CONNECT WITH US  

ರಾಹುಲ್‌ ನಾಯಕತ್ವಕ್ಕೆ ಬೇಡಿಕೆ ಬರುತ್ತೆ

ನವದೆಹಲಿ: ಈಗಿನ ಪರಿಸ್ಥಿತಿಯಲ್ಲಿ ಅಲ್ಲದಿದ್ದರೆ ಮುಂದಿನ ದಿನಗಳಲ್ಲಿ ಖಂಡಿತವಾಗಿಯೂ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪ್ರತಿಪಕ್ಷಗಳ ಒಮ್ಮತದ ನಾಯಕನಾಗುತ್ತಾರೆ.

ಹೀಗೆಂದು ಲೋಕಸಭೆಯ ಕಾಂಗ್ರೆಸ್‌ ನಾಯಕ ಮಲ್ಲಿಕಾರ್ಜುನ ಖರ್ಗೆ "ಪಿಟಿಐ' ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಹೇಳಿದ್ದಾರೆ. ಯಾರ ನೇತೃತ್ವದಲ್ಲಿ ಪ್ರತಿಪಕ್ಷಗಳು2019ರ ಚುನಾವಣೆ ಎದುರಿಸಲಿವೆ ಎಂಬ ಪ್ರಶ್ನೆಗೆ ಉತ್ತರಿಸಿದ ಖರ್ಗೆ, "ಸದ್ಯ ನಾವು ಎಲ್ಲರನ್ನೂ ಒಗ್ಗೂಡಿಸಿ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರವನ್ನು ಸೋಲಿಸುವುದಕ್ಕೆ ಆದ್ಯತೆ ನೀಡುತ್ತೇವೆ.

ಮುಂದೊಂದು ದಿನ ರಾಹುಲ್‌ ನಾಯಕತ್ವವನ್ನು ಇತರೆ ಪ್ರತಿಪಕ್ಷಗಳೂ ಒಪ್ಪಿಕೊಳ್ಳಲಿವೆ ಎಂಬ ನಂಬಿಕೆ ಇದೆ' ಎಂದಿದ್ದಾರೆ.

ಸದ್ಯದ ಪರಿಸ್ಥಿತಿಯಲ್ಲಿ ಪುದುಚೇರಿಯಿಂದ ಜಮ್ಮು ಮತ್ತು ಕಾಶ್ಮೀರದ ವರೆಗೆ ಪ್ರತಿಪಕ್ಷಗಳ ಸಾಲಿನಲ್ಲಿ ರಾಹುಲ್‌ ಗಾಂಧಿಯವರೇ ಸ್ವೀಕೃತವಾಗುವ ನಾಯಕ. ಅವರಲ್ಲದೆ ಭಾರತದಾದ್ಯಂತ ಸ್ವೀಕಾರಾರ್ಹವಾದ ನಾಯಕ ಪ್ರತಿಪಕ್ಷಗಳಲ್ಲಿ ಯಾರಿದ್ದಾರೆ ಎಂದೂ ಖರ್ಗೆ ಪ್ರಶ್ನಿಸಿದ್ದಾರೆ.

ಈ ಮೂಲಕ ಮಮತಾ ಬ್ಯಾನರ್ಜಿ ಪ. ಬಂಗಾಳಕ್ಕೆ, ಬಿಎಸ್‌ಪಿ ನಾಯಕಿ ಉತ್ತರ ಪ್ರದೇಶಕ್ಕೆ ಸೀಮಿತವಾಗಿದ್ದಾರೆ ಎಂದು
ಪರೋಕ್ಷವಾಗಿ ಖರ್ಗೆ ಹೇಳಿದ್ದಾರೆ.

ಹಾಲಿ ಕೇಂದ್ರ ಸರ್ಕಾರವನ್ನು ಕಿತ್ತೂಗೆಯಲು ದೇಶದ ಜನರು ರಾಹುಲ್‌ ಅವರ ನಾಯಕತ್ವವನ್ನು ಎದುರು ನೋಡುತ್ತಿದ್ದಾರೆ. ಬಿಜೆಪಿ ವಿರುದಟಛಿದ ಹೋರಾಟಕ್ಕೆ ಆರ್‌ಜೆಡಿ, ಎನ್‌ಸಿಪಿ, ಎಡಪಕ್ಷಗಳು ಈಗಾಗಲೇ ಕಾಂಗ್ರೆಸ್‌ ಜತೆಗೆ ಕೈಜೋಡಿಸಿವೆ. ಚುನಾವಣೆಯ ದಿನಗಳು ಸಮೀಪಿಸುತ್ತಿರುವಂತೆಯೇ ಇನ್ನೂ ಹೆಚ್ಚಿನ ಪಕ್ಷಗಳು ಕಾಂಗ್ರೆಸ್‌ ನೇತೃತ್ವದ ಒಕ್ಕೂಟಕ್ಕೆ ಸೇರ್ಪಡೆಯಾಗಲಿವೆ ಎಂದು ಅವರು ಹೇಳಿದ್ದಾರೆ. ಮೋದಿ ಪ್ರಜಾಪ್ರಭುತ್ವ ನಾಶಮಾಡುತ್ತಿದ್ದಾರೆಂದು ಆರೋಪಿಸಿದ ಖರ್ಗೆ, ಅವರು ನಿರಂಕುಶವಾದಿಯಾಗಿದ್ದಾರೆ. ಅವರದ್ದೇ ನಿಯಮಗಳನ್ನು ದೇಶದ ಮೇಲೆ ಹೇರಲು ಮುಂದಾಗಿದ್ದಾರೆ ಎಂದು ಟೀಕಿಸಿದ್ದಾರೆ.

Trending videos

Back to Top