CONNECT WITH US  

ಅಂತೂ ಸರ್ಕಾರಿ ಬಂಗ್ಲೆಗೆ ಗುಡ್ ಬೈ;ಮಾಯಾ ಹೊಸ ಬಂಗ್ಲೆ ಮೌಲ್ಯ 15 ಕೋಟಿ

ನವದೆಹಲಿ:ಬಹುಜನ ಸಮಾಜ ಪಕ್ಷದ ವರಿಷ್ಠೆ, ಉತ್ತರಪ್ರದೇಶದ ಮಾಜಿ ಮುಖ್ಯಮಂತ್ರಿ ಮಾಯಾವತಿ ಕೂಡಲೇ ಸರ್ಕಾರಿ ಬಂಗ್ಲೆಯನ್ನು ಖಾಲಿ ಮಾಡಬೇಕೆಂದು ಸುಪ್ರೀಂಕೋರ್ಟ್ ಆದೇಶ ನೀಡಿರುವ ಹಿನ್ನೆಲೆಯಲ್ಲಿ ಮಾಯಾವತಿ 2010ರಲ್ಲಿ ಖರೀದಿಸಿದ್ದ 15 ಕೋಟಿ ರೂಪಾಯಿ ಮೌಲ್ಯದ ಬಂಗ್ಲೆಯಲ್ಲಿ ವಾಸಿಸಲು ನಿರ್ಧರಿಸಿದ್ದಾರೆ.

ಸರ್ಕಾರಿ ಬಂಗ್ಲೆಯಲ್ಲಿದ್ದ ಸಾಮಾನು ಸರಂಜಾಮುಗಳನ್ನು ಮಾಯಾವತಿ ಸಿಬ್ಬಂದಿಗಳು ನೂತನ ಬಂಗ್ಲೆಗೆ ಸಾಗಿಸುವ ಕೆಲಸದಲ್ಲಿ ನಿರತರಾಗಿದ್ದಾರೆ. ಸದ್ಯ ವಾಸ್ತವ್ಯ ಹೂಡಿದ್ದ 13ಎ ಮಾಲ್ ಅವೆನ್ಯೂ ಸರ್ಕಾರಿ ಬಂಗ್ಲೆಯ ಕೂಗಳತೆ ದೂರದಲ್ಲಿ ಮಾಯಾವತಿಯ 9 ಮಾಲ್ ಅವೆನ್ಯೂ ಬಂಗ್ಲೆ ಇದೆ. ಬಿಎಸ್ಪಿಯ ಕಚೇರಿಯೂ ಕೂಡಾ ಸಮೀಪದಲ್ಲಿದೆ.

ಅಂದು ಬಿಎಸ್ಪಿ ಸರ್ಕಾರದ ಅವಧಿಯಲ್ಲಿ ದಲಿತ ಸ್ಮಾರಕ, ಪಾರ್ಕ್ ನಿರ್ಮಿಸಲು ಕೆಂಪು ಮರಳು ಕಲ್ಲು ಉಪಯೋಗಿಸಲಾಗಿತ್ತು. ನೂತನವಾಗಿ ಕಟ್ಟಿಸಿರುವ ಬಂಗ್ಲೆಗೂ ಕೆಂಪು ಮರಳು ಕಲ್ಲುಗಳನ್ನು ಬಳಸಲಾಗಿದೆ.

ಬೃಹತ್ ಬಂಗ್ಲೆ-15 ಕೋಟಿ ರೂಪಾಯಿ ಮೌಲ್ಯ!

ಮಾಯಾವತಿ 2007ರಲ್ಲಿ ಉತ್ತರಪ್ರದೇಶದ ಮುಖ್ಯಮಂತ್ರಿಯಾಗಿ ಅಧಿಕಾರದ ಗದ್ದುಗೆಗೆ ಏರಿದ್ದ ನಂತರ ಈ ಬಂಗ್ಲೆಯನ್ನು ಖರೀದಿಸಿದ್ದರು. ಈ ಬಂಗ್ಲೆ 70,000 ಚದರ ಅಡಿ ಹೊಂದಿದೆ.

2012ರಲ್ಲಿ ರಾಜ್ಯಸಭಾ ಚುನಾವಣೆ ವೇಳೆ ಮಾಯಾವತಿ ಸಲ್ಲಿಸಿದ್ದ ಅಫಿಡವಿಟ್ ನಲ್ಲಿ, 2010 ನವೆಂಬರ್ 3ರಂದು 15 ಕೋಟಿ ರೂಪಾಯಿ ಮೌಲ್ಯದ ಬೃಹತ್ ಬಂಗ್ಲೆಯನ್ನು ಖರೀದಿಸಿರುವುದನ್ನು ಉಲ್ಲೇಖಿಸಿದ್ದರು.

ಉತ್ತರ ಪ್ರದೇಶದಲ್ಲಿ 1995, 1997, 2002-03 ಹಾಗೂ 2007-12ರ ಅವಧಿಯಲ್ಲಿ ನಾಲ್ಕು ಬಾರಿ ಮುಖ್ಯಮಂತ್ರಿ ಆಗಿದ್ದವರು ಮಾಯಾವತಿ. ಮಾಯಾವತಿಯಂತೆ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್ ಯಾದವ್ ಕೂಡಾ ಸುಪ್ರೀಂಕೋರ್ಟ್ ನೋಟಿಸ್ ಜಾರಿಗೊಳಿಸಿದ ಬಳಿಕ ಹೊಸ ಬಂಗ್ಲೆಗಾಗಿ ಹುಡುಕಾಟ ನಡೆಸಿದ್ದಾರೆ ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.

Trending videos

Back to Top