CONNECT WITH US  

ಮಾಯಾವತಿ ಗೆಲ್ಲಬಾರದು!; ಯುಪಿ ಡಿಸಿಎಂ ಹುದ್ದೆಗೆ ಮೌರ್ಯ ರಾಜೀನಾಮೆ?

ಲಕ್ನೋ: ಉತ್ತರಪ್ರದೇಶದ ಮಹತ್ವದ ರಾಜಕೀಯ ವಿದ್ಯಮಾನವೊಂದರಲ್ಲಿ ಉಪಮುಖ್ಯಮಂತ್ರಿ ಸ್ಥಾನಕ್ಕೆ ಕೇಶವ್‌ ಪ್ರಸಾದ್‌ ಮೌರ್ಯ ಅವರು ರಾಜೀನಾಮೆ ನೀಡುವ ಸಾಧ್ಯತೆಗಳು ದಟ್ಟವಾಗಿದೆ. ಇದಕ್ಕೆ ಕಾರಣವಾಗಿರುವುದು ಬಿಎಸ್‌ಪಿ ಅಧಿನಾಯಕಿ ಮಾಯಾವತಿ ಅವರು ಪುಲ್‌ಪುರ್‌ ಲೋಕಸಭಾ ಕ್ಷೇತ್ರದಿಂದ ಕಣಕ್ಕಿಳಿಯುತ್ತಾರೆ ಎನ್ನುವ ಸುದ್ದಿ. 

ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ಮೌರ್ಯ ಅವರು 2014 ರ ಲೋಕಸಭಾ ಚುನಾವಣೆಯಲ್ಲಿ ಸಮೀಪದ ಅಭ್ಯರ್ಥಿ ಬಿಎಸ್‌ಪಿಯ ಕಪಿಲ್‌ ಮುನಿ ಕಾರ್ವಾರಿಯಾ ವಿರುದ್ಧ 3 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.  ಲೋಕಸಭಾ ಸದಸ್ಯರಾಗಿದ್ದರೂ  ಮೌರ್ಯ ಅವರು ಉಪಮುಖ್ಯಮಂತ್ರಿಯಾಗಿದ್ದರು. ಡಿಸಿಎಂ ಹುದ್ದೆಯಲ್ಲಿ ಮುಂದುವರಿಯಬೇಕಾದರೆ ಲೋಕಸಭಾ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಗಿದೆ. 

ಪುಲ್‌ಪುರ್‌ ನಲ್ಲಿ ಬಿಎಸ್‌ಪಿ ಬಲವಾದ ಕಾರ್ಯಕರ್ತರ ಪಡೆ ಹೊಂದಿದ್ದು ಮಾಯಾವತಿ ಅವರು ಕಣಕ್ಕಿಳಿದರೆ ಗೆಲುವು ಸಾಧಿಸುವ ಸಾಧ್ಯತೆಗಳು ಹೆಚ್ಚಿವೆ. ಹೀಗಾಗಿ ಒಂದು ಸ್ಥಾನ ಕಳೆದುಕೊಳ್ಳಲು, ಮಾಯಾವತಿಗೆ ಗೆಲುವು ಸಿಗಬಾರದು ಎನ್ನುವ ಉದ್ದೇಶದಲ್ಲಿ ಮೌರ್ಯ ಅವರನ್ನು ಡಿಸಿಎಂ ಹುದ್ದೆಯಿಂದ ಕೆಳಗಿಳಿಯಲು ಹೇಳಿದೆ ಎಂದು ವರದಿಯಾಗಿದೆ. ಮೌರ್ಯ ಅವರಿಗೆ ಕೇಂದ್ರ ಸಚಿವ ಸಂಪುಟದಲ್ಲಿ ಉನ್ನತ ಖಾತೆ ಸಿಗುವ ಸಾಧ್ಯತೆಗಳಿವೆ. 

ದಲಿತರ ಪರ ಧ್ವನಿಯಾಗಲು ಸಂಸತ್ತಿನಲ್ಲಿ ಅವಕಾಶ ಇಲ್ಲ ಎಂದು ಮಾಯಾವತಿ ಅವರು ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದರು.ಇದೀಗ ಲೋಕಸಭಾ ಕ್ಷೇತ್ರ ತೆರವಾದರೆ ಕಣಕ್ಕಿಳಿಯಲು ಮುಂದಾಗಿದ್ದರು ಎಂದು ಹೇಳಲಾಗಿತ್ತು. 

Trending videos

Back to Top