CONNECT WITH US  

ಭಾರತ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ 

*ಆರು ರಾಜ್ಯಗಳಲ್ಲಿ ಮಾತ್ರ ಬಂದ್‌ ಬಹುತೇಕ ಯಶಸ್ವಿ *ಎನ್‌ಡಿಎ ಆಡಳಿತದ ರಾಜ್ಯಗಳಿಗೆ ಕೊಂಚ ಬಿಸಿ

ಹೊಸದಿಲ್ಲಿ: ತೈಲ ಬೆಲೆ ಹೆಚ್ಚಳ ವಿರೋಧಿಸಿ ಕಾಂಗ್ರೆಸ್‌ ಸೇರಿದಂತೆ 21 ವಿಪಕ್ಷಗಳು ಕರೆ ನೀಡಿದ್ದ ಭಾರತ್‌ ಬಂದ್‌ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಿಜೆಪಿಯೇತರ ಸರಕಾರವಿರುವ ಆರು ರಾಜ್ಯಗಳಲ್ಲಿ ಮಾತ್ರ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಎನ್‌ಡಿಎ ಆಡಳಿತವಿರುವ ಬಿಹಾರ, ಮಹಾರಾಷ್ಟ್ರದಲ್ಲಿ ಕೊಂಚ ಬಂದ್‌ ಬಿಸಿ ಕಾಣಿಸಿಕೊಂಡಿತ್ತಾದರೂ, ಹೆಚ್ಚಿನ ಹಾನಿಯಾಗಿಲ್ಲ. 

ಈ ಬಂದ್‌ ಯಶಸ್ವಿಯಾಗಿದ್ದು, ದೇಶಾದ್ಯಂತ 21 ವಿಪಕ್ಷಗಳು ಹಾಗೂ ಅನೇಕ ರಾಜ್ಯಗಳ ಚೇಬರ್‌ ಆಫ್ ಕಾಮರ್ಸ್‌ ಮತ್ತು ಟ್ರೇಡರ್ಸ್‌ ಸಂಸ್ಥೆಗಳು ಬೆಂಬಲ ನೀಡಿದ್ದಾಗಿ ಕಾಂಗ್ರೆಸ್‌ ಹೇಳಿಕೊಂಡಿತಲ್ಲದೆ, ತೈಲವನ್ನು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಗೆ ತರಬೇಕೆಂದು ಕೇಂದ್ರ ಸರಕಾರವನ್ನು ಆಗ್ರಹಿಸಿದೆ. ಕರ್ನಾಟಕ, ಕೇರಳ, ಮಹಾರಾಷ್ಟ್ರ ಹಾಗೂ ಬಿಹಾರಗಳಲ್ಲಿ ಬಂದ್‌ಗೆ ಉತ್ತಮ ಪ್ರತಿಕ್ರಿಯೆ ಸಿಕ್ಕಿತು. ಹಲವೆಡೆ ರಾಷ್ಟ್ರೀಯ ಹೆದ್ದಾರಿಗಳು ಬಂದ್‌ ಆಗಿದ್ದವು.  

ಮಹಾರಾಷ್ಟ್ರದಲ್ಲಿ ಬಂದ್‌ ಬಿಸಿ:
ಬಿಜೆಪಿ ಆಡಳಿತವಿರುವ ಮಹಾರಾಷ್ಟ್ರದಲ್ಲಿ ಬಂದ್‌ ಬಿಸಿ ಜೋರಾಗಿತ್ತು. ರಾಜ್ಯದ ಮುನ್ಮಾದ್‌, ನಾಸಿಕ್‌, ಕೊಲ್ಹಾಪುರ, ಪಂಡರಾಪುರ ಹಾಗೂ ವಿಹಾರ್‌ ಜಿಲ್ಲೆಗಳಲ್ಲಿ ಭಾರೀ ಪ್ರತಿಭಟನೆಗಳು ನಡೆದವು. ಪ್ರತಿಭಟನಾಕಾರರು ಮುಂಬಯಿ- ಅಹಮದಾಬಾದ್‌ ರಾಷ್ಟ್ರೀಯ ಹೆದ್ದಾರಿ ಬಂದ್‌ ಮಾಡಿದ್ದರು. ಪುಣೆಯಲ್ಲಿ ಶಾಲಾ ಮಕ್ಕಳ ಬಸ್‌ಗಳ ಮೇಲೆ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದರು. ಬಿಹಾರದಲ್ಲಿ ಹಿಂಸಾಚಾರ: ಮಹಾರಾಷ್ಟ್ರ ಬಿಟ್ಟರೆ, ಬಂದ್‌ ಬಿಸಿ ದೊಡ್ಡ ಮಟ್ಟಕ್ಕೇರಿದ್ದು ಬಿಹಾರದಲ್ಲಿ. ಅಲ್ಲಿ ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿದವು. ಶಾಲಾ ಕಾಲೇಜುಗಳು, ಕಚೇರಿಗಳು ಮುಚ್ಚಿದ್ದವು. ಪಟ್ನಾ ಜಿಲ್ಲೆ, ಮುಜಫ‌ರ್‌ ನಗರ, ಲಾಖೀ ಸರಾಯ್‌, ನಳಂದಾ ಜಿಲ್ಲೆಗಳು ಹಿಂಸಾಚಾರಕ್ಕೆ ತುತ್ತಾದವು. ರೈಲು ತಡೆ ನಡೆಸಲಾಯಿತು. 

