ಐಯುಎಂಎಲ್ ಧ್ವಜ ವಿನ್ಯಾಸ ಬದಲು?
Team Udayavani, Jul 24, 2018, 6:00 AM IST
ತಿರುವನಂತಪುರ: ಇಂಡಿಯನ್ ಯೂನಿಯನ್ ಮುಸ್ಲಿಂ ಲೀಗ್ (ಐಯುಎಂಎಲ್) ಪಕ್ಷದ ಧ್ವಜ ಬದಲಾಯಿಸಲು ಚಿಂತನೆ ನಡೆಸಿದೆ ಎಂದು ಹೇಳಲಾಗಿದೆ. ಸದ್ಯ ಇರುವ ಧ್ವಜ ಪಾಕಿಸ್ತಾನ ಮುಸ್ಲಿಂ ಲೀಗ್ನ ಧ್ವಜವನ್ನೇ ಹೋಲುತ್ತಿರುವುದರಿಂದ ಮತ್ತು ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿ ಅಧ್ಯಕ್ಷ ಸಯ್ಯದ್ ವಸೀಂ ರಿಜ್ವಿ ಧ್ವಜದ ವಿರುದ್ಧ ಸುಪ್ರೀಂಕೋರ್ಟ್ನಲ್ಲಿ ಪಿಐಎಲ್ ಅರ್ಜಿ ದಾಖಲಿಸಿರುವ ಕಾರಣ, ಮುಸ್ಲಿಂ ಯೂತ್ ಲೀಗ್ (ಎಂವೈಎಲ್), ಪಕ್ಷದ ಧ್ವಜ ವಿನ್ಯಾಸ ಬದಲು ಮಾಡಲು ಸಲಹೆ ನೀಡಿದೆ.
ಆದರೆ ಪಕ್ಷದ ನಾಯಕರು ಇದು ಕೇವಲ ವದಂತಿ ಎಂದು ಸ್ಪಷ್ಟನೆ ನೀಡಿದ್ದಾರೆಂದು “ದ ನ್ಯೂ ಇಂಡಿಯನ್ ಎಕ್ಸ್ಪ್ರೆಸ್’ ವರದಿ ಮಾಡಿದೆ. ತಿರುವನಂತಪುರದಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯಲ್ಲಿ ನಾಯಕರನ್ನು ಕೆಂಪು ಶಾಲಿನ ನೀಡಿ ಸ್ವಾಗತಿಸಲಾಗಿತ್ತು. ಎಂವೈಲ್ ನಾಯಕರೊಬ್ಬರ ಪ್ರಕಾರ, ಮೂರು ಧ್ವಜ ವಿನ್ಯಾಸಗಳನ್ನು ನೀಡಲಾಗಿದ್ದು, ಈ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗಿಲ್ಲ ಎಂದಿದ್ದಾರೆ..