CONNECT WITH US  

ನಾಳೆಯಿಂದ ಕೇರಳದಲ್ಲಿ ತೈಲೋತ್ಪನ್ನ ರೂ1 ಇಳಿಕೆ

ಕೇಂದ್ರಕ್ಕೆ ನಮ್ಮ ಸಂದೇಶ: ಸಿಎಂ ಪಿಣರಾಯಿ

ನವದೆಹಲಿ/ತಿರುವನಂತಪುರ: ತೈಲೋ ತ್ಪನ್ನಗಳ ದರ ಏರಿಕೆಯಲ್ಲಿರುವಾಗಲೇ ಕೇರಳ ಸರ್ಕಾರ ಶುಕ್ರವಾರದಿಂದ ಅನ್ವಯವಾಗುವಂತೆ ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ಗೆ 1 ರೂ.ಕಡಿತ ಮಾಡಿದೆ. ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಬುಧವಾರ ಈ ಘೋಷಣೆ ಮಾಡಿದ್ದಾರೆ. 

ಇದರಿಂದಾಗಿ ಕೇರಳ ಸರ್ಕಾರದ ಬೊಕ್ಕಸಕ್ಕೆ 509 ಕೋಟಿ ರೂ. ತೆರಿಗೆ ಆದಾಯ ನಷ್ಟವಾಗಲಿದೆ ಎಂದಿದ್ದಾರೆ. ನಮ್ಮ ಸರ್ಕಾ ರದ ಕ್ರಮ ಇತರ ರಾಜ್ಯಗಳಿಗೆ ಮಾದರಿಯಾಗಲಿದೆ. ದರ ಏರಿಕೆಯನ್ನು ನಿಯಂತ್ರಿಸಲು ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ. ಜತೆಗೆ ಕೇಂದ್ರ ಸರ್ಕಾರಕ್ಕೆ ನಮ್ಮ ಸಂದೇಶ ಇದು ಎಂದು ಹೇಳಿಕೊಂಡಿದ್ದಾರೆ.  

ಐಓಸಿ ಎಡವಟ್ಟು: ಇದೇ ವೇಳೆ, ಸತತ 16 ದಿನಗಳಿಂದ ಪೆಟ್ರೋಲ್‌, ಡೀಸೆಲ್‌ ದರ ಏರಿಕೆಯಿಂದ ಕಂಗೆಟ್ಟಿದ್ದ ಸಾರ್ವಜನಿಕರಿಗೆ ಬುಧವಾರ 60 ಪೈಸೆಯಷ್ಟು ಬೆಲೆ ತಗ್ಗಿಸಲಾಗಿದೆ ಎಂದು ಇಂಡಿಯನ್‌ ಆಯಿಲ್‌ ಕಾರ್ಪೊರೇಷನ್‌ (ಐಓಸಿ) ಪ್ರಕಟಣೆ ಹೊರಡಿಸಿತ್ತು. ಕ್ಷಣ ಮಾತ್ರದಲ್ಲಿ ಈ ಮಾಹಿತಿ ಎಲ್ಲಾ ಕಡೆ ಹಬ್ಬಿತು. ಆದರೆ ಕೆಲವೇ ನಿಮಿಷಗಳಲ್ಲಿ ದರ ಇಳಿಕೆ ಪ್ರಮಾಣ 60 ಪೈಸೆ ಅಲ್ಲ. ಬದಲಾಗಿ 1 ಪೈಸೆಯಷ್ಟು ಮಾತ್ರ ಇಳಿಕೆ ಮಾಡಲಾಗಿದೆ. ತಾಂತ್ರಿಕ ಕಾರಣಗಳಿಂದಾಗಿ ಈ ಗೊಂದಲ ಉಂಟಾಗಿದೆ ಎಂದು ಸ್ಪಷ್ಟನೆ ನೀಡಿತು. 1 ಪೈಸೆ ದರ ಇಳಿಕೆಯಾದ ಬಳಿಕ  ದೆಹಲಿಯಲ್ಲಿ ಪೆಟ್ರೋಲ್‌ ದರ ಪ್ರತಿ ಲೀಟರ್‌ಗೆ 78.42, 56 ಪೈಸೆ ಪ್ರತಿ ಲೀಟರ್‌ ಡೀಸೆಲ್‌ಗೆ ಇಳಿಕೆಯಾದ ಬಳಿಕ 68.75 ರೂ. ಇದೆ. 

ಕೇವಲ 1 ಪೈಸೆ?: ರಾಹುಲ್‌ ಟೀಕೆ: 1 ಪೈಸೆ ದರ ಇಳಿಕೆ ಮಾಡಿರುವುದಕ್ಕೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಟೀಕಿಸಿದ್ದಾರೆ. ಈ ಬಗ್ಗೆ ಟ್ವೀಟ್‌ ಮಾಡಿರುವ ಅವರು "ಕೇವಲ 1 ಪೈಸೆ ದರ ಇಳಿಕೆ? ಪ್ರಧಾನಿಯವರೇ ಇದು ಕೂಡ ಮತ್ತೂಂದು ಸುಳ್ಳೇ? ಇದು ಬಾಲಿಶತನದ್ದು. ಒಂದು ಪೈಸೆ ಕಡಿತ ಮಾಡಿರುವುದು ನಾನು ನಿಮಗೆ ನೀಡಿದ ದರ ಕಡಿತ ಮಾಡಿ ಚಾಲೆಂಜ್‌ಗೆ ಸೂಕ್ತ ಉತ್ತರ ಅಲ್ಲ' ಎಂದು ಬರೆದುಕೊಂಡಿದ್ದಾರೆ. 

ಫ್ರಿಡ್ಜ್, ವಾಷಿಂಗ್‌ ಮಷೀನ್‌ ದುಬಾರಿ? 
ಫ್ರಿಡ್ಜ್, ವಾಷಿಂಗ್‌ ಮಷೀನ್‌ ಖರೀದಿ ಮಾಡಿಲ್ಲವೇ? ಹಾಗಿದ್ದರೆ ಮೇ 31 (ಗುರುವಾರ)ರ ಒಳಗಾಗಿ ಖರೀದಿ ಮಾಡಿ. ಏಕೆಂದರೆ ಫ್ರಿಡ್ಜ್, ವಾಷಿಂಗ್‌ ಮಷೀನ್‌, ಮೈಕ್ರೋವೇವ್‌ ಒವೆನ್‌ ಮೇಲಿನ ದರಗಳಲ್ಲಿ 400 ರೂ.ಗಳಿಂದ 1,500 ರೂ.ಗಳ ವರೆಗೆ ಏರಿಕೆಯಾಗುವ ಸಾಧ್ಯತೆ ಇದೆ. ಕಚ್ಚಾ ತೈಲದ ಬೆಲೆ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಹೆಚ್ಚಾಗಿರುವುದರಿಂದ ರುಪಾಯಿ ಮೌಲ್ಯ ಕುಸಿದಿರುವುದು, ಸ್ಟೀಲ್‌ ಮತ್ತು ತಾಮ್ರ ಸೇರಿದಂತೆ ಹಲವು ಲೋಹಗಳ ಮೇಲಿನ ದರಗಳಲ್ಲಿಯೂ ಹೆಚ್ಚಳವಾಗಿದೆ. ಮಾರುಕಟ್ಟೆಗೆ ಬಿಡುಗಡೆಯಾಗಿರುವ ಮಾದರಿಗಳ ಮೇಲೆ ದರ ಅನ್ವಯವಾಗಲಿದೆ. 


Trending videos

Back to Top