ಒಡಿಶಾದಲ್ಲಿ ಜನಜೀವನ ಅಸ್ತವ್ಯಸ್ತ: ಬಿಜೆಡಿ ಆಡಳಿತವಿರುವ ಒಡಿಶಾದಲ್ಲೂ ಜನಜೀವನ ಅಸ್ತವ್ಯಸ್ತಗೊಂಡಿತ್ತು.  ಭುವನೇಶ್ವರ, ಕಟಕ್‌, ಸಂಬಾಲ್‌ಪುರ, ರೂರ್ಕೆಲಾ, ಬಲಾಂಗಿರ್‌, ಭದ್ರಕ್‌ ಮುಂತಾದೆಡೆ ಕಾಂಗ್ರೆಸ್‌ ಕಾರ್ಯಕರ್ತರು ರೈಲ್‌ ರೋಕೋ ನಡೆಸಿದರು. ಈಸ್ಟ್‌ ಕೋಸ್ಟ್‌ ರೈಲ್ವೆ ಮಂಡಳಿ 12 ರೈಲುಗಳನ್ನು ರದ್ದುಗೊಳಿಸಿತು.  ಪ್ರವಾಸಿಗಳು ತೊಂದರೆ ಅನುಭವಿಸಿದರು.  

ಇತರೆಡೆ ಪ್ರತಿಭಟನೆ: ಎಂಕೆ ಸ್ಟಾಲಿನ್‌ ನೇತೃತ್ವದಲ್ಲಿ ಡಿಎಂಕೆ,  ಶರದ್‌ ಪವಾರ್‌ ನೇತೃತ್ವದಲ್ಲಿ ಎನ್‌ಸಿಪಿ ಹಾಗೂ ಎಡಪಕ್ಷಗಳು ತಮ್ಮ ರಾಜ್ಯಗಳಲ್ಲಿ ಭಾರೀ ಪ್ರತಿಭಟನೆ ನಡೆಸಿದವು. ಆಪ್‌ ಪಕ್ಷ  ಬಂದ್‌ಗೆ ಬೆಂಬಲ ಘೋಷಿಸಿರಲಿಲ್ಲವಾದರೂ ಆದರ ನಾಯಕರು ಪ್ರತಿಭಟನೆಗಳಲ್ಲಿ ಇದ್ದªರು. ಹೊಸದಿಲ್ಲಿಯ ಪ್ರತಿಭಟನೆಯಲ್ಲಿ 1984ರ ಸಿಖ್‌ ವಿರೋಧಿ ದಂಗೆಯ ಆರೋಪಿ, ಕಾಂಗ್ರೆಸ್‌ ಹಿರಿಯ ನಾಯಕ ಸಜ್ಜನ್‌ ಕುಮಾರ್‌ ಭಾಗವಹಿಸಿದ್ದರು. ದಿಲ್ಲಿ, ಜಮ್ಮು ಕಾಶ್ಮೀರ, ಉತ್ತರ ಪ್ರದೇಶ, ಜಾರ್ಖಂಡ್‌, ತೆಲಂಗಾಣ, ಆಂಧ್ರಪ್ರದೇಶಗಳಲ್ಲೂ ಪ್ರತಿಭಟನೆಗಳು ನಡೆದವು. 

