CONNECT WITH US  

ಭಾರತ್‌ ಬಂದ್‌: ದಿಲ್ಲಿಯಲ್ಲಿ ನೀರಸ, ಮುಂಬಯಿಯಲ್ಲಿ ಜೋರು

ಹೊಸದಿಲ್ಲಿ  : ಪೆಟ್ರೋಲ್‌ ಮತ್ತು ಡೀಸೆಲ್‌ ಬೆಲೆ ಏರಿಕೆಯನ್ನು ಪ್ರತಿಭಟಿಸಿ ಕಾಂಗ್ರೆಸ್‌ ನೀಡಿರುವ ಭಾರತ್‌ ಬಂದ್‌ ಕರೆಗೆ ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ  ಸಾಮಾನ್ಯ ಪ್ರತಿಕ್ರಿಯೆ ವ್ಯಕ್ತವಾಗಿದೆ. 

ದಿಲ್ಲಿಯಲ್ಲಿ ಶಾಲೆ, ಕಾಲೇಜು, ಕಚೇರಿಗಳು ಇಂದು ಎಂದಿನಂತೆ ತೆರೆದುಕೊಂಡಿವೆ. ಜನಜೀವನ ಮಾಮೂಲಿಯಾಗಿ ನಡೆಯುತ್ತಿದೆ. 

ಹಾಗಿದ್ದರೂ ಬಿಗಿ ಪೊಲೀಸ್‌ ಬಂದೋಬಸ್ತ್ ಏರ್ಪಡಿಸಲಾಗಿದೆ. ಭದ್ರತಾ ದಳಗಳನ್ನು ಕಟ್ಟೆಚ್ಚರದಲ್ಲಿ ಇರಿಸಲಾಗಿದೆ. 

ದರಿಯಾಗಂಜ್‌ ಮತ್ತು ರಾಮಲೀಲಾ ಮೈದಾನಿನ ಸುತ್ತಮುತ್ತ ಪ್ರದೇಶದಲ್ಲಿ ವಾಹನ ಸಂಚಾರ ಬಾಧಿತವಾಗಿದೆ. ಪ್ರತಿಭಟನಕಾರರಿಂದ ಬಿರುಸಿನ ಪ್ರತಿಭಟನೆ ನಡೆಯುತ್ತಿದೆ. 

ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ವಿರೋಧ ಪಕ್ಷಗಳು ರಾಜಘಾಟ್‌ ಮತ್ತು ರಾಮಲೀಲಾ ಮೈದಾನಕ್ಕೆ ಮೆರವಣಿಗೆ ನಡೆಸಿದ್ದಾರೆ. ಸೋನಿಯಾ ಗಾಂಧಿ ಮತ್ತು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಹಿರಿಯ ರಾಜಕಾರಣಿಗಳು ರಾಹುಲ್‌ ಜತೆಗೆ ಸೇರಿಕೊಂಡು ರಾಮಲೀಲಾ ಮೈದಾನ ತಲುಪಿದ್ದಾರೆ. 

ಹಿರಿಯ ಆಮ್‌ ಆದ್ಮಿ ನಾಯಕ ಮತ್ತು ರಾಜ್ಯಸಭಾ ಸದಸ್ಯರಾಗಿರುವ ಸಂಜಯ್‌ ಸಿಂಗ್‌ ಮತ್ತು ರಾಜ್ಯಸಭಾ ಸಂಸದ ಮನೋಜ್‌ ಝಾ ಅವರು ಪ್ರತಿಭಟನೆಯಲ್ಲಿ ಸೇರಿಕೊಂಡಿದ್ದಾರೆ. 

ಜನಸಾಮಾನ್ಯರ ಜೀವನವನ್ನು ತೀವ್ರವಾಗಿ ತಟ್ಟುತ್ತಿರುವ ಇಂಧನ ಬೆಲೆ ಏರಿಕೆಗೆ ನಾವು ಕೈಕಟ್ಟಿ ಸುಮ್ಮನೆ ಕುಳಿತಿರಲು ಸಾಧ್ಯವಿಲ್ಲ ಎಂದು ಹಿರಿಯ ಆಪ್‌ ನಾಯಕ ದಿಲೀಪ ಪಾಂಡೆ ಹೇಳಿದ್ದಾರೆ. 

ರಾಮಲೀಲಾ ಮೈದಾನದಲ್ಲಿ ರಾಹುಲ್‌ ಅವರನ್ನು ಹಿರಿಯ ನಾಯಕರಾದ ಅಶೋಕ್‌ ಗೆಹಲೋತ್‌, ಗುಲಾಮ್‌ ನಬಿ ಆಜಾದ್‌, ಎಲ್‌ಜೆಡಿ ನಾಯಕ ಶರದ್‌ ಯಾದವ್‌, ಎನ್‌ಸಿಪಿ ನಾಯಕ ಶರತ್‌ ಪವಾರ್‌ ಸೇರಿಕೊಂಡಿದ್ದಾರೆ. 

ಇದೇ ವೇಳೆ ಮುಂಬಯಿಯಲ್ಲಿ ಭಾರತ್‌ ಬಂದ್‌ ಬಿರುಸಿನಿಂದ ಸಾಗುತ್ತಿದೆ. ಕಾಂಗ್ರೆಸ್‌ ಕಾರ್ಯಕರ್ತರು ಅಂಧೇರಿ ರೈಲ್ವೆ ನಿಲ್ದಾಣದಲ್ಲಿ ರೈಲ್‌ ರೋಕೋ ಪ್ರತಿಭಟನೆ ನಡೆಸಿದ್ದಾರೆ. 

ಕೋಲ್ಕತಾದಲ್ಲಿ ಇಂದು ಬೆಳಗ್ಗೆ ಜನಜೀವನ, ವಾಹನ ಸಂಚಾರ ಎಂದಿನಂತೆ ಸಾಗಿದೆ. ಸಾರ್ವಜನಿಕ ವಾಹನ ಸಾರಿಗೆ ಜಾಲ, ಬಸ್ಸುಗಳು, ಟ್ಯಾಕ್ಸಿಗಳು, ಟ್ರೈನ್‌ ಗಳು ವೇಳಾಪಟ್ಟಿ ಪ್ರಕಾರ ಓಡಾಡುತ್ತಿವೆ. 

Trending videos

Back to Top