CONNECT WITH US  

ಕಾಂಗ್ರೆಸ್‌ ಪಕ್ಷದಲ್ಲಿ ಬ್ರಾಹ್ಮಣ ವಂಶವಾಹಿ

ಹರ್ಯಾಣದಲ್ಲಿ ಕೈ ನಾಯಕ ಸುರ್ಜೆವಾಲ ಹೇಳಿಕೆ

ಹೊಸದಿಲ್ಲಿ: ಮಧ್ಯ ಪ್ರದೇಶ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಿಧಾನವಾಗಿ "ಹಿಂದೂ ಜಪ' ಮಾಡಲು ಶುರು ಮಾಡಿದೆ. ಮಂಗಳವಾರವಷ್ಟೇ, ಕಾಂಗ್ರೆಸ್‌ ಮಧ್ಯಪ್ರದೇಶದಲ್ಲಿ ಗೆದ್ದರೆ ಪ್ರತಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಗೋ ಶಾಲೆ ಕಟ್ಟುವ ಭರವಸೆಯನ್ನು ಪಕ್ಷದ ನಾಯಕ ಕಮಲ್‌ನಾಥ್‌ ನೀಡಿದ್ದರು. ಅದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿರುವ ಪಕ್ಷದ ವಕ್ತಾರ ರಣದೀಪ್‌ ಸುರ್ಜೆವಾಲ, ಕಾಂಗ್ರೆಸ್‌ ಪಕ್ಷದಲ್ಲಿ ಬ್ರಾಹ್ಮಣರ ವಂಶವಾಹಿ (ಡಿಎನ್‌ಎ) ಇದೆ ಎಂದಿದ್ದಾರೆ. ಇದು, ಬಿಜೆಪಿಯ "ಹಿಂದುತ್ವ' ತಂತ್ರಗಾರಿಕೆಯನ್ನು ಕಾಂಗ್ರೆಸ್‌ ನಕಲು ಮಾಡುತ್ತಿರುವುದನ್ನು ಎತ್ತಿ ತೋರಿಸಿದೆ. 

ಹರ್ಯಾಣದ ಕುರು ಕ್ಷೇತ್ರದಲ್ಲಿ ನಡೆದ ಬ್ರಾಹ್ಮಣ ಸಮಾಜದ ಮಹಾ ಸಮ್ಮೇಳನದಲ್ಲಿ ಮಾತನಾಡಿದ ಸುಜೇìವಾಲ, "ಭಾರತದ ಮೊದಲ ಸ್ವಾತಂತ್ರ್ಯ ಸಂಗ್ರಾಮದಿಂದ ಈವರೆಗೂ ಸಮಾಜವನ್ನು ಒಂದು ನಿರ್ದಿಷ್ಟ ಅಭಿವೃದ್ಧಿಯ ಕಡೆಗೆ ತರುವಲ್ಲಿ ಬ್ರಾಹ್ಮಣ ಸಮುದಾಯದ ಸಮರ್ಥ ನಾಯಕತ್ವವೇ ಕಾರಣವಾಗಿದೆ. ಮೋತಿ ಲಾಲ್‌ ವೋರಾ, ಜವಹಾರ್‌ಲಾಲ್‌ ನೆಹರೂ, ಚಂದ್ರಶೇಖರ ಆಜಾದ್‌ ಹೀಗೆ ಕಾಂಗ್ರೆಸ್‌ನಲ್ಲಿ ಬ್ರಾಹ್ಮಣ್ಯದ ವಂಶವಾಹಿ ಇದೆ' ಎಂದಿದ್ದಾರೆ. 

ರಾಹುಲ್‌ "ಋಷಿ'!: ಮಾನಸ ಸರೋವರ ಯಾತ್ರೆಯಲ್ಲಿರುವ ರಾಹುಲ್‌ ಗಾಂಧಿ, ನೇಪಾಳದಲ್ಲಿ ಚಿಕನ್‌ ಸೂಪ್‌ ಕುಡಿದಿದ್ದಾರೆಂದು ಬಿಜೆಪಿ ಆರೋಪಿಸಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಪುರಾಣ ಕಾಲದಲ್ಲಿ ಋಷಿ ಮುನಿಗಳು ತಪಸ್ಸಿಗೆ ಕೂತಾಗಲೆಲ್ಲಾ ರಾಕ್ಷಸರು ಅವರ ತಪಸ್ಸನ್ನು ಭಂಗಗೊಳಿಸಲು ಯತ್ನಿಸುತ್ತಿದ್ದರು. ಈಗ ರಾಹುಲ್‌ ಅವರು ಮಾನಸ ಸರೋವರ ಯಾತ್ರೆ ಕೈಗೊಂಡಿರುವ ತಪಸ್ಸನ್ನು ಬಿಜೆಪಿ ನಾಯಕರು ಭಂಗಗೊಳಿಸಲು ಯತ್ನಿಸುತ್ತಿದ್ದಾರೆ' ಎಂದಿದ್ದಾರೆ. 

ಪತ್ರಕರ್ತರು ಅಸುನೀಗಿದರೆ 4 ಲಕ್ಷ
ಭೋಪಾಲ್‌: ಕರ್ತವ್ಯದಲ್ಲಿದ್ದಾಗ  ಪರ್ತಕರ್ತರು ಅಸುನೀಗಿದರೆ  ನೀಡುವ ಪರಿಹಾರ ಧನವನ್ನು ಮಧ್ಯಪ್ರದೇಶ ಸರಕಾರ 1 ಲಕ್ಷದಿಂದ 4 ಲಕ್ಷ ರೂ.ಗೆ ಏರಿಸಿದೆ. ವರದಿಗಾರಿಕೆ ವೇಳೆ ಪತ್ರಕರ್ತರ, ಕ್ಯಾಮರಾಮನ್‌ಗಳ ವಾಹನ, ಮತ್ತಿತರ ಬೆಲೆಬಾಳುವ ವಸ್ತುಗಳಿಗೆ ಹಾನಿಯಾದರೆ ನೀಡುತ್ತಿದ್ದ ಪರಿಹಾರ ಹಣವನ್ನು 25,500 ರೂ.ಗಳಿಂದ  50,000 ರೂ.ಗೆ ಏರಿಸಲಾಗಿದೆ. ಮಂಗಳವಾರ ನಡೆದ ಸಂಪುಟ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ವರ್ಷಾಂತ್ಯಕ್ಕೆ ಚುನಾವಣೆ ಹಿನ್ನೆಲೆಯಲ್ಲಿ ಈ ನಿರ್ಧಾರ ಗಮನಾರ್ಹವಾಗಿದೆ.

Trending videos

Back to Top