ಮತ್ತೆ ತೈಲ ದರ ಏರಿಕೆ 
ಭಾರತ್‌ ಬಂದ್‌ ನಡುವೆಯೇ ಸೋಮವಾರ ತೈಲ ದರ ಮತ್ತೆ ಹೆಚ್ಚಳವಾಗಿದ್ದು, ದಿಲ್ಲಿಯಲ್ಲಿ ಪ್ರತಿ ಲೀ. ಪೆಟ್ರೋಲ್‌ ಮೇಲೆ 24 ಪೈಸೆ ಹಾಗೂ ಹಾಗೂ ಡೀಸೆಲ್‌ ಮೇಲೆ 23 ಪೈಸೆ ಹೆಚ್ಚಳವಾಗಿದೆ. ಪರಿಷ್ಕೃತ ತೈಲ ದರಗಳಂತೆ ಪೆಟ್ರೋಲ್‌ ಪ್ರತಿ ಲೀ.ಗೆ 80.73, ಡೀಸೆಲ್‌ 72.83 ರೂ.ಗಳಿಗೆ ತಲು ಪಿದೆ. ಮುಂಬಯಿನಲ್ಲಿ ಪೆಟ್ರೋಲ್‌ಗೆ 88.12 ರೂ.ಆಗಿದೆ. ಇದೇ ವೇಳೆ, ಸೋಮವಾರ ಡಾಲರ್‌ ಎದುರು ರುಪಾಯಿ ಮೌಲ್ಯ 72.67ಕ್ಕೆ ತಲುಪಿದ ಪರಿಣಾಮ ಎಂಬಂತೆ, ಷೇರುಪೇಟೆಯೂ 3 ವಾರಗಳಲ್ಲೇ ದಾಖಲೆಯ ಕುಸಿತ ಕಂಡಿದೆ. ಸೆನ್ಸೆಕ್ಸ್‌ 467 ಅಂಕ ಕುಸಿತ ಕಂಡು, ದಿನಾಂತ್ಯಕ್ಕೆ 37,922ರಲ್ಲಿ ವಹಿವಾಟು ಅಂತ್ಯಗೊಳಿಸಿತು. ನಿಫ್ಟಿ 151 ಅಂಕ ಕುಸಿಯಿತು.

ಪ್ರತಿಭಟನೆ ಬಿಸಿಗೆ 2 ವರ್ಷದ ಮಗು ಸಾವು
ಬಿಹಾರದ ಜೆಹಾನಾಬಾದ್‌ ಜಿಲ್ಲೆಯಲ್ಲಿ ಅಸ್ವಸ್ಥಗೊಂಡಿದ್ದ 2 ವರ್ಷದ ಮಗುವೊಂದನ್ನು ಬಂದ್‌ನಿಂದಾಗಿ, ಆಸ್ಪತ್ರೆಗೆ ಸಕಾಲದಲ್ಲಿ ಸಾಗಿಸಲು ಸಾಧ್ಯವಾಗದಿದ್ದುದರಿಂದ ಆ ಮಗು ಸಾವನ್ನಪ್ಪಿದೆ. ಅತಿಸಾರದಿಂದ ಬಳಲುತ್ತಿದ್ದ ಗೌರಿ ಕುಮಾರಿ (2)ಯನ್ನು ಬಲಾಬಿಘಾ ಹಳ್ಳಿಯಿಂದ ಹತ್ತಿರದ ಗಯಾ ಜಿಲ್ಲೆಯ ಆಸ್ಪತ್ರೆಗೆ ಆಟೋರಿಕ್ಷಾದಲ್ಲಿ ಕರೆದೊಯ್ಯಲಾಗುತ್ತಿತ್ತು. ಆದರೆ, ಪ್ರತಿಭಟನೆಯಿಂದಾಗಿ ಆಟೋ ಸಕಾಲದಲ್ಲಿ ಆಸ್ಪತ್ರೆಗೆ ತಲುಪಲಿಲ್ಲ. ಮಾರ್ಗ ಮಧ್ಯೆಯೇ ಮಗು ಕೊನೆಯುಸಿರೆಳೆಯಿತು. ""ಪ್ರತಿಭಟನಕಾರರು ಬೇಗನೇ ದಾರಿ ಬಿಟ್ಟಿದ್ದರೆ ನಮ್ಮ ಮಗು ಉಳಿಯುತ್ತಿತ್ತು'' ಎಂದು ಮಗುವಿನ ತಂದೆ ಪ್ರಮೋದ್‌ ಮಾಂಝಿ ದುಃಖ ವ್ಯಕ್ತಪಡಿಸಿದರು. ಮಗುವನ್ನು ಆಸ್ಪತ್ರೆಗೆ ತರಬೇಕಾದಾಗ ಮೊದಲು ತಮ್ಮ ಹಳ್ಳಿ ಪಕ್ಕದ ನದಿ ದಾಟಿ, ಆನಂತರ ಆಟೋ ಹತ್ತಿ ಬರಬೇಕೆಂದು ಮಾಂಝಿ ತಿಳಿಸಿದ್ದು ಬಿಹಾರದ ಪರಿಸ್ಥಿತಿ ಅನಾವರಣಗೊಳಿಸಿತು. ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಜೆಹಾನಾಬಾದ್‌ ಜಿಲ್ಲೆಯ ಸಬ್‌ ಡಿವಿಷನ್‌ ಅಧಿಕಾರಿ ಪಾರಿತೋಷ್‌ ಕುಮಾರ್‌, ""ಮಗುವಿನ ಸಾವು ಬಂದ್‌, ಪ್ರತಿಭಟನೆಯಿಂದ ಆಗಿದ್ದಲ್ಲ. ಮಗುವನ್ನು ಆಸ್ಪತ್ರೆಗೆ ಸೇರಿಸುವ ನಿರ್ಧಾರವನ್ನು ಪೋಷಕರು ತಡವಾಗಿ ಕೈಗೊಂಡಿದ್ದು ಇದಕ್ಕೆ ಕಾರಣ'' ಎಂದಿದ್ದಾರೆ. 

