CONNECT WITH US  

ವಕೀಲ ವೃತ್ತಿಗೆ ಧವನ್‌ ಗುಡ್‌ಬೈ

ಹೊಸದಿಲ್ಲಿ: ಸುಪ್ರೀಂ ಕೋರ್ಟ್‌ನ ಹಿರಿಯ ವಕೀಲ ರಾಜೀವ್‌ ಧವನ್‌, ತಮ್ಮ ವಕೀಲಿಕೆ ವೃತ್ತಿಗೆ ರಾಜೀನಾಮೆ ಸಲ್ಲಿಸಿದ್ದಾರೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ| ದೀಪಕ್‌ ಮಿಶ್ರಾ ಅವರಿಗೆ ಪತ್ರ ಬರೆದಿರುವ ಧವನ್‌, ನ್ಯಾಯಾಲಯದಲ್ಲಿ ತಮಗೆ ಅವಮಾನ ಹೆಚ್ಚಾದ ಹಿನ್ನೆಲೆಯಲ್ಲಿ ವಕೀಲಿಕೆಯನ್ನೇ ತೊರೆಯುತ್ತಿರುವುದಾಗಿ ತಿಳಿಸಿದ್ದಾರೆ. ಸರ್ವೋಚ್ಚ ನ್ಯಾಯಾಲಯದ ವಕೀಲರೊಬ್ಬರು ಹೀಗೆ, ತಮ್ಮ ವೃತ್ತಿಗೆ ರಾಜಿನಾಮೆ ಸಲ್ಲಿಸುತ್ತಿರುವುದು ಭಾರತೀಯ ನ್ಯಾಯಾಂಗ ಇತಿಹಾಸದಲ್ಲಿ ಇದೇ ಮೊದಲು ಎನ್ನಲಾಗಿದೆ. 

ಧವನ್‌ ಅವರು, ದಿಲ್ಲಿ ಸರಕಾರ ಹಾಗೂ ಲೆಫ್ಟಿನೆಂಟ್‌ ಗವರ್ನರ್‌ ನಡುವಿನ ವ್ಯಾಜ್ಯದಲ್ಲಿ ದಿಲ್ಲಿಸರಕಾರದ ಪರವಾಗಿ ವಾದ ಮಂಡಿಸುತ್ತಿದ್ದವರು. ಇತ್ತೀಚೆಗೆ ನ್ಯಾಯಾಲಯದಲ್ಲಿ ಇದೇ ಪ್ರಕರಣದ ವಿಚಾರಣೆ ವೇಳೆ, ವಾದ ಪ್ರತಿವಾದದ ಕಾವು ಭುಗಿಲೆದ್ದಿತ್ತು. ಆಗ, ತಮ್ಮ ವಾದ ಮಂಡಿಸಲು ಯತ್ನಿಸಿದ್ದ ಧವನ್‌ ಅವರನ್ನು ತಡೆದಿದ್ದ ಮುಖ್ಯ ನ್ಯಾಯಮೂರ್ತಿ, ಪ್ರತಿ ಕಕ್ಷಿದಾರರ ವಕೀಲರು ಎತ್ತಿದ್ದ ವಿಚಾರಗಳನ್ನೇ ಮತ್ತೆ ಎತ್ತಕೂಡದೆಂದು ಸೂಚಿಸಿದರು. ಅಲ್ಲದೆ, ತಮ್ಮ ವಾದವನ್ನು ಬರಹದ ಮೂಲಕ ನೀಡಬೇಕೆಂದೂ ಕೇಳಿದ್ದರು. ಆಗ ಸಹನೆ ಕಳೆದುಕೊಂಡ ಧವನ್‌ ಕಲಾಪದ ವೇಳೆ ಕೆಲವು ಅಸಮಾಧಾನ ಹೊರಹಾಕಿದ್ದರಲ್ಲದೆ, ಅಹಿತಕರ ಪದಗಳನ್ನು ಬಳಸಿಬಿಟ್ಟರು. 

ಇದಕ್ಕೂ ಮುನ್ನ, ರಾಮಜನ್ಮಭೂಮಿ ಪ್ರಕರಣದ ವಿಚಾರಣೆ ಆರಂಭಿಸದಿರಲು ಸಿಜೆಐ ಅವರಲ್ಲಿ ಮನವಿ ಮಾಡಿದ್ದೂ ಹಲವರ ಅಸಮಾಧಾನಕ್ಕೆ ಕಾರಣವಾಗಿತ್ತು. ಆಗ ನ್ಯಾ.ಮಿಶ್ರಾ, "ಇಂಥವರು ಈ ಹುದ್ದೆ ಮತ್ತು ಗೌನ್‌ಗೆ ಅರ್ಹರಲ್ಲ' ಎಂದು ನುಡಿದಿದ್ದರು. ಇದರಿಂದ ಧವನ್‌ ನೊಂದಿದ್ದರು.


Trending videos

Back to Top