CONNECT WITH US  

ಫೇಸ್‌ಬುಕ್‌ ಲೈಕ್ಸ್‌, ಟ್ವಿಟರ್‌ ಫಾಲೋವರ್ಸ್‌ ಇದ್ರೆ ಟಿಕೆಟ್‌

ಟಿಕೆಟ್‌ ಬೇಕಿದ್ದರೆ ಇದು ಕಡ್ಡಾಯ; ಮ.ಪ್ರ.ಕಾಂಗ್ರೆಸ್‌ನ ನಿಯಮ

ಕಲ್ಲೆಸೆತದಿಂದ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌ರ ಬಸ್ಸು ಜಖಂಗೊಂಡಿರುವುದು.

ಭೋಪಾಲ್‌: ಚುನಾವಣೆ ನಿಲ್ಲಲು ಅಭ್ಯರ್ಥಿಗಳ ಬಳಿ ಹಣ ಬಲ, ಜನಬಲವಿದ್ದರೆ ಸಾಕು ಎಂಬ ಮಾತು ಸದ್ಯದಲ್ಲೇ ಬದಲಾಗುವ ಸಾಧ್ಯತೆಯಿದೆ. ಏಕೆಂದರೆ, ಚುನಾವಣೆಯ ಹೊಸ್ತಿಲಲ್ಲಿ ಇರುವ ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್‌ ಟಿಕೆಟ್‌ ಆಕಾಂಕ್ಷಿಗಳಿಗೆ ಆ ಪಕ್ಷ ಷರತ್ತೂಂದನ್ನು ವಿಧಿಸಿದ್ದು, ಫೇಸ್‌ಬುಕ್‌ನಲ್ಲಿ ಕನಿಷ್ಠ 15 ಸಾವಿರ ಲೈಕ್ಸ್‌ ಹಾಗೂ ಟ್ವಿಟರ್‌ನಲ್ಲಿ ಕನಿಷ್ಠ 5000 ಫಾಲೋವರ್‌ಗಳನ್ನು ಹೊಂದಿದ್ದರೆ ಮಾತ್ರ ಅವರ ಹೆಸರುಗಳನ್ನು ಟಿಕೆಟ್‌ ನೀಡಿಕೆಗೆ ಪರಿಗಣಿಸಲಾಗುತ್ತದೆಂದು ಹೇಳಿದೆ. ಟಿಕೆಟ್‌ ಆಕಾಂಕ್ಷಿಗಳು ಪಕ್ಷದ ಬೂತ್‌ ಮಟ್ಟದ ಕಾರ್ಯಕರ್ತರ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಸಕ್ರಿಯರಾಗಿರಬೇಕು ಹಾಗೂ ಮಧ್ಯ ಪ್ರದೇಶ ಕಾಂಗ್ರೆಸ್‌ ಘಟಕ ಮಾಡಿರುವ ಎಲ್ಲಾ ಟ್ವೀಟ್‌ಗಳನ್ನೂ ರೀಟ್ವೀಟ್‌ ಮಾಡಿರಬೇಕು ಎಂದಿರುವ ಕಾಂಗ್ರೆಸ್‌, ಟಿಕೆಟ್‌ ಆಕಾಂಕ್ಷಿಗಳು ಈ ಎಲ್ಲಾ ದಾಖಲೆಗಳೊಂದಿಗೆ ಸೆ. 15ರೊಳಗೆ ಅರ್ಜಿ ಸಲ್ಲಿಸುವಂತೆ ಸೂಚಿಸಿದೆ. 