ತೈಲ ಬೆಲೆಯೇರಿಕೆ ಹಿಂದೆ ಜಾಗತಿಕ ಕಾರಣ: ರವಿಶಂಕರ್‌

ಜಾಗತಿಕ ಮಾರುಕಟ್ಟೆಯ ಪ್ರಭಾವದಿಂದ ತೈಲ ಬೆಲೆಗಳು ಹೆಚ್ಚಳವಾಗುತ್ತಿವೆ. ಹಾಗಾಗಿ, ಇವುಗಳ ನಿಯಂತ್ರಣ ಕೇಂದ್ರ ಸರಕಾರದ ಕೈಯ್ಯಲ್ಲಿಲ್ಲ ಎಂದು ಕೇಂದ್ರ ಕಾನೂನು ಸಚಿವ ರವಿಶಂಕರ್‌ ಪ್ರಸಾದ್‌ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ತೈಲ ಬೆಲೆ ಚರ್ಚೆಗೆ ಕೇಂದ್ರ ಸಿದ್ಧವಿದೆ ಎಂದು ಸವಾಲು ಹಾಕಿದ್ದಾರೆ. ಬಂದ್‌ ಬಗ್ಗೆ ಪ್ರತಿಕ್ರಿಯಿಸಿದ ಅವರು, ತೈಲಗಳ ಮೇಲಿನ ತೆರಿಗೆಯನ್ನು ಕೇಂದ್ರ ಸರಕಾರ ಇಳಿಸುತ್ತಿಲ್ಲ ಎಂಬ ಆರೋಪದಲ್ಲಿ ಹುರುಳಿಲ್ಲ. ಕಳೆದ ಅಕ್ಟೋಬರ್‌ನಲ್ಲಿ ತೈಲಗಳ ಮೇಲಿನ ಅಬಕಾರಿ ಸುಂಕದಲ್ಲಿ 2 ರೂ.ಗಳನ್ನು ಇಳಿಸಲಾಗಿದೆ. ರಾಜ್ಯಗಳಲ್ಲಿ ತೈಲ ಬೆಲೆ ಇಳಿಸುವುದು ಆಯಾ ರಾಜ್ಯಸರಕಾರಗಳ ವಿವೇಚನೆಗೆ ಬಿಟ್ಟ ವಿಚಾರ ಎಂದಿದ್ದಾರೆ.  ಬಂದ್‌ ವೇಳೆಯ ಹಿಂಸಾಚಾರಗಳಿಗೆ ಪ್ರತಿಕ್ರಿಯಿಸಿ, ""ಬಸ್ಸುಗಳಿಗೆ ಕಲ್ಲು ಹೊಡೆಯುವುದು, ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಬೆಂಕಿ ಹಚ್ಚುವುದನ್ನು ಸಹಿಸಲಾಗುವುದಿಲ್ಲ'' ಎಂದು ಅಸಮಾಧಾನ ವಕ್ತಪಡಿಸಿದರು. 

