CONNECT WITH US  

ನಕ್ಸಲರಿಗೆ ನಾಯಕತ್ವ ಸಮಸ್ಯೆ

ನಗರದ ಬುದ್ಧಿಜೀವಿ ಯುವಕರ ಸೆಳೆಯಲು ಚಿಂತನೆ

ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ - Representative Image Used

ಕೋಲ್ಕತ್ತಾ: ನಕ್ಸಲರು ನಾಯಕತ್ವ ಸಮಸ್ಯೆ ಎದುರಿಸುತ್ತಿದ್ದು, ಅದನ್ನು ನೀಗಿಸಲು ನಗರದಲ್ಲಿರುವ ಬುದ್ಧಿಜೀವಿ ಯುವಕರನ್ನು ಸೆಳೆಯಲು ಚಿಂತನೆ ನಡೆಸುತ್ತಿದೆ. ಜೊತೆಗೆ, ಬುಡಕಟ್ಟು ಜನಾಂಗೀಯರು, ಪರಿಶಿಷ್ಟ ಜಾತಿ, ವರ್ಗಕ್ಕೆ ಸೇರಿದವರನ್ನು ತಳಮಟ್ಟದ ಕಾರ್ಯಕರ್ತರನ್ನಾಗಿ ನೇಮಕ ಮಾಡಲು ಮುಂದಾಗಿದೆ ಎಂದು ನಿಷೇಧಿತ ಸಿಪಿಐ (ಮಾವೋವಾದಿ) ಪಾಲಿಟ್‌ಬ್ಯೂರೋ ಸದಸ್ಯರೊಬ್ಬರು ತಿಳಿಸಿದ್ದಾರೆ. ಪಕ್ಷದ ಮುಖವಾಣಿ ಲಾಲ್‌ ಚಿಂಗಾರಿ ಪ್ರಕಾಶನ್‌ಗೆ ನೀಡಿದ ಸಂದರ್ಶನದಲ್ಲಿ ಪಾಲಿಟ್‌ಬ್ಯೂರೋ ಸದಸ್ಯ ಪ್ರಶಾಂತ ಬೋಸ್‌ ಅಲಿಯಾಸ್‌ ಕಿಶನ್‌ದಾ ಅವರು ಈ ಮಾಹಿತಿ ನೀಡಿದ್ದಾರೆ ಎಂದು ಸಂದರ್ಶನದ ಪ್ರತಿಯನ್ನು ಉಲ್ಲೇಖೀಸಿ ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.

ವಿದ್ಯಾವಂತ ಯುವಕರ ಕೊರತೆಯಿಂದಾಗಿ ಪಕ್ಷಕ್ಕೆ ಎರಡನೇ ಹಂತದ ನಾಯಕರ ಸೃಷ್ಟಿಯೇ ದೊಡ್ಡ ಸವಾಲಾಗಿದೆ. ಪಶ್ಚಿಮ ಬಂಗಾಳ ಹೊರತುಪಡಿಸಿದರೆ ಅಸ್ಸಾಂ, ಬಿಹಾರ ಮತ್ತು ಜಾರ್ಖಂಡ್‌ನ‌ಲ್ಲಿ ನಾವು ಬುಡಕಟ್ಟು ಜನಾಂಗೀಯರು ಮತ್ತು ಪರಿಶಿಷ್ಟ ಜಾತಿಗಳ ಯುವಕರ ತಂಡವನ್ನು ರಚಿಸಿದ್ದೇವೆ. ಆದರೆ, ಅವರ ಶಿಕ್ಷಣದ ಮಟ್ಟ ಕಡಿಮೆಯಿರುವ ಕಾರಣ, ಮಾರ್ಕ್ಸ್ ವಾದದ ತತ್ವಾದರ್ಶಗಳನ್ನು ಅವರಿಗೆ ಅರ್ಥಮಾಡಿಸಿಕೊಡುವುದು ಕಷ್ಟಕರ ವಿಚಾರ ಎಂದೂ 72 ವರ್ಷದ ಕಿಶನ್‌ದಾ ಹೇಳಿದ್ದಾರೆ.

ಕ್ರಾಂತಿಯ ತತ್ವಗಳಿಗೆ ಬದ್ಧರಾಗಿರುವ ಶಿಕ್ಷಿತ ಯುವಕರು ಮತ್ತು ಬುದ್ಧಿಜೀವಿ ಕಾಮ್ರೇಡ್‌ಗಳನ್ನು ಎಡಪಂಥೀಯ ಸಂಘರ್ಷ ವಲಯಕ್ಕೆ ಕಳುಹಿಸುವಂತೆ ಸಿಪಿಐ (ಮಾವೋವಾದಿ)ಯ ಎಲ್ಲ ಸಮಿತಿಗಳಿಗೂ ಸೂಚನೆ ನೀಡಿದ್ದೇವೆ ಎಂದೂ ಅವರು ಹೇಳಿದ್ದಾರೆ.

Trending videos

Back to Top