾಳಿದಾಸ್ ಮಾರ್ಗಕ್ಕೆ ಬದಲಾವಣೆಯಾಗಲಿದೆ. ಗೋರಖ್ ಪುರದ ಏಳು ಮಂದಿ ಪುರೋಹಿತರು ಸಂಪ್ರದಾಯದ ಪ್ರಕಾರ ಪೂಜೆ, ಹೋಮ ನಡೆಸಿದ ಬಳಿಕ ಯೋಗಿ ಅವರು ನಿವಾಸದಲ್ಲಿ ವಾಸ ಆರಂಭಿಸಲಿದ್ದಾರೆ.

10)5 ಬಾರಿ ಗೋರಖ್ ಪುರ್ ಕ್ಷೇತ್ರದಿಂದ ಸಂಸದರಾಗಿ ಆಯ್ಕೆಯಾಗಿರುವ ಯೋಗಿ ಆದಿತ್ಯನಾಥ್ ಅವರು ತಮ್ಮ ಕ್ಷೇತ್ರದಲ್ಲಿ ಗೋರಖ್ ನಾಥ್ ದೇವಾಲಯದ ಮುಖ್ಯ ಅರ್ಚಕರಾಗಿದ್ದಾರೆ.

Back to Top