ಜತೆಗಿರಲ್ಲ, ಆದರೂ ಬೆಂಬಲ
ಬಂದ್‌ ಬಗ್ಗೆ ಅಧಿಕೃತ ಪ್ರಕಟಣೆ ಹೊರಡಿಸಿರುವ ತೃಣಮೂಲ ಕಾಂಗ್ರೆಸ್‌, ""ತೈಲ ಬೆಲೆ ಏರಿಕೆಯನ್ನು ಪಕ್ಷವೂ ಖಂಡಿಸುತ್ತದೆ. ಆದರೆ, ಪಶ್ಚಿಮ ಬಂಗಾಲದಲ್ಲಿ ಮುಷ್ಕರ, ಬಂದ್‌ಗಳಿಗೆ ಅವಕಾಶ ನೀಡಬಾರದೆನ್ನುವ ಸಿಎಂ ಮಮತಾ ಆಶಯದಂತೆ ಪಕ್ಷ ಬಂದ್‌ನಿಂದ ದೂರ ಉಳಿದಿದೆ'' ಎಂದಿದೆ. ಒಡಿಶಾದಲ್ಲಿ ಅಧಿಕಾರದಲ್ಲಿರುವ ಪಟ್ನಾಯಕ್‌ ನೇತೃತ್ವದ ಬಿಜೆಡಿಯೂ ಇದೇ ರಾಗ ಹಾಡಿದೆ. 

ರಾಹುಲ್‌ ವಿರುದ್ಧ ಎಫ್ಐಆರ್‌: ಬಂದ್‌ಗೆ ಕರೆ ನೀಡುವ ಮೂಲಕ ಜನಸಾಮಾನ್ಯರಿಗೆ ಕಿರುಕುಳ ನೀಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ವಿರುದ್ಧ ಅಸ್ಸಾಂನ ಮಾನವ ಹಕ್ಕುಗಳ ಹೋರಾಟಗಾರರೊಬ್ಬರು ದೂರು ದಾಖಲಿಸಿದ್ದಾರೆ. ಈ ದೂರಿನ ಆಧಾರದಲ್ಲಿ ಅಸ್ಸಾಂನ ಮೊರಿಗಾಂವ್‌ ಸದಾರ್‌ ಪೊಲೀಸ್‌ ಠಾಣೆಯಲ್ಲಿ ರಾಹುಲ್‌ ವಿರುದ್ಧ ಎಫ್ಐಆರ್‌ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ತೆರಿಗೆ ಇಳಿಸಿದ ಆಂಧ್ರ
ತನ್ನ ರಾಜ್ಯದಲ್ಲಿ ಮಾರಾಟವಾಗುವ ತೈಲಗಳ ಮೇಲೆ ಆಂಧ್ರಪ್ರದೇಶ ಸರಕಾರ, ವ್ಯಾಟ್‌ ಅನ್ನು ಇಳಿಸಿದ್ದು, ಪ್ರತಿ ಲೀಟರ್‌ ಪೆಟ್ರೋಲ್‌, ಡೀಸೆಲ್‌ ಮೇಲೆ 2 ರೂ. ಕಡಿಮೆಯಾಗಲಿದೆ. ಭಾರತ್‌ ಬಂದ್‌ ವೇಳೆಯಲ್ಲೇ ಇಂಥದ್ದೊಂದು ಸುಧಾರಣಾ ಕ್ರಮ ಕೈಗೊಳ್ಳಲಾಗಿದ್ದು, ಇದರಿಂದ ರಾಜ್ಯ ಬೊಕ್ಕಸಕ್ಕೆ 1,120 ಕೋಟಿ ರೂ. ಹೊರೆ ಬೀಳಲಿದೆ.

ಸರಕಾರ ಬದಲಿಸುವ ಸಮಯ
ಕಾಂಗ್ರೆಸ್‌ ರ್ಯಾಲಿಯಲ್ಲಿ ಮಾತನಾಡಿದ ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ""ದೇಶಕ್ಕೆ ಒಳಿತಾಗುವಂಥ ನಿರ್ಧಾರಗಳನ್ನು ಮೋದಿ ಸರಕಾರ ಕೈಗೊಂಡಿಲ್ಲ. ಇಂಥ ಸರಕಾರವನ್ನು ಬದಲಿಸುವ ಸಮಯ ಬಂದಿದೆ. ವಿರೋಧ ಪಕ್ಷಗಳೆಲ್ಲವೂ ತಮ್ಮ ನಡುವಿನ ಭಿನ್ನಾಭಿಪ್ರಾಯ ಮರೆತು ಪರಸ್ಪರ ಒಗ್ಗೂಡಬೇಕಿದೆ'' ಎಂದರು.

