CONNECT WITH US  

ದಾಳಿಯನ್ನು ಸೆರೆಹಿಡಿದಿದ್ದು 16 ವರ್ಷದ ಜೈಶ್‌ ಉಗ್ರ!

ಸಿಆರ್‌ಪಿಎಫ್ ಮೇಲಿನ ದಾಳಿಯ ಆಘಾತಕಾರಿ ಮಾಹಿತಿ

ಹೊಸದಿಲ್ಲಿ: ಶುಕ್ರವಾರ ರಾತ್ರಿ ಐವರು ಯೋಧರ ಸಾವಿಗೆ ಕಾರಣವಾದ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿನ ಸಿಆರ್‌ಪಿಎಫ್ ಶಿಬಿರದ ಮೇಲಿನ ಉಗ್ರರ ದಾಳಿ ಕುರಿತ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದ್ದು, ಆಘಾತಕಾರಿ ಮಾಹಿತಿಯೊಂದು ಹೊರಬಿದ್ದಿದೆ. ಅದೇನೆಂದರೆ, ಭಯೋತ್ಪಾದಕರು ನಡೆಸಿದ ಈ ದಾಳಿಯ ವಿಡಿಯೋವನ್ನು ಸೆರೆಹಿಡಿದಿದ್ದು 16 ವರ್ಷದ ಬಾಲಕ!

ಹೌದು, ಇತ್ತೀಚೆಗಷ್ಟೇ ಜೈಶ್‌-ಎ-ಮೊಹಮ್ಮದ್‌ ಉಗ್ರ ಸಂಘಟನೆಗೆ ಸೇರ್ಪಡೆಯಾಗಿರುವ ಫ‌ರ್ದೀನ್‌ ಅಹ್ಮದ್‌ ಕಣಿವೆ ರಾಜ್ಯದ ಪೊಲೀಸ್‌ ಅಧಿಕಾರಿಯೊಬ್ಬರ ಪುತ್ರ. ಸಿಆರ್‌ಪಿಎಫ್ ಕ್ಯಾಂಪ್‌ ಮೇಲೆ ದಾಳಿ ಆಗುವ ಸ್ವಲ್ಪ ಹೊತ್ತಿಗೆ ಮುಂಚೆ ಈತನೇ ವಿಡಿಯೋವೊಂದನ್ನು ರೆಕಾರ್ಡ್‌ ಮಾಡಿದ್ದು, ದಾಳಿ ನಡೆಯುವ ಮಾಹಿತಿಯನ್ನೂ, ಹೇಗೆ ನಡೆಯುತ್ತದೆ ಎಂಬ ವಿವರವನ್ನೂ ನೀಡಿದ್ದಾನೆ. ಅಷ್ಟೇ ಅಲ್ಲ, "ದೇವರ ಇಚ್ಛೆಯಂತೆ, ಈ ಸಂದೇಶವು ನಿಮ್ಮನ್ನು ತಲುಪುವಾಗ ನಾನು ಸ್ವರ್ಗದಲ್ಲಿ ದೇವರ ಅತಿಥಿಯಾಗಿರುತ್ತೇನೆ,' ಎಂದೂ, "ಯುವ ಜನರು ಜೈಶ್‌ಗೆ ಸೇರಬೇಕು' ಎಂದೂ ವಿಡಿಯೋದಲ್ಲಿ ಹೇಳಿದ್ದಾನೆ. ನಂತರ ಈತನೂ ಸೇನೆಯ ಗುಂಡಿಗೆ ಬಲಿಯಾಗಿದ್ದಾನೆ. ಆತ್ಮಾಹುತಿ ದಾಳಿಕೋರನೊಬ್ಬ ದಾಳಿಗೆ ಮುಂಚೆ ಈ ರೀತಿ ವಿಡಿಯೋ ಮಾಡಿಕೊಂಡಿರುವುದು ಇದೇ ಮೊದಲು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ, ವಿಡಿಯೋದ ವಿಶ್ಲೇಷಣೆಯೂ ನಡೆಯುತ್ತಿದೆ.

ಕಣಿವೆ ರಾಜ್ಯದಲ್ಲಿ ಯುವಕರು ಉಗ್ರ ಸಂಘಟನೆಯತ್ತ ಆಕರ್ಷಿತರಾಗದಂತೆ ಇತ್ತೀಚೆಗೆ ಹಲವು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಅನೇಕ ಸ್ಥಳೀಯ ಯುವಕರನ್ನು ತಮ್ಮ ಕುಟುಂಬಗಳಿಗೆ ವಾಪಸ್‌ ಕರೆತರಲಾಗಿದೆ. ಇಂತಹುದೊಂದು ಸಕಾರಾತ್ಮಕ ಕೆಲಸ ನಡೆಯುತ್ತಿದ್ದರೂ, 16ರ ಬಾಲಕನೊಬ್ಬ ಉಗ್ರನಾಗಿ ಪರಿವರ್ತನೆಗೊಂಡಿರುವುದು ಅತ್ಯಂತ ಕಳವಳಕಾರಿ ಸಂಗತಿ ಎಂದು ಪೊಲೀಸರು ಅಭಿಪ್ರಾಯಪಟ್ಟಿದ್ದಾರೆ. 

ಮೂರನೇ ಉಗ್ರನ ಮೃತದೇಹ ಪತ್ತೆ
ಸಿಆರ್‌ಪಿಎಫ್ ಶಿಬಿರದ ಮೇಲೆ ದಾಳಿ ನಡೆಸಿದ ಉಗ್ರರನ್ನು ನಿಗ್ರಹಿಸುವ ಕಾರ್ಯಾಚರಣೆ ಸೋಮವಾರದವರೆಗೂ ಮುಂದುವರಿದಿತ್ತು. ಸಂಜೆ ವೇಳೆಗೆ ಅದು ಅಂತ್ಯಗೊಂಡಿದ್ದು, ಶೋಧ ಕಾರ್ಯವೂ ಪೂರ್ಣಗೊಂಡಿದೆ. ರವಿವಾರದ ಕಾರ್ಯಾಚರಣೆಯಲ್ಲಿ ಹತ್ಯೆಗೀಡಾಗಿದ್ದ 3ನೇ ಉಗ್ರನ ಮೃತದೇಹ ಸೋಮವಾರ ಪತ್ತೆಯಾಗಿದೆ. ಮೂವರು ಉಗ್ರರನ್ನೂ ಹೊಡೆದುರುಳಿಸಲಾಗಿ ತ್ತಾದರೂ, ಒಬ್ಬನ ಮೃತದೇಹ ಸಿಕ್ಕಿರಲಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.


Trending videos

Back to Top