CONNECT WITH US  

ಅಮೆರಿಕದ ಸಿಇಎಗೆ ಆಧಾರ್‌ ಸೋರಿಕೆ?

ಚೆನ್ನೈ: ಕೋಟ್ಯಂತರ ಮಂದಿಯ ಆಧಾರ್‌ ಮಾಹಿತಿ ವಿವಿಧೆಡೆ ಸೋರಿಕೆಯಾಗಿದೆ ಎಂಬ ಶಂಕೆಗಳ ನಡುವೆಯೇ, ಇದೀಗ ಅಮೆರಿಕದ ಕುಖ್ಯಾತ ಗೂಢಚರ ಸಂಸ್ಥೆ ಸಿಐಎಗೂ ಆಧಾರ್‌ ಮಾಹಿತಿ ಲಭ್ಯವಾಗಿದೆ ಎಂಬ ಆಘಾತಕಾರಿ ಸುದ್ದಿ ಬಯಲಾಗಿದೆ.

ಜಗತ್ತಿನಾದ್ಯಂತ ಸರ್ಕಾರಿ ಮಟ್ಟದ ನಿಗೂಢ ಮಾಹಿತಿಗಳನ್ನು ಬಯಲಿಗೆಳೆವ ಖ್ಯಾತಿಯುಳ್ಳ ವಿಕಿಲೀಕ್ಸ್‌ ಈ ಮಾಹಿತಿಯನ್ನು ಹೊರಗೆಡವಿದ್ದು, ಅಮೆರಿಕದ ಕ್ರಾಸ್‌ ಮ್ಯಾಚ್‌ ಟೆಕ್ನಾಲಜೀಸ್‌ ಹೆಸರಿನ ಸೈಬರ್‌ ಗೂಢಚರ ಸಂಸ್ಥೆ ಆಧಾರ್‌ ದತ್ತಾಂಶಗಳನ್ನು ಪಡೆದು ಸಿಐಎಗೆ ನೀಡಿದೆ ಎಂದು ಹೇಳಲಾಗಿದೆ.

ಕ್ರಾಸ್‌ ಮ್ಯಾಚ್‌ ಟೆಕ್ನಾಲಜೀಸ್‌ ಭಾರತದಲ್ಲಿ ತನ್ನ ಪಾಲುದಾರ ಸಂಶೆ§ ಸ್ಮಾರ್ಟ್‌ ಐಡೆಂಟಿಟಿ ಡಿವೈಸ್‌ ಪ್ರೈ.ಲಿ. ಜೊತೆಗೆ ಸೇರಿ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರಕ್ಕೆ 12 ಲಕ್ಷ ಮಂದಿ ಆಧಾರ್‌ ನೋಂದಣಿ, ಬಯೋಮೆಟ್ರಿಕ್‌ಗಳನ್ನು ಪಡೆಯಲು ನೆರವಾಗಿದೆ. ಈ ಮೂಲಕ ದತ್ತಾಂಶಗಳನ್ನು ಅದು ಸುಲಭವಾಗಿ ಪಡೆಯಲು ಸಾಧ್ಯವಾಗಿದೆ ಎನ್ನಲಾಗಿದೆ. ಪ್ರಕರಣದ ಕುರಿತಾಗಿ ವಿಕಿಲೀಕ್ಸ್‌ ಟ್ವೀಟ್‌ ಮಾಡಿದ್ದು, ಆಧಾರ್‌ ಮಾಹಿತಿಯನ್ನು ಈಗಾಗಲೇ ಸಿಐಎ ಕದ್ದಿದೆಯೇ ಎಂದು ಪ್ರಶ್ನಾರ್ಥಕವಾಗಿ ಕೇಳಿದೆ.

ಆದರೆ ಮೂಲಗಳು ಹೇಳುವಂತೆ ಕ್ರಾಸ್‌ ಮ್ಯಾಚ್‌ ಬಯೋಮೆಟ್ರಿಕ್‌ ಸಾಧನಗಳನ್ನು ಪೂರೈಸುವ ಜಾಗತಿಕ ಕಂಪನಿಯಾಗಿದ್ದು, ಪಡೆದ ದತ್ತಾಂಶಗಳನ್ನು ಗೂಢಲಿಪಿಯನ್ನಾಗಿಸಿ, ಆಧಾರ್‌ ಸರ್ವರ್‌ಗೆ ಕಳಿಸುತ್ತದೆ. ವಿಕಿಲೀಕ್ಸ್‌ ವರದಿಯಲ್ಲಿ ಯಾವುದೇ ಸತ್ಯಾಂಶಗಳಿಲ್ಲ. ಆಧಾರ್‌ ಅನ್ನು ಸುರಕ್ಷಿತವಾಗಿ ಗೂಢಲಿಪಿಯನ್ನಾಗಿಸಿ ಇಡಲಾಗಿದ್ದು, ಯಾವುದೇ ಏಜೆನ್ಸಿಗಳಿಗೆ ಅದನ್ನು ಪಡೆಯಲು ಸಾಧ್ಯವಿಲ್ಲ ಎಂದು ಹೇಳಲಾಗಿದೆ.

ಖಾಸಗಿ ಹಕ್ಕು ತೀರ್ಪಿನಿಂದ ಆಧಾರ್‌ ಕೊನೆಯಾಗಲ್ಲ:
ಖಾಸಗಿತನ ಕೂಡ ಮೂಲಭೂತ ಹಕ್ಕು ಎಂದು ಹೇಳಿದ ಸುಪ್ರೀಂ ಕೋರ್ಟ್‌ ತೀರ್ಪಿನಿಂದಾಗಿ ಆಧಾರ್‌ಗೆ ಯಾವುದೇ ಸಮಸ್ಯೆಯಾಗುವುದಿಲ್ಲ ಎಂದು ವಿಶಿಷ್ಟ ಗುರುತು ಚೀಟಿ ಪ್ರಾಧಿಕಾರದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅಜಯ್‌ ಭೂಷಣ್‌ ಪಾಂಡೆ ಹೇಳಿದ್ದಾರೆ. ತೀರ್ಪಿನಲ್ಲಿ ಹೇಳಿರುವಂತೆ ಆಧಾರ್‌, ನಿರ್ದಿಷ್ಟ ನಿರ್ಬಂಧಗಳ ಅಡಿ ಬರುತ್ತದೆ. ಆದ್ದರಿಂದ ಆಧಾರ್‌ ಅನ್ನು ಸಬ್ಸಿಡಿಗೆ ಲಿಂಕ್‌ ಮಾಡುವುದು ಮುಂದುವರಿಯಲಿದೆ. ಅಲ್ಲದೇ ಆಧಾರ್‌ ಕುರಿತ ಅಂತಿಮ ತೀರ್ಪು ಇನ್ನಷ್ಟೇ ಹೊರಬೀಳಬೇಕಿದೆ ಎಂದಿದ್ದಾರೆ.


Trending videos

Back to Top