CONNECT WITH US  

ಭಾರತಕ್ಕೆ ಕಾಲಿಟ್ಟ ಝಿಕಾ

ಹೊಸದಿಲ್ಲಿ: ಕಳೆದ ವರ್ಷ ಅಮೆರಿಕ, ಸಿಂಗಾಪುರ, ಬಾಂಗ್ಲಾದೇಶದಲ್ಲಿ ಕಾಣಿಸಿಕೊಂಡು ಭೀತಿ ಹುಟ್ಟಿಸಿದ್ದ ಝಿಕಾ ವೈರಸ್‌ ಇದೀಗ ಭಾರತಕ್ಕೆ ಕಾಲಿಟ್ಟಿದೆ. ಇಂತಹುದೊಂದು ಆಘಾತಕಾರಿ ವಿಚಾರವನ್ನು ಸ್ವತಃ ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಒ)ಯೇ ಬಹಿರಂಗಪಡಿಸಿದೆ.

ಗುಜರಾತ್‌ನ ಅಹಮದಾಬಾದ್‌ನ ಆಸ್ಪತ್ರೆಯೊಂದರಲ್ಲಿ ಮೂವರಿಗೆ ಝಿಕಾ ವೈರಸ್‌ ದಾಳಿ ನಡೆಸಿರುವ ವಿಚಾರವನ್ನು ಡಬ್ಲ್ಯುಎಚ್‌ಒ ದೃಢಪಡಿಸಿದೆ. ಈ ಪೈಕಿ ಒಬ್ಬರು 64 ವರ್ಷದ ಪುರುಷರಾದರೆ, ಮತ್ತಿಬ್ಬರು ಮಹಿಳೆಯರಾಗಿದ್ದಾರೆ. 
ಅಹಮದಾಬಾದ್‌ನ ಬಿ.ಜೆ. ವೈದ್ಯಕೀಯ ಕಾಲೇಜಿನ ರೋಗಿಗಳ ರಕ್ತದ ಮಾದರಿಗಳ ಪರೀಕ್ಷೆ ನಡೆಸಿದಾಗ ಝಿಕಾ ಸೋಂಕು ತಗುಲಿರುವುದು ಪತ್ತೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಇಲ್ಲಿನ ಮಹಾನಗರಪಾಲಿಕೆಯ ಕೀಟಶಾಸ್ತ್ರಜ್ಞ ಡಾ. ವಿಜಯ್‌ ಕೊಹ್ಲಿ, "ನಾವೀಗ ಅತ್ಯಂತ ಜಾಗರೂಕರಾಗಿರಬೇಕಾದ ಅಗತ್ಯವಿದೆ. ಝಿಕಾ ಮತ್ತು ಡೆಂಘೀ ರೋಗವು ಒಂದೇ ಸೊಳ್ಳೆಯಿಂದ ಹರಡುತ್ತದೆ. ಹೀಗಾಗಿ, ಝಿಕಾವು ಅತ್ಯಂತ ಸುಲಭವಾಗಿ ವ್ಯಾಪಿಸುವ ಸಾಧ್ಯತೆಯಿದೆ. ಸರಕಾರವು ಮಲೇರಿಯಾ ನಿರ್ಮೂಲನೆ ಅಭಿಯಾನದತ್ತ ಗಮನ ನೆಟ್ಟಿದ್ದು, ಕೂಡಲೇ ಝಿಕಾ ಬಗ್ಗೆಯೂ ಗಮನ ಹರಿಸಬೇಕಾಗಿದೆ. ಇದನ್ನು ನಾವು ಸುಲಭವಾಗಿ ನಿರ್ಲಕ್ಷಿಸುವಂತಿಲ್ಲ,' ಎಂದಿದ್ದಾರೆ.

ಇದೇ ವೇಳೆ, ಝಿಕಾ ಪತ್ತೆ ಮಾಹಿತಿ ಹಿನ್ನೆಲೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆಯು ಭಾರತಕ್ಕೆ ಯಾವುದೇ ಪ್ರಯಾಣ ಅಥವಾ ವ್ಯಾಪಾರ ನಿರ್ಬಂಧ ಹೇರಿಲ್ಲ ಎಂದು ಮೂಲಗಳು ತಿಳಿಸಿವೆ. 

