ಮೆಹುಲ್ ಚೋಕ್ಸಿ ವಿಡಿಯೋ ಸಂದೇಶ: ಮೋದಿ ವಿರುದ್ದ ಕಾಂಗ್ರೆಸ್ ದಾಳಿ

ಹೊಸದಿಲ್ಲಿ : ಪಂಜಾಬ್ ನ್ಯಾಶನಲ್ ಬ್ಯಾಂಕ್ ಬಹುಕೋಟಿ ಹಗರಣಕ್ಕೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ತನ್ನ ವಿರುದ್ಧ ಮಾಡಿರುವ ಆರೋಪಗಳೆಲ್ಲ ಸುಳ್ಳು ಮತ್ತು ನಿರಾಧಾರ ಎಂದು ಆಂಟಿಗುವಾದಿಂದ ಆರೋಪಿ ಮೆಹುಲ್ ಚೋಕ್ಸಿ ವಿಡಿಯೋ ಸಂದೇಶ ರವಾನಿಸಿದ ತಾಸೊಳಗೆ ಕಾಂಗ್ರೆಸ್, ಪ್ರಧಾನಿ ನರೇಂದ್ರ ಮೋದಿ ಸರಕಾರದ ವಿರುದ್ಧದ ತನ್ನ ದಾಳಿಯನ್ನು ಮತ್ತೆ ನವೀಕರಿಸಿದೆ.
ಪಿಎನ್ಬಿ ಹಗರಣದ ಪ್ರಮುಖ ಆರೋಪಿಗಳಾಗಿರುವ ಬಿಲಿಯಾಧಿಪತಿ ವಜ್ರಾಭರಣ ಉದ್ಯಮಿ ನೀರವ್ ಮೋದಿ ಮತ್ತು ಆತನ ಚಿಕ್ಕಪ್ಪ ಮೆಹುಲ್ ಚೋಕ್ಸಿ ದೇಶದಿಂದ ಪಲಾಯನ ಮಾಡುವಲ್ಲಿ ಮೋದಿ ಸರಕಾರ ಶಾಮೀಲಾಗಿದೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಆಂಟಿಗುವಾ ದಲ್ಲಿರುವ ಮೆಹುಲ್ ಚೋಕ್ಸಿಯನ್ನು ಭಾರತಕ್ಕೆ ಮರಳಿಸಬೇಕೆಂಬ ವಿಷಯದಲ್ಲಿ ಭಾರತ ಸರಕಾರ ಎಂದೂ ನಮ್ಮನ್ನು ಸಂಪರ್ಕಿಸಿಲ್ಲ ಎಂದು ಪ್ರಧಾನಿ ಮೋದಿ ಭೇಟಿಯ ಬಳಿಕ ಆಂಟಿಗುವಾ ಅಧ್ಯಕ್ಷರು ಜುಲೈ 27ರಂದು ನೀಡಿದ್ದ ಸಂದರ್ಶನದಲ್ಲಿ ಹೇಳಿದ್ದರು ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲಾ ಹೇಳಿದರು.