CONNECT WITH US  

ಆಧಾರ್‌ ಅನುಮಾನ ಅನಗತ್ಯ

ಹೊಸದಿಲ್ಲಿ: ಆಧಾರ್‌ ಮಾಹಿತಿ ಕದಿಯುವುದು ಅಸಾಧ್ಯ. ಅದು ಅತ್ಯಂತ ಸುರಕ್ಷಿತ ವ್ಯವಸ್ಥೆ. ಇದರ ಬಗ್ಗೆ ಅನುಮಾನ ಅನಗತ್ಯ ಎಂದು ಭಾರತೀಯ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರದ (ಯುಐಧಿಡಿಎಐ)ಸಿಇಒ ಅಜಯ್‌ ಭೂಷಣ್‌ ಪಾಂಡೆ ಹೇಳಿದ್ದಾರೆ. ದೇಶಾದ್ಯಂತ ಆಧಾರ್‌ ಸುರಕ್ಷತೆ ಕುರಿತು ಅನುಮಾನಗಳು ಭುಗಿಲೆದ್ದಿರುವ ನಡುವೆಯೇ ಪಾಂಡೆ  ಅವರು ಈ ಸ್ಪಷ್ಟನೆ ನೀಡಿದ್ದಾರೆ. ಸಂದರ್ಶನವೊಂದರಲ್ಲಿ ಆಧಾರ್‌ ಸುರಕ್ಷತೆ ಮೇಲೆ ಬೆಳಕು ಚೆಲ್ಲಿರುವ ಅವರು, 'ಆಧಾರ್‌ ನೋಂದಣಿ ಒಂದು ಕಟ್ಟುನಿಟ್ಟಿನ ವ್ಯವಸ್ಥೆ. ಯುಐಡಿಎಐ ನೇಮಿಸಿಕೊಂಡ ತಜ್ಞರು, ಯುಐಡಿಎಐ ಅಭಿವೃದ್ಧಿಪಡಿಸಿದ ಸಾಫ್ಟ್ವೇರ್‌ ಮೂಲಕ ಸಾರ್ವಜನಿಕರ ಆಧಾರ್‌ ಮಾಹಿತಿ ನೋಂದಣಿ ಮಾಡಿಕೊಳ್ಳಲಾಗುತ್ತದೆ. ಹೀಗೆ ನೋಂದಣಿ ಮಾಡಿಕೊಂಡ ಮಾಹಿತಿಯನ್ನು ಯುಡಿಐ ಸರ್ವರ್‌ ಹೊರತು ಬೇರಾರೂ ಓದಲು ಸಾಧ್ಯವಿಲ್ಲ' ಎಂದಿದ್ದಾರೆ.

ಸಂಖ್ಯೆ ಇದ್ದ ಮಾತ್ರಕ್ಕೆ ಹ್ಯಾಕ್‌ ಮಾಡಲಾಗದು: 'ಈಗ ನಾವು ನೀಡುವ ಚೆಕ್‌ನಲ್ಲಿ ನಮ್ಮ ಬ್ಯಾಂಕ್‌ ಖಾತೆ ಸಂಖ್ಯೆ ಇರುತ್ತದೆ. ಅಂದ ಮಾತ್ರಕ್ಕೆ ನಮ್ಮಿಂದ ಚೆಕ್‌ ಪಡೆದ ವ್ಯಕ್ತಿ ನಮ್ಮ ಖಾತೆ ಹ್ಯಾಕ್‌ ಮಾಡಲು ಸಾಧ್ಯವೇ? ಇಲ್ಲ. ಹಾಗೆಯೇ ಆಧಾರ್‌ ಸಂಖ್ಯೆ, ಬ್ಯಾಂಕ್‌ ಖಾತೆ ಸಂಖ್ಯೆ ಮತ್ತು ಮೊಬೈಲ್‌ ಸಂಖ್ಯೆಗಳು ಬಹಿರಂಗಗೊಂಡರೂ ಅವುಗಳಿಗೆ ಪಿನ್‌, ಒಟಿಪಿ ಸುರಕ್ಷತೆ ಇರುವುದರಿಂದ, ಈ ಸಂಖ್ಯೆಗಳನ್ನು ಬಳಸಿ ಹ್ಯಾಕ್‌ ಮಾಡಲಾಗದು' ಎಂಬುದು ಪಾಂಡೆ ಅವರ ಅಭಿಪ್ರಾಯ.