ಪರಿಣಾಮವೇನು?
ಡೆಂಘೀಯಂತೆಯೇ ಝಿಕಾ ವೈರಸ್‌ನಿಂದಲೂ ಆರಂಭ ದಲ್ಲಿ ಜ್ವರ ಕಾಣಿಸಿಕೊಳ್ಳುತ್ತದೆ. ಆದರೆ, ಜ್ವರ ಅತಿಯಾಗಿರು ವುದಿಲ್ಲ. ಈಡಿಸ್‌ ಸೊಳ್ಳೆಯು ಬಾಣಂತಿ ಅಥವಾ ಗರ್ಭಿಣಿ ಯರಿಗೆ ಕಚ್ಚಿದರೆ ಅಪಾಯ ಹೆಚ್ಚು. ಇದರಿಂದಾಗಿ ಹುಟ್ಟುವ ಮಗುವಿಗೆ ಮೈಕ್ರೋಸೆಫಾಲಿ ಎಂಬ ಕಾಯಿಲೆ ಬರಬಹುದು. ಅಂದರೆ, ಮಗುವಿನ ತಲೆಯು ಸಾಮಾನ್ಯಕ್ಕಿಂತ ಚಿಕ್ಕದಾಗಿರು ವುದು ಅಥವಾ ಮೆದುಳಿನ ಬೆಳವಣಿಗೆ ಕುಂಠಿತವಾಗು ವುದು. ಈ ಸೋಂಕು ಪುರುಷ ಮತ್ತು ಮಹಿಳೆಯ ನಡುವಿನ ಲೈಂಗಿಕ ಸಂಪರ್ಕದಿಂದಲೂ ಹರಡುತ್ತದೆ.

ಪಾಸಿಟಿವ್‌ ಪ್ರಕರಣಗಳು
1    ಅಹಮದಾಬಾದ್‌ನ ಬಿ.ಜೆ. ವೈದ್ಯಕೀಯ ಕಾಲೇಜಿನಲ್ಲಿ 64 ವರ್ಷದ ವ್ಯಕ್ತಿಯೊಬ್ಬರ ರಕ್ತದ ಮಾದರಿಯಲ್ಲಿ ಝಿಕಾ ವೈರಸ್‌ ಪತ್ತೆ.
2    ಇದೇ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ 34 ವರ್ಷದ ಮಹಿಳೆಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ರಕ್ತಪರೀಕ್ಷೆ. ಈ ವೇಳೆ ಝಿಕಾ ವೈರಸ್‌ ಪತ್ತೆ. 
3    ಇದೇ ಆಸ್ಪತ್ರೆಯಲ್ಲಿ 22 ವರ್ಷದ ಗರ್ಭಿಣಿಯಲ್ಲಿ ವೈರಸ್‌ ಪತ್ತೆ. ಪರೀಕ್ಷೆ ಸಂದರ್ಭದಲ್ಲಿ ಆಕೆ ಗರ್ಭ ಧರಿಸಿ 37 ವಾರಗಳಾಗಿತ್ತು

ಏನಿದು ಝಿಕಾ?
ಇದು 1947ರಲ್ಲಿ ಉಗಾಂಡಾದ ಝಿಕಾ ಎಂಬ ದಟ್ಟಾರಣ್ಯದಲ್ಲಿ ಕಂಡುಬಂದ ವೈರಸ್‌. ಹಗಲು ಹೊತ್ತಿನಲ್ಲಿ ಸಕ್ರಿಯವಾಗಿರುವ ಈಡಿಸ್‌ ಸೊಳ್ಳೆಯಿಂದ ಇದು ಹರಡುತ್ತದೆ. 1950ರಿಂದಲೂ ಇದು ಆಫ್ರಿಕಾದಿಂದ ಏಷ್ಯಾದವರೆಗೂ ಹಬ್ಬತೊಡಗಿದೆ. 2007ರಿಂದ 2016ರ ಅವಧಿಯಲ್ಲಿ ಪೂರ್ವದತ್ತ ವ್ಯಾಪಿಸಿದ ವೈರಸ್‌ ಕಳೆದ ವರ್ಷ ಅಮೆರಿಕದಲ್ಲಿ ಭಾರೀ ಸದ್ದು ಮಾಡಿತ್ತು.


Trending videos

Back to Top