ಆನ್‌ಲೈನ್‌ ಫೈಟಿಂಗ್‌: ಸಾಮಾಜಿಕ ಜಾಲತಾಣಗಳ ಮೂಲಕ ಮತದಾರರನ್ನು ಸೆಳೆಯಲು ಬಿಜೆಪಿ ಈಗಾಗಲೇ 65,000 "ಸೈಬರ್‌ ಸಿಪಾಯಿ'ಗಳನ್ನು ನೇಮಿಸಿದ್ದು, ಇದಕ್ಕೆ ಪ್ರತಿಯಾಗಿ ಕಾಂಗ್ರೆಸ್‌ 4,000 "ರಾಜೀವ್‌ ಕೆ ಸಿಪಾಯಿ'ಗಳನ್ನು ನೇಮಿಸಿದ್ದು, ಇನ್ನೂ 5,000 ಸ್ವಯಂ ಸೇವಕರಿಗೆ ಸಾಮಾಜಿಕ ಜಾಲತಾಣಗಳಲ್ಲಿ ಪ್ರಚಾರದ ತರಬೇತಿಯನ್ನು ಸೆ. 25ರಿಂದ ಆರಂಭಿಸಲಾಗುವುದು ಎಂದು ಕಾಂಗ್ರೆಸ್‌ ತಿಳಿಸಿದೆ. ಪ್ರಚಾರಕ್ಕೆ ಎರಡೂ ಪಕ್ಷಗಳು ಫೇಸ್‌ಬುಕ್‌, ಟ್ವಿಟರ್‌ಗಿಂತ ವಾಟ್ಸ್‌ಆ್ಯಪ್‌ ಪ್ರಧಾನವಾಗಿ ಆಶ್ರಯಿಸಿದೆ.

ಕಾಂಗ್ರೆಸ್‌ ನನ್ನ ರಕ್ತ ಬಯಸುತ್ತಿದೆ: ಚೌಹಾಣ್‌
"ಜನಾಶೀರ್ವಾದ ಯಾತ್ರೆ'ಯ ಅಂಗವಾಗಿ ಸಿಧಿ ಜಿಲ್ಲೆಯ ಚುರ್ಹಾಟ್‌ ಕ್ಷೇತ್ರಕ್ಕೆ ಆಗಮಿಸಿದ್ದ ಮುಖ್ಯಮಂತ್ರಿ ಶಿವರಾಜ್‌ ಚೌಹಾಣ್‌ರ ಬಸ್‌ ಮೇಲೆ  ಮೇಲೆ ಪ್ರತಿಭಟನಾಕಾರರು ಚಪ್ಪಲಿ, ಕಲ್ಲು ತೂರಾಟ ನಡೆಸಿದ್ದಾರೆ. ಕಪ್ಪು ಬಾವುಟವನ್ನೂ ಪ್ರದರ್ಶಿಸಲಾಗಿದೆ. ಘಟನೆಯನ್ನು ತೀವ್ರವಾಗಿ ಖಂಡಿಸಿರುವ ಚೌಹಾಣು, ಕಾಂಗ್ರೆಸ್‌ ನನ್ನ ರಕ್ತಕ್ಕಾಗಿ ಹಾತೊರೆಯುತ್ತಿದೆ ಎಂಬ ಗಂಭೀರ ಆರೋಪ ಮಾಡಿದ್ದಾರೆ. ಕಾಂಗ್ರೆಸ್‌ ನಾಯಕ ಅಜಯ್‌ ಸಿಂಗ್‌ ತಮ್ಮೊಂದಿಗೆ ಹೀಗೆ ಅನೇರವಾಗಿ ಯುದ್ಧ ಮಾಡದೇ ನೇರ ವಾಗಿ ಯುದ್ಧ ಮಾಡಲಿ ಎಂದು ಸವಾಲು ಹಾಕಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ಅಜಯ್‌ ಸಿಂಗ್‌, ಈ ಘಟನೆಗೂ ತಮಗೂ ಸಂಬಂಧವಿಲ್ಲ ಎಂದಿದ್ದಾರೆ. ಎಸ್ಸಿ, ಎಸ್ಟಿ ಕಾಯ್ದೆ ತಿದ್ದು ಪಡಿ ಹಿನ್ನೆಲೆಯಲ್ಲಿ ರೊಚ್ಚಿ ಗೆದ್ದ ಜನರಿಂದ ಈ ಕೃತ್ಯ ನಡೆದಿರಬಹುದು ಎಂದಿದ್ದಾರೆ.

