CONNECT WITH US  

ವಧುವಿಗೆ ವಾಟ್ಸಪ್ ಬಳಕೆ ಚಟ; ಕೊನೆಕ್ಷಣದಲ್ಲಿ ಮದುವೆ ರದ್ದು ಮಾಡಿದ ವರ!

ಲಕ್ನೋ:ಅತೀ ಹೆಚ್ಚು ಸಮಯವನ್ನು ವಾಟ್ಸಪ್ ನಲ್ಲೇ ಕಳೆಯುತ್ತಿದ್ದಾಳೆಂದು ಆರೋಪಿಸಿ ವಧುವಿನ ಜೊತೆಗಿನ ಮದುವೆಯನ್ನೇ ವರ ಕೊನೆ ಕ್ಷಣದಲ್ಲಿ ರದ್ದುಪಡಿಸಿದ ಘಟನೆ ಉತ್ತರಪ್ರದೇಶದ ಅಮ್ರೋಹಾ ಜಿಲ್ಲೆಯಲ್ಲಿ ನಡೆದಿದೆ.

ಮದುವೆ ದಿನದಂದು ಮಧುಮಗ ಖ್ವಾಮರ್ ಅಹ್ಮದ್ ಹಾಗೂ ಕುಟುಂಬಿಕರಿಗಾಗಿ ವಧುವಿನ ಕಡೆಯವರು ಕಾಯುತ್ತಿದ್ದರು. ಆದರೆ ಯಾರೊಬ್ಬರೂ ಬಾರದ ಕಾರಣ, ವಧುವಿನ ಮನೆಯವರು ದೂರವಾಣಿ ಕರೆ ಮಾಡಿದಾಗ, ಮದುವೆಯನ್ನು ರದ್ದು ಮಾಡಿರುವುದಾಗಿ ತಿಳಿಸಿದ್ದರಂತೆ. ಅದಕ್ಕೆ ಕೊಟ್ಟ ಕಾರಣ ವಧು ಅತೀ ಹೆಚ್ಚು ಸಮಯ ವಾಟ್ಸಪ್ ನಲ್ಲಿ ಕಳೆಯುತ್ತಾಳೆಂಬುದು!

ಏತನ್ಮಧ್ಯೆ ಇದು ನಿಜವಾದ ಕಾರಣವಲ್ಲ ಎಂದು ವಧುವಿನ ಕುಟುಂಬಸ್ಥರು ದೂರಿದ್ದಾರೆ. ವರನ ಕಡೆಯವರು ವರದಕ್ಷಿಣೆಗೆ ಅತೀಯಾದ ಬೇಡಿಕೆ ಇಟ್ಟಿದ್ದರು ಎಂದು ತಿಳಿಸಿರುವುದಾಗಿ ವರದಿ ವಿವರಿಸಿದೆ. ಎಎನ್ ಐ ವರದಿ ಪ್ರಕಾರ, ವರನ ಕಡೆಯವರು 65 ಲಕ್ಷ ರೂಪಾಯಿಗೆ ಬೇಡಿಕೆ ಇಟ್ಟಿರುವುದಾಗಿ ವಧುವಿನ ತಂದೆ ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವುದಾಗಿ ಪೊಲೀಸ್ ಅಧಿಕಾರಿ ವಿಪಿನ್ ಟಾಡಾ ಎಎನ್ ಐಗೆ ತಿಳಿಸಿದ್ದಾರೆ. ಬಳಿಕ ಕ್ರಮ ಕೈಗೊಳ್ಳುವುದಾಗಿ ಹೇಳಿದರು.


Trending videos

Back to Top