ಕಾಂಗ್ರೆಸ್ ಜತೆ ಚೋಸ್ಕಿಗೆ ನಂಟು?
Team Udayavani, Aug 3, 2018, 6:00 AM IST
ಹೊಸದಿಲ್ಲಿ: ಬ್ಯಾಂಕುಗಳಿಗೆ ಕೋಟ್ಯಂತರ ರೂ. ಮೋಸ ಮಾಡಿ ಪರಾರಿಯಾಗಿರುವ ನೀರವ್ ಮೋದಿ ಆಪ್ತ ಮೆಹುಲ್ ಚೋಸ್ಕಿಗೂ, ಕಾಂಗ್ರೆಸ್ಗೂ ನಂಟಿದೆಯೇ? ಈ ಬಗ್ಗೆ ಸ್ವತಃ ಚೋಸ್ಕಿಯ ವಕೀಲ ಡೇವಿಡ್ ಡೋರ್ಸೆಟ್ ಎಂಬುವರು ಹೇಳಿಕೆ ನೀಡಿದ್ದಾರೆ. ಚೋಸ್ಕಿ ಭಾರತದ ಲ್ಲಿರುವ ಕಾಂಗ್ರೆಸ್ ಪಕ್ಷದ ಜತೆ ಸಂಬಂಧವಿರಿಸಿ ಕೊಂಡಿದ್ದಾರೆ. ಹೀಗಾಗಿಯೇ ಆಡಳಿತದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಸರಕಾರ ಚೋಸ್ಕಿ ಬೆನ್ನಿಗೆ ಬಿದ್ದಿದೆ ಎಂದು ಹೇಳಿದ್ದಾರೆ ಎಂದು ರಿಪಬ್ಲಿಕ್ ಟಿವಿ ವರದಿ ಮಾಡಿದೆ.
ಮುಂದಿನ ವರ್ಷದ ಆರಂಭದಲ್ಲಿ ಭಾರತದಲ್ಲಿ ಚುನಾವಣೆ ನಡೆಯಲಿದೆ. ಹೀಗಾಗಿಯೇ ಚೋಸ್ಕಿಯನ್ನು ಹರಕೆಯ ಕುರಿ ಮಾಡಲಾಗುತ್ತಿದೆ. ಆದರೆ, ಚೋಸ್ಕಿ ಒಬ್ಬ ಸಾಮಾನ್ಯ ಉದ್ಯಮಿಯಷ್ಟೇ. ಹೀಗಾಗಿ ಆತ ಭಾರತದಲ್ಲಿರುವ ವಿರೋಧ ಪಕ್ಷದ ಜತೆ ಸಂಪರ್ಕ ಇರಿಸಿಕೊಂಡಿದ್ದಾರೆ ಎಂದು ಡೇವಿಡ್ ಹೇಳಿದ್ದಾರೆ. ದೇಶ ಬಿಟ್ಟು ಓಡಿ ಹೋಗಿರುವ ಸಾಲಗಾರರ ವಿಚಾರದಲ್ಲಿ ಕಾಂಗ್ರೆಸ್ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸುವ ಕೆಲಸ ಮಾಡುತ್ತಿದೆ. ಆದರೆ, ಇದೀಗ ಚೋಸ್ಕಿಯ ವಕೀಲರೇ ಈ ಹೇಳಿಕೆ ನೀಡಿರುವುದರಿಂದ ಕಾಂಗ್ರೆಸ್ಗೆ ಮುಜುಗರವಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.
ಕೇಂದ್ರದ ತಿರುಗೇಟು: ಸಂಸತ್ ಭವನದಲ್ಲೇ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್, ಚೋಸ್ಕಿ ಜತೆಗಿನ ಕಾಂಗ್ರೆಸ್ ನಂಟಿನ ಬಗ್ಗೆ ರಾಹುಲ್ ಗಾಂಧಿ ಸ್ಪಷ್ಟನೆ ನೀಡಲಿ ಎಂದು ಆಗ್ರಹಿಸಿದ್ದಾರೆ. ಇದೇ ವೇಳೆ, ಚೋಕ್ಸಿ ನಮ್ಮ ದೇಶದಲ್ಲೇ ಇದ್ದಾರೆ ಎಂದು ಆ್ಯಂಟಿಗುವಾ ಅಧಿಕಾರಿಗಳು ಗುರುವಾರ ಸ್ಪಷ್ಟಪಡಿಸಿದ್ದಾರೆ. ಜತೆಗೆ, ಸದ್ಯದಲ್ಲೇ ಅವರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಆರಂಭಿಸುತ್ತೇವೆ ಎಂದೂ ಭರವಸೆ ನೀಡಿದ್ದಾರೆ.