ಸಿಂಧಿಯಾಗೆ ಶಾಸಕಿ ಪುತ್ರನ ಬೆದರಿಕೆ
ಈ ಬೆಳವಣಿಗೆಗಳ ನಡುವೆ ಬಿಜೆಪಿ ಶಾಸಕ ಉಮಾದೇವಿ ಖಾಟಿಕ್‌ ಅವರ ಪುತ್ರ ಪ್ರಿನ್ಸ್‌ದೀಪ್‌ ಲಾಲ್‌ಚಂದ್‌ ಖಾಟಿಕ್‌ ಕಾಂಗ್ರೆಸ್‌ ನಾಯಕ ಜ್ಯೋತಿರಾದಿತ್ಯ ಸಿಂಧಿಯಾ ಅವರಿಗೆ ಗುಂಡು ಹಾರಿಸುವುದಾಗಿ ಬೆದರಿಕೆ ಹಾಕಿದ್ದಾನೆ. ಈ ಬಗ್ಗೆ ಆತ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಅಪ್‌ಡೇಟ್‌ ಮಾಡಿದ್ದಾನೆ. "ಜ್ಯೋತಿರಾದಿತ್ಯ ಸಿಂಧಿಯಾ ನಿಮ್ಮಲ್ಲಿ ಜಿವಾಜಿರಾವ್‌ನ ನೆತ್ತರು ಹರಿಯುತ್ತಿದೆ. ಝಾನ್ಸಿ ರಾಣಿಯನ್ನು ಕೊಂದದ್ದು ಯಾರು? ಹಟ್ಟಾ ಜಿಲ್ಲೆಗೆ ಕಾಲಿಟ್ಟರೆ ಗುಂಡು ಹಾರಿಸಿ ಕೊಲ್ಲುವೆ' ಎಂದು ಬರೆದುಕೊಂಡಿದ್ದಾನೆ. ಹಟ್ಟಾದಲ್ಲಿ ಸೆ.5ರಂದು ಕಾಂಗ್ರೆಸ್‌ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಸಿಂಧಿಯಾ ಭಾಗವಹಿಸಲಿದ್ದಾರೆ.

65,000 ಬಿಜೆಪಿಯ ಸೈಬರ್‌ ಸಿಪಾಯಿಗಳ  ಸಂಖ್ಯೆ
4000 ಕಾಂಗ್ರೆ ಸ್‌ ಕಡೆಯಿಂದ ರಾಜೀವ್‌ ಕೆ ಸಿಪಾಯಿ  
5000 ಕಾಂಗ್ರೆಸ್‌ಗಾಗಿ ಕೆಲಸ ಮಾಡಲಿರುವ ಸಾಮಾಜಿಕ ಜಾಲತಾಣಕ್ಕಾಗಿನ ಸಿಬ್ಬಂದಿ

ಇದೊಂದು ದುರದೃಷ್ಟಕರ ಪೋಸ್ಟ್‌ . ಸಿಂಧಿಯಾ ಬಗ್ಗೆ ನನಗೆ ಗೌರವ ಇದೆ. ಪುತ್ರನ ಬಳಿ ಈ ಪೋಸ್ಟ್‌ ಬಗ್ಗೆ ಪ್ರಶ್ನೆ ಮಾಡುವೆ ಮತ್ತು ಅದನ್ನು ತೆಗೆದು ಹಾಕಲು ಆತನಿಗೆ ಸೂಚಿಸುವೆ.
ಉಮಾದೇವಿ ಖಾಟಿಕ್‌ ,  ಬಿಜೆಪಿ ಶಾಸಕಿ
 


Trending videos

Back to Top