CONNECT WITH US  

ಮಧ್ಯಪ್ರದೇಶದಲ್ಲಿ ಮತ್ತೆ ರಾಜಕೀಯ ಹೈಡ್ರಾಮಾ

ಭೋಪಾಲ್‌: ರೈತರ ಭಾರೀ ಹೋರಾಟಕ್ಕೆ ಸಾಕ್ಷಿಯಾಗಿ ಶಾಂತ ಸ್ಥಿತಿಗೆ ಮರಳಿದ್ದ ಮಧ್ಯಪ್ರದೇಶದಲ್ಲಿ ಮತ್ತೆ ರಾಜಕೀಯ ಹೈಡ್ರಾಮಾ ಆರಂಭವಾಗಿದೆ. ಹಿಂಸಾಚಾರ ಪೀಡಿತ ಮಂಡ್‌ಸಾರ್‌ ಜಿಲ್ಲೆಯು ಸಹಜ ಸ್ಥಿತಿಗೆ ಮರಳುತ್ತಿದ್ದಂತೆ ಮಂಗಳವಾರ ಅಲ್ಲಿಗೆ ಭೇಟಿ ನೀಡಲು ಕಾಂಗ್ರೆಸ್‌ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಹಾಗೂ ಗುಜರಾತ್‌ನ ಪಟೇಲ್‌ ಮೀಸಲಾತಿ ಹೋರಾಟಗಾರ ಹಾರ್ದಿಕ್‌ ಪಟೇಲ್‌ಯತ್ನಿಸಿದ್ದು, ಇವರನ್ನು ಪೊಲೀಸರು ಬಂಧಿಸಿ, ಬಿಡುಗಡೆ ಮಾಡಿದ್ದಾರೆ.

ಕಾಂಗ್ರೆಸ್‌ ನಾಯಕರಾದ ಸಿಂಧಿಯಾ, ಕಾಂತಿಲಾಲ್‌ ಭೂರಿಯಾ ಮತ್ತಿತರರು ಮಂಡ್‌ಸಾರ್‌ನಲ್ಲಿ ಗೋಲಿಬಾರ್‌ಗೆ ಬಲಿಯಾದ ರೈತರ ಕುಟುಂಬವನ್ನು ಭೇಟಿ ಮಾಡಲೆಂದು ಆಗಮಿಸಿದಾಗ, ರತ್ಲಾಮ್‌ನಲ್ಲೇ ಅವರನ್ನು ಪೊಲೀಸರು ತಡೆದರು. ಈ ವೇಳೆ ಕಾಂಗ್ರೆಸ್‌ ನಾಯಕರು ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿಯೂ ನಡೆಯಿತು. ಇದಕ್ಕೂ ಮುನ್ನ ಹಾರ್ದಿಕ್‌ ಪಟೇಲ್‌ ಕೂಡ ಮಂಡ್‌ಸಾರ್‌ ಪ್ರವೇಶಿಸಲು ಯತ್ನಿಸಿದಾಗ, ಅವರನ್ನೂ ಪೊಲೀಸರು ಬಂಧಿಸಿ, ಅನಂತರ ಜಾಮೀನಿನಲ್ಲಿ ಬಿಡುಗಡೆ ಮಾಡಿದ್ದಾರೆ.

ನಾನೇನೂ ಭಯೋತ್ಪಾದಕನಲ್ಲ: ಈ ವೇಳೆ ಮಾತನಾಡಿದ ಹಾರ್ದಿಕ್‌ ಪಟೇಲ್‌, "ನಾನೇನೂ ಲಾಹೋರ್‌ನಿಂದ ಬಂದ ಭಯೋತ್ಪಾದಕನಲ್ಲ. ನಾನೊಬ್ಬ ಭಾರತೀಯ ನಾಗರಿಕ. ಈ ದೇಶದಲ್ಲಿ ನಾನು ಇಷ್ಟಪಟ್ಟ ಪ್ರದೇಶಕ್ಕೆ ಹೋಗುವ ಅಧಿಕಾರ ನನಗಿದೆ' ಎಂದು ಕಿಡಿಕಾರಿದರು.

Trending videos

Back to Top