ಸಲಿಂಗ ಕಾಮ: ಇಂದು ಸುಪ್ರೀಂ ತೀರ್ಪು?
Team Udayavani, Sep 6, 2018, 6:00 AM IST
ನವದೆಹಲಿ: ಸಲಿಂಗ ಕಾಮ ಅಪರಾಧವೇ, ನ್ಯಾಯ ಸಮ್ಮತವೇ ಎಂಬುದರ ಬಗ್ಗೆ ಸುಪ್ರೀಂ ಕೋರ್ಟ್ ಗುರುವಾರ ಮಹತ್ವದ ತೀರ್ಪು ನೀಡುವ ನಿರೀಕ್ಷೆಯಿದೆ. ಸಹಮತದ ಸಲಿಂಗ ಕಾಮವನ್ನು ಅಪರಾಧವೆಂದು ಪರಿಗಣಿಸುವ ಭಾರತೀಯ ದಂಡ ಸಂಹಿತೆಯ 377ನೇ ಪರಿಚ್ಛೇದದ ತಿದ್ದುಪಡಿ ಕುರಿತಾಗಿ ನ್ಯಾಯಾಲಯದಲ್ಲಿ ಸಲ್ಲಿಕೆಯಾಗಿರುವ ಮನವಿ ಅರ್ಜಿಗಳ ಕುರಿತಂತೆ ದೀರ್ಘ ಕಾಲದ ವಿಚಾರಣೆಗೆ ನಡೆಸಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯ ಮೂರ್ತಿ ದೀಪಕ್ ಮಿಶ್ರಾ ನೇತೃತ್ವದ ನ್ಯಾಯಪೀಠ, ಜು. 17ರಂದು ವಿಚಾರಣೆ ಅಂತ್ಯಗೊಳಿಸಿ ತೀರ್ಪನ್ನು ಕಾಯ್ದಿರಿಸಿತ್ತು.
ತಿದ್ದುಪಡಿ ಕುರಿತ ಮನವಿಗಳ ಬಗ್ಗೆ ತನ್ನ ಅಭಿಮತವನ್ನು ಕೇಳಿದ್ದ ಸುಪ್ರೀಂ ಕೋರ್ಟ್ಗೆ ಸ್ಪಷ್ಟನೆ ನೀಡಿದ್ದ ಕೇಂದ್ರ ಸರ್ಕಾರ, ಅದನ್ನು ನ್ಯಾಯಾಲಯದ ವಿವೇಚನೆಗೆ ಬಿಟ್ಟಿರುವ ವಿಚಾರ ಎಂದಿತ್ತು.