CONNECT WITH US  

ರಾಷ್ಟ್ರಪತಿ, ಪ್ರಧಾನಿ, ಸಿಎಂಗೂ ಇಲ್ಲ ಕೆಂಪು ದೀಪದ ಕಾರು

ನವದೆಹಲಿ: ಟ್ರಾಫಿಕ್‌ ಸಿಗ್ನಲ್‌ನ ಕೆಂಪು ದೀಪದ ನೆರಳಲ್ಲಿ ನಿಂತಿರುವಾಗ, ಕೆಂಪು, ನೀಲಿ ದೀಪ ನೆತ್ತಿಗೇರಿಸಿಕೊಂಡ ಐದಾರು ವಾಹನಗಳು, ತಲೆ ಚಿಟ್ಟೆನಿಸುವ ಸೈರನ್‌ ಸದ್ದಿನೊಂದಿಗೆ ಸಾಲಾಗಿ ಹೋಗುವುದನ್ನು ಕಂಡು ಬೈದುಕೊಳ್ಳುವ ದಿನಗಳು ಇನ್ನು ಇತಿಹಾಸದ ಪುಟ ಸೇರಲಿವೆ.

ಕಾರಣ ಇಷ್ಟೆ, ದೇಶದಲ್ಲಿ ಇನ್ನು "ವಿಐಪಿಗಳ ದರ್ಪ' ಪ್ರದರ್ಶಿಸುವ ಕೆಂಪು ದೀಪ ಮತ್ತು ಸೈರನ್‌ ಅನ್ನು ವಾಹನಗಳಲ್ಲಿ ಬಳಸುವ ಸಂಸ್ಕೃತಿಗೆ ತೆರೆ ಎಳೆಯುವ ಐತಿಹಾಸಿಕ ನಿರ್ಣಯವೊಂದನ್ನು ಕೇಂದ್ರ ಸರ್ಕಾರ ಕೈಗೊಂಡಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು, ಲೋಕಸಭೆ ಸ್ಪೀಕರ್‌, ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಸೇರಿದಂತೆ ಯಾವುದೇ ಅತಿ ಗಣ್ಯ ವ್ಯಕ್ತಿಗಳ (ವಿವಿಐಪಿ)ಗಳ ವಾಹನಗಳ ಮೇಲೆ  ಮೇ 1ರಿಂದ ಕೆಂಪು ದೀಪ (ಬೀಕನ್‌ ಲೈಟ್‌)  ಕಾಣುವುದಿಲ್ಲ. ಅಷ್ಟೇ ಅಲ್ಲ, ಉನ್ನತ ಅಧಿಕಾರಿಗಳು, ಸಚಿವರು ಮತ್ತು  ಜಡ್ಜ್ಗಳು ಕೂಡ ತಮ್ಮ ವಾಹನಗಳ ಮೇಲೆ ಬೀಕನ್‌ ದೀಪಗಳನ್ನು ಬಳಸುವುದಕ್ಕೆ ನಿಷೇಧ ಹೇರಲಾಗಿದೆ.

ಕೇಂದ್ರ ಅಥವಾ ರಾಜ್ಯ ಸರ್ಕಾರಗಳಿಗೆ ಬೀಕನ್‌ ಲೈಟ್‌ನ  ಕಾರುಗಳನ್ನು ಹೊಂದುವ ಬಗ್ಗೆ ಅಥವಾ ಈ ಬಗ್ಗೆ ಅನುಮತಿ ನೀಡಲು ಅಧಿಕಾರವೇ ಇರುವುದಿಲ್ಲ ಎಂದು ಕೇಂದ್ರ ಹಣಕಾಸು ಸಚಿವ ಸಂಪುಟ ಸಭೆಯ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಈ ನಿಟ್ಟಿನಲ್ಲಿ ಕೇಂದ್ರ ಮೋಟಾರು ವಾಹನಗಳ ಕಾಯ್ದೆಯಲ್ಲಿ ಕೂಡ ಶೀಘ್ರವೇ ತಿದ್ದುಪಡಿ ತರಲಾಗುತ್ತದೆ ಎಂದು ಅವರು ಹೇಳಿದ್ದಾರೆ.