ಪ್ರಧಾನಿ ಹೇಳಿದ್ದು ನಿಜ: ರಾಹುಲ್‌ 
ಹೊಸದಿಲ್ಲಿಯ ರಾಮಲೀಲಾ ಮೈದಾನದಲ್ಲಿ ನಡೆದ ಬೃಹತ್‌ ಪ್ರತಿಭಟನೆಯಲ್ಲಿ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌, ಅಶೋಕ್‌ ಗೆಹಲೋಟ್,  ಗುಲಾಂ ನಬಿ ಆಜಾದ್‌ ಸೇರಿದಂತೆ ಹಲವಾರು ಕಾಂಗ್ರೆಸ್‌ ನಾಯಕರು ಹಾಜರಿದ್ದರು. ಪ್ರತಿಭಟನೆಯ ವೇಳೆ ಕೇಂದ್ರ ಸರಕಾರದ ರೀತಿ ನೀತಿಗಳ ವಿರುದ್ಧ ವಾಗ್ಧಾಳಿ ನಡೆಸಿದ ರಾಹುಲ್‌, ತೈಲ ಬೆಲೆ ಏರಿಕೆ ಹಾಗೂ ರಫೇಲ್‌ ಡೀಲ್‌ ಬಗ್ಗೆ ಪ್ರಧಾನಿ ಮೋದಿ ಮೌನ ವಹಿಸಿರುವುದನ್ನು ಪ್ರಶ್ನಿಸಿದರು. ""ಸ್ವಾತಂತ್ರಾ ನಂತರದ 70 ವರ್ಷಗಳಲ್ಲಿ ಆಗದಿದ್ದದ್ದು ಕಳೆದ ನಾಲ್ಕು ವರ್ಷಗಳಲ್ಲಿ ಆಗಿದೆ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ನಿಜ. ಅವರು ಹೇಳುವುದು ಸರಿ. ಎಲ್ಲೆಲ್ಲೂ ದ್ವೇಷದ ವಾತಾವರಣ ಸೃಷ್ಟಿಯಾಗಿದೆ. ಒಬ್ಬ ಭಾರತೀಯ ಮತ್ತೂಬ್ಬ ಭಾರತೀಯನ ವಿರುದ್ಧ ಕಚ್ಚಾಡಲಾರಂಭಿಸಿದ್ದಾನೆ. ಜಾತಿ, ಮತಗಳ ಹೆಸರಲ್ಲಿ ಇಡೀ ದೇಶವೇ ಒಡೆದು ಹೋಗುತ್ತಿದೆ. ಇಂಥ ಪರಿಸ್ಥಿತಿ 70 ವರ್ಷಗಳಲ್ಲಿ ಆಗಿರಲಿಲ್ಲ'' ಎಂದು ಚುಚ್ಚಿದರು. 

ತೈಲ ಬೆಲೆ ಹೆಚ್ಚಳಕ್ಕೆ ಜಾಗತಿಕ ಕಾರಣಗಳಿವೆ ಎಂದು ಬಿಜೆಪಿ ಹೇಳುತ್ತಿದೆ. ಆದರೆ, ಸುಂಕಗಳಿಂದ 11 ಲಕ್ಷ ಕೋಟಿ ರೂ. ಆದಾಯ ಬರುತ್ತಿದ್ದು, ಇದು ಹೇಗೆ ಜಾಗತಿಕ ವಿಚಾರ ಆಗುತ್ತೆ?
ರಣದೀಪ್‌ ಸುರ್ಜೆವಾಲ,ಕಾಂಗ್ರೆಸ್‌ ವಕ್ತಾರ

ತಮ್ಮ ಭ್ರಷ್ಟ ನಾಯಕರು ಭಾಗಿಯಾಗಿರುವ ನ್ಯಾಷನಲ್‌ ಹೆರಾಲ್ಡ್‌ ಪ್ರಕರಣದಿಂದ ಜನರ ಗಮನ ಬೇರೆಡೆ ಸೆಳೆಯಲೆಂದೇ ಕಾಂಗ್ರೆಸ್‌ ಭಾರತ್‌ ಬಂದ್‌ಗೆ ಕರೆಕೊಟ್ಟಿತು.
ಸಂಬಿತ್‌ ಪಾತ್ರಾ, ಬಿಜೆಪಿ ರಾಷ್ಟ್ರೀಯ ವಕ್ತಾರ


Trending videos

Back to Top