CONNECT WITH US  

2015ರ ಗಲಭೆ ಕೇಸ್; ಹಾರ್ದಿಕ್ ಪಟೇಲ್ ಗೆ 2 ವರ್ಷ ಜೈಲುಶಿಕ್ಷೆ

ಮೆಹ್ಸಾನಾ(ಅಹ್ಮದಾಬಾದ್): 2015ರಲ್ಲಿ ಪಾಟೀದಾರ್ ಪ್ರತಿಭಟನೆ ವೇಳೆ ನಡೆಸಿದ್ದ ಗಲಭೆಗೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ದೋಷಿ ಎಂದು ಬುಧವಾರ ಆದೇಶ ನೀಡಿರುವ ಗುಜರಾತ್ ನ ವಿಸ್ ನಗರ್ ಕೋರ್ಟ್ 2 ವರ್ಷ ಜೈಲುಶಿಕ್ಷೆ ವಿಧಿಸಿ, 50 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ.

2015ರಲ್ಲಿ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಸಂಚಾಲಕ ಹಾರ್ದಿಕ್ ಪಟೇಲ್ ನೇತೃತ್ವದಲ್ಲಿ ನಡೆದಿದ್ದ ಪ್ರತಿಭಟನೆ ವೇಳೆ ಸುಮಾರು 500 ಮಂದಿ ಪಟೇಲ್ ಸಮುದಾಯದವರು ವಿಸ್ ನಗರದಲ್ಲಿನ ಬಿಜೆಪಿ ಶಾಸಕರ ಕಚೇರಿಯನ್ನು ಧ್ವಂಸಗೊಳಿಸಿದ್ದರು. ಅಲ್ಲದೇ ಪತ್ರಕರ್ತರ ಮೇಲೂ ಹಲ್ಲೆ ನಡೆಸಿದ್ದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾರ್ದಿಕ್ ಪಟೇಲ್ ಹಾಗೂ 17 ಮಂದಿ ವಿರುದ್ಧ ಪ್ರಕರಣ ದಾಖಲಾಗಿತ್ತು. ಬಿಜೆಪಿ ಶಾಸಕ ಋುಷಿಕೇಶ್ ಪಟೇಲ್ ಕಚೇರಿಯನ್ನು ಧ್ವಂಸಗೊಳಿಸಿದ್ದರಿಂದ ಪಾಟೀದಾರ್ ಅನಾಮತ್ ಆಂದೋಲನ್ ಸಮಿತಿ ಮುಖಂಡ ಹಾರ್ದಿಕ್ ಹಾಗೂ ಇತರರ ವಿರುದ್ಧ ವಿಸ್ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.

ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ, ಪ್ರತಿವಾದ ಆಲಿಸಿದ ನಂತರ ವಿಸ್ ನಗರ ಕೋರ್ಟ್, ಹಾರ್ದಿಕ್ ಪಟೇಲ್, ಲಾಲ್ ಜಿತ್ ಪಟೇಲ್ ಹಾಗೂ ಅಂಬಾಲಾಲ್ ಪಟೇಲ್ ದೋಷಿ ಎಂದು ಆದೇಶ ನೀಡಿ, 2 ವರ್ಷಗಳ ಜೈಲುಶಿಕ್ಷೆ ವಿಧಿಸಿ, ತಲಾ 50 ಸಾವಿರ ರೂಪಾಯಿ ದಂಡ ವಿಧಿಸಿ ತೀರ್ಪು ನೀಡಿದೆ ಎಂದು ಮಾಧ್ಯಮದ ವರದಿ ವಿವರಿಸಿದೆ.


Trending videos

Back to Top