"ಈ ಹೊಸ ನಿಯಮದನ್ವಯ ಕೇಂದ್ರ ಅಥವಾ ರಾಜ್ಯ ಸರ್ಕಾರದ ಯಾವುದೇ ಸಚಿವರು ಇನ್ನುಮುಂದೆ ಕೆಂಪು, ನೀಲಿ ಬೀಕನ್‌ ದೀಪ ಬಳಸುವಂತಿಲ್ಲ. ವಿಐಪಿಗಳ ಕಾರುಗಳಿಗೆ ಬಳಸುತ್ತಿದ್ದ ನೀಲಿ ದೀಪ ಕೂಡ ಇನ್ನುಮುಂದೆ ತುರ್ತು ಸೇವೆ ವಾಹನಗಳಲ್ಲಿ ಮಾತ್ರ  ಬಳಕೆಯಾಗಲಿದೆ,'' ಎಂದು ಸ್ಪಷ್ಟಪಡಿಸಿದರು.

ಮೋದಿ ಆದೇಶದಂತೆ ಕ್ರಮ:  ಕೆಂಪು ದೀಪದ ಕಾರುಗಳು ವಿವಿಐಪಿ ಸಂಸ್ಕೃತಿ ಅಂದರೆ ದರ್ಪವನ್ನು ತೋರಿಸಿದಂತಾಗುತ್ತದೆ. ಅದಕ್ಕೆ ಮುಕ್ತಾಯ ಹಾಡಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಹೇಳಿದ್ದರು. ಅದಕ್ಕೆ ಅನುಗುಣವಾಗಿ ನಿಯಮ ರೂಪಿಸಿ ನಿರ್ಧಾರ ಕೈಗೊಳ್ಳಲಾಗಿದೆ ಎಂದರು ನಿತಿನ್‌ ಗಡ್ಕರಿ. "ನಮ್ಮದು ಜನಸಾಮಾನ್ಯರ ಸರ್ಕಾರವಾಗಿದೆ ಎಂದರು.

ಸೈರನ್‌ ಬಳಕೆಯೂ ಸರಿಯಲ್ಲ:  ಕೆಲವು ರಾಜ್ಯಗಳಲ್ಲಿ ಸಚಿವರು ತಮ್ಮ ಕಾರುಗಳಿಗೆ ಸೈರನ್‌ ಬಳಕೆ ಮಾಡುತ್ತಾರೆ. ಇದು ಸರಿಯಲ್ಲ. ಕೇವಲ ಬೆಂಗಾವಲು ಪಡೆಯ ವಾಹನಗಳು ಮಾತ್ರ ಬಳಕೆ ಮಾಡಬಹುದು. ಜತೆಗೆ ಶಾಸಕರೂ ವಿವಿಧ ಮಾದರಿಯ ಬೀಕನ್‌ ಲೈಟ್‌ಗಳನ್ನು ಅಳವಡಿಸುತ್ತಾರೆ. ಇದೂ ಸರಿಯಲ್ಲ ಎಂದರು. ಅದನ್ನು ಮೀರಿ ನಡೆದರೆ ಕಾನೂನಿನ ಅನ್ವಯ ಕ್ರಮಕೈಗೊಳ್ಳಲಾಗುತ್ತದೆ ಎಂದರು.

ಪ್ರಧಾನಿ ಟೆಸ್ಟ್‌ಡ್ರೈವ್‌!
ಈ ಆದೇಶ ಹೊರಬೀಳುವ ಮುಂಚೆ ಪ್ರಧಾನಿ ನರೇಂದ್ರ ಮೋದಿ ಕೆಂಪುದೀಪ ಇಲ್ಲದೆ ಪ್ರಯಾಣಿಸಿ ಟೆಸ್ಟ್‌ ಡ್ರೈವ್‌ ಮಾಡಿದ್ದರು! ಕೆಲ ದಿನಗಳ ಹಿಂದೆ ಬಾಂಗ್ಲಾದೇಶ ಪ್ರಧಾನಿ ಶೇಕ್‌ ಹಸೀನಾ ಭಾರತ ಪ್ರವಾಸಕ್ಕೆ ಬಂದಿದ್ದಾಗ ಸ್ವತಃ ವಿಮಾನನಿಲ್ದಾಣಕ್ಕೆ ತೆರಳಿದ್ದ ಪ್ರಧಾನಿ, ಅವರನ್ನು ಜನಸಾಮಾನ್ಯರ ಕಾರಿನಂತೆ ಟ್ರಾಫಿಕ್‌ ನಡುವೆ ಕರೆತಂದಿದ್ದರು.

