CONNECT WITH US  

ಪತ್ರಕರ್ತನಿಂದ ಪ್ರಧಾನಿ ತನಕ...

ಅಟಲ್‌ ಬಿಹಾರಿ ಅವರು ಮಧ್ಯಪ್ರದೇಶದ ಮಧ್ಯಮವರ್ಗದ ಬ್ರಾಹ್ಮಣ ಕುಟುಂಬವೊಂದರಲ್ಲಿ ಜನಿಸಿದರು. 1924ರ ಡಿಸೆಂಬರ್‌ 25 ರಂದು ಗ್ವಾಲಿಯರ್‌ನಲ್ಲಿ ಜನಿಸಿದ ಅಟಲ್‌ ಅವರ ತಂದೆ ಕೃಷ್ಣ ಬಿಹಾರಿ ವಾಜಪೇಯಿ ಮತ್ತು ತಾಯಿ ಕೃಷ್ಣಾ ದೇವಿ. ಇವರದ್ದು ಮೂಲತಃ ಉತ್ತರ ಪ್ರದೇಶದ ಬಾಟೇಶ್ವರ ಜಿಲ್ಲೆಯ ಗ್ರಾಮವಾಗಿದ್ದು ಗ್ವಾಲಿಯರ್‌ಗೆ ವಲಸೆ ಹೋಗಿದ್ದರು. ಅಟಲ್‌ ಅವರ ತಂದೆ ಶಾಲಾ ಶಿಕ್ಷಕರಾಗಿದ್ದು ಹಾಗೆಯೇ ಕವಿ ಕೂಡ. ಗ್ವಾಲಿಯರ್‌ನ ಗೋರ್ಕಿಯಲ್ಲಿರುವ ಸರಸ್ವತಿ ಶಿಶು ಮಂದಿರದಲ್ಲಿ ಪ್ರಾಥಮಿಕ ಶಿಕ್ಷಣ ಪೂರೈಸಿದರು. ಅನಂತರ ಗ್ವಾಲಿಯರ್‌ನ ವಿಕ್ಟೋರಿಯಾ ಕಾಲೇಜಿನಲ್ಲಿ (ಈಗ ಲಕ್ಷ್ಮಿಬಾಯಿ ಕಾಲೇಜು) ಹಿಂದಿ, ಸಂಸ್ಕೃತ ಮತ್ತು ಇಂಗ್ಲಿಷ್‌ನಲ್ಲಿ ಪದವಿ ಪೂರೈಸಿದರು. ಬಳಿಕ ಕಾನ್ಪುರದ ಡಿಎವಿ ಕಾಲೇಜಿನಲ್ಲಿ ರಾಜಕೀಯ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು. ಹತ್ತಿರದವರ ಪಾಲಿಗೆ ಅಟಲ್‌ 'ಬಾಪ್ಜಿ'ಯೇ ಆಗಿದ್ದರು. ವಿವಾಹವಾಗದ ಅಟಲ್‌ ಅವರು, ನಮಿತಾ ಎಂಬುವರನ್ನು ದತ್ತು ಪಡೆದು ಮಗಳಾಗಿ ಬೆಳೆಸಿದರು. ಅಟಲ್‌ ಅವರಿಗೆ ಹಸಿರು ಪರಿಸರವೆಂದರೆ ಪ್ರಾಣ. ಹೀಗಾಗಿಯೇ ಮನಾಲಿ ಇವರಿಗೆ ಪ್ರಿಯವಾದ ಸ್ಥಳವಾಗಿತ್ತು.


ಸ್ವಾತಂತ್ರ್ಯ ಚಳವಳಿಯಲ್ಲಿ ಭಾಗಿ

1942ರಲ್ಲಿ ಕ್ವಿಟ್‌ ಇಂಡಿಯಾ ಚಳವಳಿಯಲ್ಲಿ ಅಟಲ್‌ ಮತ್ತು ಅಣ್ಣ ಪ್ರೇಮ್‌ ಅವರೊಂದಿಗೆ ಭಾಗಿಯಾಗಿ 23 ದಿನಗಳ ಜೈಲುವಾಸವನ್ನೂ ಅನುಭವಿಸಿದ್ದರು. 1951ರಲ್ಲಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಸ್ಥಾಪಿಸಿದ ಭಾರತೀಯ ಜನಸಂಘದ ಸ್ಥಾಪಕ ಸದಸ್ಯರು. 1951ರಲ್ಲಿ ಕಾಶ್ಮೀರಕ್ಕೆ ಭೇಟಿ ಕೊಡುವವರನ್ನು ಸರಿಯಾಗಿ ನಡೆಸಿಕೊಳ್ಳುತ್ತಿಲ್ಲ ಎಂದು ಆರೋಪಿಸಿ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಮತ್ತು ಅಟಲ್‌ ಅವರು ಆಮರಣಾಂತ ಉಪವಾಸ ಸತ್ಯಾಗ್ರಹ ನಡೆಸಿದ್ದರು. ಈ ಪ್ರತಿಭಟನೆ ವೇಳೆಯಲ್ಲೇ ಜೈಲಿನಲ್ಲೇ ಶ್ಯಾಮ್‌ ಪ್ರಸಾದ್‌ ಮುಖರ್ಜಿ ಅವರು ಸಾವನ್ನಪ್ಪಿದರು. ವಾಜಪೇಯಿ ಅವರು ಕೆಲಕಾಲ ಕಾನೂನು ವ್ಯಾಸಂಗ ಮಾಡಿದರಾದರೂ, ಅರ್ಧದಲ್ಲೇ ಬಿಟ್ಟರು. ಆದರೆ ಪತ್ರಕರ್ತ ವೃತ್ತಿ ಇವರನ್ನು ಕೈಬೀಸಿ ಕರೆಯಿತು. ಹಿಂದಿ ವಾರಪತ್ರಿಕೆ ಪಾಂಚಜನ್ಯ, ಹಿಂದಿ ಮಾಸಿಕ ರಾಷ್ಟ್ರಧರ್ಮ ಹಾಗೂ ದಿನಪತ್ರಿಕೆಗಳಾದ ಅರ್ಜುನ್‌ ಮತ್ತು ಸ್ವದೇಶ್‌ನ ಸಂಪಾದಕರಾಗಿ ಕೆಲಸ ಮಾಡಿದರು. ಅನಂತರ ರಾಜಕೀಯ ಪ್ರವೇಶಿಸಿ 9 ಬಾರಿ ಲೋಕಸಭೆ ಮತ್ತು 2 ಬಾರಿ ರಾಜ್ಯಸಭೆ ಸದಸ್ಯರಾಗಿ ಸೇವೆ ಸಲ್ಲಿಸಿದರು. ಅಲ್ಲದೆ ಮೂರು ಬಾರಿ ಪ್ರಧಾನಿಯಾದರು.

Trending videos

Back to Top