CONNECT WITH US  

ಬಿಜೆಪಿ ಗೆಲುವು ಸಮೀಕ್ಷೆ ವರದಿ ಪ್ರಕಟಿಸಿದ ಕಾಂಗ್ರೆಸ್‌

ಹೊಸದಿಲ್ಲಿ: ಕಾಂಗ್ರೆಸ್‌ ಪಕ್ಷದ ಮುಖವಾಣಿ ನ್ಯಾಷನಲ್‌ ಹೆರಾಲ್ಡ್‌ ಪತ್ರಿಕೆಯಲ್ಲಿ ಇತ್ತೀಚೆಗಷ್ಟೇ ರಫೇಲ್‌ ಡೀಲ್‌ ಕೂಡ ಬೋಫೋರ್ಸ್‌ ಹಗರಣದಂತೆಯೇ ಎಂದು ಹೋಲಿಕೆ ಮಾಡಿತ್ತು. ಇದೀಗ ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ಸನ್ನೇ ಬಿಜೆಪಿ ಸೋಲಿಸಲಿದೆ ಎಂದು ಸಮೀಕ್ಷೆಯೊಂದನ್ನು ಪತ್ರಿಕೆ ಪ್ರಕಟಿಸಿ ಎಡವಟ್ಟು ಮಾಡಿಕೊಂಡಿದೆ. ಬಿಎಸ್‌ಪಿ ಮತ್ತು ಕಾಂಗ್ರೆಸ್‌ ಮೈತ್ರಿ ಮಾಡಿಕೊಳ್ಳದೆ, ಪ್ರತ್ಯೇಕವಾಗಿ ಸ್ಪರ್ಧಿಸಿದರೆ 230 ಸ್ಥಾನಬಲದ ಮಧ್ಯಪ್ರದೇಶದಲ್ಲಿ 147 ಸೀಟ್‌ಗಳನ್ನು ಬಿಜೆಪಿ ಪಡೆದು ಸುಲಭವಾಗಿ ಸರಕಾರ ರಚಿಸಲಿದೆ ಎಂದು ವರದಿ ಮಾಡಿದೆ. 

ಒಂದು ವೇಳೆ ಎರಡೂ ಪಕ್ಷಗಳು ಮೈತ್ರಿ ಮಾಡಿಕೊಂಡರೆ ಬಿಜೆಪಿ 126 ಕ್ಷೇತ್ರಗಳಲ್ಲಿ ಗೆಲ್ಲಲಿದೆ ಎಂದು ಸಮೀಕ್ಷೆ ವರದಿಯಲ್ಲಿ ವಿವರಿಸಲಾಗಿದೆ. ಮೈತ್ರಿ ಮಾಡಿಕೊಂಡರೆ ಕಾಂಗ್ರೆಸ್‌ 103 ಹಾಗೂ ಮೈತ್ರಿ ಮಾಡಿಕೊಳ್ಳದಿದ್ದರೆ 73 ಸ್ಥಾನಗಳಲ್ಲಿ ಗೆಲ್ಲಲಿದೆ. ಇಷ್ಟಾದರೂ ಮೈತ್ರಿಯು ಬಿಜೆಪಿಗೆ ಸ್ಪರ್ಧೆ ಒಡ್ಡಬಹುದು ಅಷ್ಟೇ. ಬಹುಮತ ಪಡೆಯಲು ಸಾಧ್ಯವಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

ಅಷ್ಟೇ ಅಲ್ಲ, ಕಾಂಗ್ರೆಸ್‌ಗೆ ತನ್ನ ಮುಖವಾಣಿ ಪತ್ರಿಕೆಯ ಮತ್ತೂಂದು ಆಘಾತವೆಂದರೆ ಮಧ್ಯಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿಯ (ಶೇ. 41) ಪ್ರಭಾವ ಅತಿ ಹೆಚ್ಚಿದ್ದು, ಅವರ ಎದುರು ರಾಹುಲ್‌ ಗಾಂಧಿ (ಶೇ. 9.72) ನಂತರದ ಸ್ಥಾನದಲ್ಲಿದ್ದಾರೆ ಎಂದು ವರದಿ ಮಾಡಿದೆ. ಈ ಸಮೀಕ್ಷೆಯನ್ನು ತಮಿಳುನಾಡು ಮೂಲದ ಸ್ಪಿಕ್‌ ಮೀಡಿಯಾ ನಡೆಸಿದೆ.

Trending videos

Back to Top