CONNECT WITH US  

ಬಿಹಾರದಿಂದ ನೇಪಾಳಕ್ಕೆ ಹೊಸ ರೈಲು ಮಾರ್ಗ

ಪ್ರಧಾನಿ ಮೋದಿ ಅವರು ನೇಪಾಳಿ ಪ್ರಧಾನಿ ಕೆ.ಪಿ.ಒಲಿ ಅವರಿಗೆ ತಮ್ಮ ಸಂಪುಟ ಸಹೋದ್ಯೋಗಿಗಳು ಹಾಗೂ ಉನ್ನತ ಅಧಿಕಾರಿಗಳನ್ನು ಪರಿಚಯಿಸಿದರು.

ಹೊಸದಿಲ್ಲಿ: ನೇಪಾಳದಲ್ಲಿ ಚೀನಾ ಹೂಡಿಕೆ ಹೆಚ್ಚಿಸುತ್ತಿರುವುದಕ್ಕೆ ಪ್ರತಿಯಾಗಿ ಭಾರತವು ಗಡಿಯಲ್ಲಿ ರೈಲು ಸಂಪರ್ಕವನ್ನು ಸುಧಾರಿಸಲಿದೆ. ಬಿಹಾರದ ರಕ್ಸಾಲ್‌ ಹಾಗೂ ನೇಪಾಳದ ಕಠ್ಮಂಡುವಿಗೆ ಹೊಸ ರೈಲು ಮಾರ್ಗವನ್ನು ನಿರ್ಮಿಸಲು ನಿರ್ಧರಿಸಲಾಗಿದ್ದು, ಇದು ಭಾರತೀಯ ರೈಲ್ವೆ ವ್ಯವಸ್ಥೆಗೆ ನೇಪಾಳ ರೈಲ್ವೆಯನ್ನು ಸಂಪರ್ಕಿಸಲಿದೆ. ಇದರ ಜತೆಗೇ, ಜಲ ಸಾರಿಗೆ ವ್ಯವಸ್ಥೆಯನ್ನೂ ಒದಗಿಸಲು ನಿರ್ಧರಿಸಲಾಗಿದೆ.

ನೇಪಾಳದಲ್ಲಿ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದ ನಂತರದಲ್ಲಿ ಕೆ.ಪಿ. ಶರ್ಮಾ ಒಲಿ ಮೊದಲ ಬಾರಿಗೆ ಭಾರತಕ್ಕೆ ಆಗಮಿಸಿದ್ದು, ಶನಿವಾರ ಪ್ರಧಾನಿ ನರೇಂದ್ರ ಮೋದಿ ಜತೆ ಮಾತುಕತೆ ನಡೆಸಿದ ವೇಳೆ ಈ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ. ಅಲ್ಲದೆ ಇಬ್ಬರೂ ಮುಖಂಡರು ಮಾತುಕತೆ ನಂತರ ಸುದ್ದಿಗೋಷ್ಠಿ ನಡೆಸಿದ್ದು, ಉಭಯ ದೇಶಗಳು ಸಂಬಂಧ ವೃದ್ಧಿಗೆ ಬದ್ಧವಾಗಿವೆ ಎಂದಿದ್ದಾರೆ. ನೇಪಾಳದ ಎಲ್ಲ ಸಮಾಜವನ್ನೂ ಒಲಿ ಸರಕಾರ ಜೊತೆಗೆ ಕೊಂಡೊಯ್ಯಬೇಕು ಎಂದು ಮೋದಿ ಸಲಹೆ ನೀಡಿದ್ದಾರೆ. ಇಬ್ಬರೂ ಪ್ರಧಾನಿಗಳು ಬಿರ್ಗಂಜ್‌ನಲ್ಲಿ ಚೆಕ್‌ ಪೋಸ್ಟ್‌ ಮತ್ತು ಮೋತಿಹರಿ ಹಾಗೂ ಅಮ್ಲೆàಖ್‌ಗಂಜ್‌ ಮಧ್ಯೆ ಪೆಟ್ರೋಲಿಯಂ ಪೈಪ್‌ಲೈನ್‌ ಉದ್ಘಾಟನೆ ಮಾಡಿದ್ದಾರೆ. ಕಳೆದ 3 ವರ್ಷಗಳಿಂದ ನೇಪಾಳದ ಜೊತೆಗೆ ಭಾರತದ ಸಂಬಂಧ ಕ್ಷೀಣಿಸಿರುವುದರಿಂದ, ಸಂಬಂಧ ವೃದ್ಧಿಗೆ ಈ ಕ್ರಮ ಅತ್ಯಂತ ಮಹತ್ವದ್ದಾಗಿದೆ.

ಈ ವರ್ಷ ಮೋದಿ ನೇಪಾಳಕ್ಕೆ: ನೇಪಾಳಕ್ಕೆ ಆಗಮಿಸುವಂತೆ ಪ್ರಧಾನಿ ನರೇಂದ್ರ ಮೋದಿಯನ್ನು ಒಲಿ ಆಹ್ವಾನಿಸಿದ್ದು, ಮೋದಿ ಅದನ್ನು ಒಪ್ಪಿಕೊಂಡಿದ್ದಾರೆ. ಈ ವರ್ಷದಲ್ಲೇ ಮೋದಿ ನೇಪಾಳಕ್ಕೆ ಭೇಟಿ ನೀಡಲಿದ್ದಾರೆ ಎಂದು ಗೋಖಲೆ ಹೇಳಿದ್ದಾರೆ. ನೇಪಾಳದಲ್ಲಿ ನಿರ್ಮಾಣವಾಗುತ್ತಿರುವ ಜಲವಿದ್ಯುತ್‌ ಘಟಕಗಳನ್ನು ಮೋದಿ ಉದ್ಘಾಟಿಸಲಿದ್ದಾರೆ.

ನೇಪಾಳಕ್ಕೆ ಜಲಸಾರಿಗೆ: ಪ್ರಸ್ತುತ ವ್ಯಾಪಾರ ಒಪ್ಪಂದಗಳ ಅಡಿಯಲ್ಲೇ ಸರಕು ಸಾಗಣೆಗಾಗಿ ನೇಪಾಳಕ್ಕೆ ಜಲ ಸಾರಿಗೆ ವ್ಯವಸ್ಥೆ ಮಾಡಲು ನಿರ್ಧರಿಸಲಾಗಿದೆ. ಇದರಿಂದಾಗಿ ನೇಪಾಳಕ್ಕೆ ಸರಕು ಸಾಗಣೆ ಸುಲಭವಾಗಲಿದ್ದು, ಕಡಿಮೆ ವೆಚ್ಚದಲ್ಲಿ ಸರಕು ಸಾಗಿಸಬಹುದಾಗಿದೆ .

Trending videos

Back to Top