ನಕಲಿ ಐಡಿ ಅಸಾಧ್ಯ: 'ಒಮ್ಮೆ ರಾಜು ಎಂಬ ಹೆಸರಿನಲ್ಲಿ ಆಧಾರ್‌ ನೋಂದಣಿ ಮಾಡಿಕೊಂಡ ವ್ಯಕ್ತಿ, ಇನ್ನೊಮ್ಮೆ ಬೇರೆ ಗುರುತಿನ ಚೀಟಿ ನೀಡಿ, ಬೇರೊಂದು ಹೆಸರಿನಲ್ಲಿ ನೋಂದಣಿ ಮಾಡಿಧಿಕೊಳ್ಳಲು ಮುಂದಾದರೆ ಬಯೋಮೆಟ್ರಿಕ್‌ ವಿವರಗಳನ್ನು ನೀಡುವಾಗ ಸಿಕ್ಕಿಬೀಳುತ್ತಾನೆ. ಈ ಮೊದಲೇ ಆತನ ಬಯೋಮೆಟ್ರಿಕ್‌ ಮಾಹಿತಿ ಬೇರೊಂದು ಸಂಖ್ಯೆಯಲ್ಲಿ ನಮೂದಾಗಿರುವ ಕಾರಣ ನೋಂದಣಿ ರದ್ದಾಗುತ್ತದೆ. ಇಂಥವರಿಗೆ ಶಿಕ್ಷೆ ಖಂಡಿತ' ಎನ್ನುತ್ತಾರೆ ಯುಐಡಿಎಐ ಸಿಇಒ.

ಅದೊಂದೇ ಅಂತಿಮ ಆಗಕೂಡದು 
ನಕಲಿ ಆಧಾರ್‌ ಸಂಖ್ಯೆ, ಕಾರ್ಡ್‌ ಬಳಸಿ ಬ್ಯಾಂಕ್‌ನವರಿಗೆ ಮೋಸ ಮಾಡುವ ಸಾಧ್ಯತೆಗಳನ್ನು ಅಲ್ಲಗಳೆಯಲಾಗದು. ಆದರೆ ಬ್ಯಾಂಕ್‌ ಖಾತೆ ತೆರೆಯುವಾಗ ಆಧಾರ್‌ ಸಂಖ್ಯೆಯೊಂದೇ ಅಂತಿಮ ದಾಖಲೆ ಆಗಬಾರದು. ಬ್ಯಾಂಕ್‌ನವರು ಆಧಾರ್‌ ಹೊರತಾಗಿ, ವ್ಯಕ್ತಿಯ ಮತದಾನ ಗುರುತಿನ ಚೀಟಿ, ಪಡಿತರ ಚೀಟಿ ಸೇರಿ ಬೇರಾವುದೇ ದಾಖಲೆ ಪಡೆದು ಪರಿಶೀಲಿಸಬಹುದು. ಹೀಗೆ ಮಾಡುವುದರಿಂದ ಹಣದ ಅಕ್ರಮ ವ್ಯವಹಾರಗಳನ್ನು ತಡೆಯಬಹುದು.ಸರಕಾರದ ಸಹಾಯಧನ ಮತ್ತಿತರ ಪ್ರಯೋಜನ ಪಡೆಯಲು ಆಧಾರ್‌ ಅಗತ್ಯ. ಆದರೆ ಕಡ್ಡಾಯವಲ್ಲ. ಆಧಾರ್‌ ಹೊಂದಿರದ ವ್ಯಕ್ತಿ, ಬೇರಾವುದೇ ಗುರುತಿನ ದಾಖಲೆ ನೀಡಲು ಆಧಾರ್‌ ಕಾಯ್ದೆಯ ವಿಭಾಗ 7 ಅವಕಾಶ ಕಲ್ಪಿಸುತ್ತದೆ. ಆದರೆ, ಇದೇ ವೇಳೆ ಆತ ಆಧಾರ್‌ ಸಂಖ್ಯೆಗೆ ನೋಂದಣಿಯಾಗಬೇಕಾಗುತ್ತದೆ' ಎಂದೂ ಅಜಯ್‌ ಭೂಷಣ್‌ ಪಾಂಡೆ ಮಾಹಿತಿ ನೀಡಿದ್ದಾರೆ.


Trending videos

Back to Top