ಸಚಿವ ಗಡ್ಕರಿ ಫ‌ಸ್ಟ್‌
ಕೇಂದ್ರ ಸಂಪುಟದಲ್ಲಿ ನಿರ್ಧಾರ ಕೈಗೊಳ್ಳುತ್ತಲೇ ಸರ್ಕಾರಿ ಕಾರ್‌ನಿಂದ ಬೀಕನ್‌ ಲೈಟ್‌ ಅನ್ನು ಮೊದಲು ತೆಗೆಸಿದ ಸಚಿವ ನಿತಿನ್‌ ಗಡ್ಕರಿ. ಇದಾದ ಬಳಿಕ ಕೇಂದ್ರ ಸಂಸ್ಕೃತಿ ಸಚಿವ ಮಹೇಶ್‌ ಶರ್ಮಾ ಕೂಡ ಅದೇ ನಿರ್ಧಾರ ಕೈಗೊಂಡರು. ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫ‌ಡ್ನವೀಸ್‌ ಕೂಡ ದೀಪವನ್ನು ತೆಗೆಸಿದ್ದಾರೆ. ಕೇಂದ್ರದ ನಿರ್ಧಾರಕ್ಕಿಂತ ಮೊದಲು ಪಂಜಾಬ್‌ನ ಕ್ಯಾ.ಅಮರೀಂದರ್‌ ಸಿಂಗ್‌ ನೇತೃತ್ವದ ಕಾಂಗ್ರೆಸ್‌ ಸರ್ಕಾರ ಮತ್ತು ಉತ್ತರ ಪ್ರದೇಶದಲ್ಲಿನ ಯೋಗಿ ಆದಿತ್ಯನಾಥ್‌ ನೇತೃತ್ವದ ಬಿಜೆಪಿ ಸರ್ಕಾರ ದೀಪದ ಕಾರುಗಳು ಬೇಡ ಎಂಬ ನಿರ್ಧಾರ ಕೈಗೊಂಡಿತ್ತು.

ಸುಪ್ರೀಂ ಕೂಡ ಹೇಳಿತ್ತು
ಕೆಂಪು ದೀಪಗಳ ಬಳಕೆಗೆ ತಿಲಾಂಜಲಿ ಇಡುವ ಕೇಂದ್ರ ಸರ್ಕಾರದ ಈಗಿನ ಕ್ರಮಕ್ಕೂ ಮೊದಲೇ 2013ರಲ್ಲಿ ಸುಪ್ರೀಂ ಕೋರ್ಟ್‌ ಈ ಬಗ್ಗೆ ಆದೇಶ ಹೊರಡಿಸಿತ್ತು. ಕೆಂಪು ದೀಪ ಬಳಸುವ ವಿಐಪಿಗಳ ಸಂಖ್ಯೆ ಇಳಿಸಬೇಕು ಮತ್ತು ಸಾಂವಿಧಾನಿಕ ಹುದ್ದೆಗಳಲ್ಲಿರುವ ಗಣ್ಯಾತಿಗಣ್ಯರ ವಾಹನಗಳಲ್ಲಿ ಮಾತ್ರ ಕೆಂಪು ಬೀಕನ್‌ ದೀಪ ಬಳಸಬೇಕು ಎಂದು ಆದೇಶಿಸಿತ್ತು. ನ್ಯಾ.ಜಿ.ಎಸ್‌.ಸಿಂಗ್ವಿ ಮತ್ತು ಸಿ.ನಾಗಪ್ಪನ್‌ ಅವರಿದ್ದ ಸುಪ್ರೀಂ ಕೋರ್ಟ್‌ ನ್ಯಾಯ ಪೀಠದ ಆದೇಶದ ಕೆಲ ಪ್ರಮುಖ ಅಂಶಗಳು ಇಲ್ಲಿವೆ.

