CONNECT WITH US  

ರಂಜನ್ ಗೋಗೋಯ್ ಸುಪ್ರೀಂನ ಮುಂದಿನ ಸಿಜೆಐ; ಕೇಂದ್ರಕ್ಕೆ ಶಿಫಾರಸು

ನವದೆಹಲಿ:ಸುಪ್ರೀಂಕೋರ್ಟ್ ನ ಮುಂದಿನ ಮುಖ್ಯ ನ್ಯಾಯಮೂರ್ತಿಯಾಗಿ ಸುಪ್ರೀಂಕೋರ್ಟ್ ನ ಹಿರಿಯ ಜಡ್ಜ್ ರಂಜನ್ ಗೋಗೋಯ್ ಅವರ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಹಾಲಿ ಸಿಜೆಐ ದೀಪಕ್ ಮಿಶ್ರಾ ಅವರು ಶಿಫಾರಸು ಮಾಡಿದ್ದಾರೆ.

ಹಾಲಿ ಮುಖ್ಯ ನ್ಯಾಯಮೂರ್ತಿ ದೀಪಕ್ ಮಿಶ್ರಾ ಅವರು ಅಕ್ಟೋಬರ್ 2ರಂದು ಸೇವೆಯಿಂದ ನಿವೃತ್ತಿಯಾಗಲಿದ್ದು, ನಿಯಮದಂತೆ ತಮ್ಮ ನಿವೃತ್ತಿಗೂ ಮುನ್ನ ಮುಂದಿನ ಸಿಜೆಐ ಯಾರಾಗಬೇಕು ಎಂಬ ಹೆಸರನ್ನು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕು.

ಮೆಮೊರಾಂಡಂ ಪ್ರಕ್ರಿಯೆ ಪ್ರಕಾರ ಕಳೆದ ತಿಂಗಳು ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು, ದೇಶದ ಮುಖ್ಯನ್ಯಾಯಮೂರ್ತಿ ಮಿಶ್ರಾ ಅವರಿಗೆ ಪತ್ರ ಬರೆದು ನಿಮ್ಮ ಮುಂದಿನ ಸಿಜೆಐ ಯಾರು ಎಂಬ ಹೆಸರನ್ನು ಶಿಫಾರಸು ಮಾಡಿ ಎಂದು ಮನವಿ ಮಾಡಿಕೊಂಡಿದ್ದರು ಎಂದು ವರದಿ ತಿಳಿಸಿದೆ.

ಅಕ್ಟೋಬರ್ 3ರಂದು ಗೋಗೋಯ್ ಅವರು ಸಿಜೆಐ ಆಗಿ ಪ್ರಮಾಣವಚನ ಸ್ವೀಕರಿಸುವ ಸಾಧ್ಯತೆ ಇದೆ. ಜಸ್ಟೀಸ್ ಗೋಗೋಯ್ ಅವರು 1954ರಂದು ಜನಿಸಿದ್ದರು. ಕಾನೂನು ಶಿಕ್ಷಣ ಪದವಿ ಪಡೆದ ಬಳಿಕ 1978ರಲ್ಲಿ ಬಾರ್ ಅಸೋಸಿಯೇಶನ್ ಗೆ ಸೇರ್ಪಡೆಗೊಂಡಿದ್ದರು. 2001ರಲ್ಲಿ ಗೋಗೋಯ್ ಅವರನ್ನು ಗುವಾಹಟಿ ಹೈಕೋರ್ಟ್ ನ್ಯಾಯಾಧೀಶರನ್ನಾಗಿ  ನೇಮಕ ಮಾಡಲಾಗಿತ್ತು. ತದನಂತರ 2011ರಲ್ಲಿ ಗೋಗೋಯ್ ಅವರು ಪಂಜಾಬ್, ಹರ್ಯಾಣ ಹೈಕೋರ್ಟ್ ನ ಮುಖ್ಯ ನ್ಯಾಯಮೂರ್ತಿಯಾಗಿ ಸೇವೆ ಸಲ್ಲಿಸಿದ್ದರು.

ಕಳೆದ ಜನವರಿ ತಿಂಗಳಿನಲ್ಲಿ ಗೋಗೋಯ್ ಸೇರಿದಂತೆ ನಾಲ್ವರು ಹಿರಿಯ ನ್ಯಾಯಾಧೀಶರು ನವದೆಹಲಿಯಲ್ಲಿ ದಿಢೀರ್ ಪತ್ರಿಕಾಗೋಷ್ಠಿ ಕರೆದು, ದೇಶದ ಪ್ರಜಾಪ್ರಭುತ್ವ ವ್ಯವಸ್ಥೆ ಅಪಾಯದಲ್ಲಿದೆ ಎಂದು ಆರೋಪಿಸಿದ್ದರು. ಈ ಹೇಳಿಕೆ ದೇಶಾದ್ಯಂತ ದೊಡ್ಡ ಮಟ್ಟದ ಚರ್ಚೆಗೆ ಗ್ರಾಸವಾಗಿತ್ತು.

Trending videos

Back to Top