ಆರೋಪ ಸುಳ್ಳೆಂದ ಚೋಕ್ಸಿ

ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ (ಪಿಎನ್ಬಿ) ಹಗರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಆ್ಯಂಟಿಗುವಾದ ಅಜ್ಞಾತ ಸ್ಥಳದಿಂದ ವಿಡಿಯೋ ಸಂದೇಶವೊಂದನ್ನು ರವಾನಿಸಿದ್ದು, ಜಾರಿ ನಿರ್ದೇಶನಾಲಯ (ಇ.ಡಿ) ಸುಳ್ಳು ಆರೋಪ ಹೊರಿಸಿ ತನ್ನ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಂಡಿದೆ ಎಂದು ಆಪಾದಿಸಿದ್ದಾರೆ.
ಚೋಕ್ಸಿ ವಿರುದ್ಧ ರೆಡ್ ಕಾರ್ನರ್ ನೋಟಿಸ್ ಜಾರಿಗಾಗಿ ಸಲ್ಲಿಸಿದ್ದ ಅರ್ಜಿ ಕುರಿತಂತೆ ಕೈಗೊಳ್ಳಲಾದ ಕ್ರಮದ ಬಗ್ಗೆ ವಿವರಣೆ ಕೋರಿ ಇ.ಡಿ., ಇಂಟರ್ಪೋಲ್ಗೆ ಸೋಮವಾರ ವಿಜ್ಞಾಪನಾ ಪತ್ರ ರವಾನಿಸಿತ್ತು. ಅದರ ಮರುದಿನವೇ ಚೋಕ್ಸಿ ವಿಡಿಯೊ ಹೊರಬಿದ್ದಿದ್ದು, ನನ್ನ ಭಾರತೀಯ ಪಾಸ್ಪೋರ್ಟ್ ಮುಟ್ಟುಗೋಲು ಹಾಕಿಕೊಂಡಿರುವುದರಿಂದ ನಾನು ಭಾರತಕ್ಕೆ ಆಗಮಿಸಿ ಶರಣಾಗುವ ಮಾತೇ ಇಲ್ಲ ಎಂದು ಆತ ಹೇಳಿದ್ದಾನೆ.