* ನ್ಯಾಯಾಲಯದ ಆದೇಶದ ವಿರುದ್ಧ ಕೆಂಪು ಬೀಕನ್‌ ಬಳಸುವರಿಗೆ ಭಾರಿ ಮೊತ್ತದ ದಂಡ ವಿಧಿಸಬೇಕು. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಗಳು ಮೋಟಾರು ವಾಹನ ನಿಯಮಗಳಿಗೆ ತಿದ್ದುಪಡಿ ತರಬೇಕು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸೂಚಿಸಿರುವ ಗಣ್ಯ ವ್ಯಕ್ತಿಗಳು ವಾಹನದಲ್ಲಿ ಇರುವಾಗ ಮಾತ್ರ ಕೆಂಪು ದೀಪ ಬಳಸಬೇಕು

2002ರ ಜನವರಿ 11 ಮತ್ತು 2005ರ ಜುಲೈ 28ರಂದು ಕೇಂಧ್ರ ಸರ್ಕಾರ ಹೊರಡಿಸಿದ ಸೂಚನೆಗಳಿಗೆ ಅನುಗುಣವಾಗಿ "ಸಿ' ಮತ್ತು  "ಡಿ' ದರ್ಜೆಯಲ್ಲಿ ಉಲ್ಲೇಖೀಸಿರುವ ಗಣ್ಯರನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಯಾರೂ ಆ ಪಟ್ಟಿ ಸೇರುವಂತಿಲ್ಲ. ಈ ಬಗ್ಗೆ ರಾಜ್ಯ ಸರ್ಕಾರಗಳು ಎಚ್ಚರ ವಹಿಸಬೇಕು

ತುರ್ತು ಸಂದರ್ಭಗಳಲ್ಲಿ ಸೇವೆ ಸಲ್ಲಿಸುವ ಆ್ಯಂಬುಲೆನ್ಸ್‌, ಪೊಲೀಸ್‌ ಮತ್ತು ಅಗ್ನಿಶಾಮಕ ವಾಹನಗಳು ಕೂಡ ಕೆಂಪು ಬೀಕನ್‌ ಬಳಸುವಂತಿಲ್ಲ

ಆ್ಯಂಬುಲೆನ್ಸ್‌, ಪೊಲೀಸ್‌ ಮತ್ತು ಅಗ್ನಿಶಾಮಕ ವಾಹನಗಳ ಮೇಲೆ ನೀಲಿ, ಬಿಳಿ ಅಥವಾ ವಿವಿಧ ಬಣ್ಣಗಳ ದೀಪ ಬಳಸಬಹುದು

ಕೇಂದ್ರ ಸರ್ಕಾರ ಯಾವ ಹಿನ್ನೆಲೆಯಲ್ಲಿ ಈ ಆದೇಶ ಮಾಡಿದೆ ಎಂದು ಗೊತ್ತಿಲ್ಲ. ಇದರ ಬಗ್ಗೆ ಪರ ಮತ್ತು ವಿರೋಧ ಎರಡೂ ಇದೆ. ಕೇಂದ್ರ ಸರ್ಕಾರದ ಆದೇಶವನ್ನು ಪರಿಶೀಲನೆ ಮಾಡಿ ಮಾತನಾಡುತ್ತೇನೆ.
-ಡಾ.ಜಿ. ಪರಮೇಶ್ವರ್‌, ಗೃಹ ಸಚಿವ

ಸಚಿವರು ಮತ್ತು ಗಣ್ಯರು ಕೆಂಪು ದೀಪ ಬಳದಂತೆ ಕೇಂದ್ರ ಸರ್ಕಾರ ಹೊರಡಿಸಿರುವ ಸುತ್ತೋಲೆ ಸ್ವಾಗತಾರ್ಹ. ಕೆಂಪುದೀಪ ನಮಗಾರಿಗೂ ಶಾಸ್ವತ ಅಲ್ಲ. ಕೇಂದ್ರ ಸರ್ಕಾರದ ತೀರ್ಮಾನವನ್ನು ಸ್ವಾಗತಿಸುತ್ತೇನೆ.
-ಎಂ.ಬಿ. ಪಾಟೀಲ್‌, ಜಲ ಸಂಪನ್ಮೂಲ ಸಚಿವ.

*ಕೆಂಪು ದೀಪದ ಕಾರು ಬಳಸದಂತೆ ಕೇಂದ್ರ ಸರ್ಕಾರ ತೆಗೆದುಕೊಂಡಿರುವ ತೀರ್ಮಾನ ಸ್ವಾಗತಾರ್ಹ. ಕೇಂದ್ರ ಸರ್ಕಾರದ ತೀರ್ಮಾನವನ್ನು ನಾನು ಗೌರವಿಸುತ್ತೇನೆ.
-ರಮೇಶ್‌ ಕುಮಾರ್‌, ಆರೋಗ್ಯ ಸಚಿವ

Trending videos

Back to Top