CONNECT WITH US  

ಹಗಲು ಟೈಲರ್..ರಾತ್ರಿ ಡೆಡ್ಲಿ ಕಿಲ್ಲರ್; 8 ವರ್ಷದಲ್ಲಿ 33 ಕೊಲೆ!

ಭೋಪಾಲ್:ಕಳೆದ ವಾರ ಮಧ್ಯಪ್ರದೇಶದ ಪೊಲೀಸರು ಭೋಪಾಲ್ ನಲ್ಲಿ ಟೈಲರ್ ಕೆಲಸ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ಸಣ್ಣ ಕ್ರಿಮಿನಲ್ ಕೇಸ್ ಆರೋಪದಡಿ ಬಂಧಿಸಿದ್ದರು. ಆದರೆ ವಿಚಾರಣೆ ನಡೆಸಿದ ತನಿಖಾಧಿಕಾರಿಗಳು ಬೆಚ್ಚಿ ಬಿದ್ದಿದ್ದರು..ಯಾಕೆಂದರೆ ಆತ ತಾನು ಕಳೆದ 8 ವರ್ಷಗಳಲ್ಲಿ 33 ಕೊಲೆಗಳನ್ನು ಮಾಡಿರುವುದಾಗಿ ತಪ್ಪೊಪ್ಪಿಕೊಂಡಿದ್ದ!

48 ವರ್ಷದ ಆದೇಶ್ ಖಮ್ರಾ ಹಗಲು ಹೊತ್ತು ಟೈಲರ್ ಕೆಲಸ ಮಾಡುತ್ತಿದ್ದ. ರಾತ್ರಿ ಈತ ಸೀರಿಯಲ್ ಕಿಲ್ಲರ್..ಕಾಂಟ್ರಾಕ್ಟ್ ಮೇಲೂ ಕೂಡಾ ಖಮ್ರಾ ಕೊಲೆ ಮಾಡುತ್ತಿದ್ದನಂತೆ. ಈತ ಅಂತರಾಜ್ಯ ಗ್ಯಾಂಗ್ ಜೊತೆ ಕಾರ್ಯನಿರ್ವಹಿಸುತ್ತಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ. ಖಮ್ರಾನನ್ನು ಕಳೆದ 2 ವಾರಗಳ ಹಿಂದೆ ಭೋಪಾಲ್ ಸಮೀಪ ಬಂಧಿಸಿರುವುದಾಗಿ ಪೊಲೀಸ್ ಅಧಿಕಾರಿ ರಾಹುಲ್ ಕುಮಾರ್ ಲೋಧಾ ಬುಧವಾರ ತಿಳಿಸಿದ್ದಾರೆ.

ಸಿಕ್ಕಿಬಿದ್ದಿದ್ದು ಹೇಗೆ?

ಆಗಸ್ಟ್ 12ರಂದು 50 ಟನ್ ಕಬ್ಬಿಣದ ಸರಳು ತುಂಬಿದ್ದ ಲಾರಿಯೊಂದು ಭೋಪಾಲ್ ನ ಮಂದೀಪ್ ಕೈಗಾರಿಕಾ ಪ್ರದೇಶದತ್ತ ಹೊರಟಿತ್ತು. ಆದರೆ ಈ ಲಾರಿ ನಾಪತ್ತೆಯಾಗಿರುವುದಾಗಿ ಮಾಲೀಕರು ದೂರು ದಾಖಲಿಸಿದ್ದರು. ತನಿಖೆ ಆರಂಭಿಸಿದ್ದ ಪೊಲೀಸರಿಗೆ ಲಾರಿ ಚಾಲಕ ಮಖಾನ್ ಸಿಂಗ್ ಶವ ಬಿಲ್ಖಿರಿಯಾ ಪ್ರದೇಶದಲ್ಲಿ ಸಿಕ್ಕಿತ್ತು. ಅಷ್ಟೇ ಅಲ್ಲ ಆಗಸ್ಟ್ 15ರಂದು ಭೋಪಾಲ್ ನ ಅಯೋಧ್ಯಾ ನಗರ್ ಸಮೀಪ ಲಾರಿ ಸಿಕ್ಕಿದ್ದು, ಅದರಲ್ಲಿದ್ದ ಕಬ್ಬಿಣದ ಸರಳು ನಾಪತ್ತೆಯಾಗಿತ್ತು.

ಪ್ರಕರಣದ ಸಂಬಂಧ ಪೊಲೀಸರು ಏಳು ಜನರನ್ನು ಬಂಧಿಸಿದ್ದರು. ಅವರು ಲಾರಿಯಲ್ಲಿದ್ದ ಸರಳುಗಳನ್ನು ಮಾರಾಟ ಮಾಡಿರುವುದಾಗಿ ತಿಳಿಸಿದ್ದರು. ಈ ಘಟನೆಯ ಹಿಂದಿನ ಮಾಸ್ಟರ್ ಮೈಂಡ್ ಜೈಕರಣ್ ಪ್ರಜಾಪತಿ ಎಂದು ಬಂಧಿತ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದರು. ಕೊನೆಗೂ ಆದರ್ಶ್ ಖಮ್ರಾನನ್ನು ಪೊಲೀಸರು ಬಂಧಿಸಿದ್ದರು.

ಹೆಚ್ಚಿನ ಹಣ ಮಾಡಬೇಕೆಂಬ ದುರಾಸೆಗೆ ಬಿದ್ದು ರಸ್ತೆ ಬದಿ ವಿಶ್ರಾಂತಿಗಾಗಿ ನಿಲ್ಲಿಸುತ್ತಿದ್ದ ಲಾರಿ ಚಾಲಕರ ಪರಿಚಯ ಮಾಡಿಕೊಂಡು..ಊಟದಲ್ಲಿ ಅವರಿಗೆ ನಿದ್ದೆ ಮಾತ್ರೆ ಹಾಕಿಕೊಡುತ್ತಿದ್ದ. ಅವರು ನಿದ್ರೆಗೆ ಜಾರಿದ ಮೇಲೆ ನಿರ್ಜನ ಪ್ರದೇಶಕ್ಕೆ ಲಾರಿಯನ್ನು ತಂದು ತನ್ನ ಸಂಗಡಿಗರ ಜೊತೆ ಚಾಲಕರನ್ನು ಹತ್ಯೆಗೈದು, ಶವವನ್ನು ಕಾಡುಗಳಲ್ಲಿ ಎಸೆಯುತ್ತಿದ್ದ ಎಂದು ಪೊಲೀಸರು ವಿವರಿಸಿದ್ದಾರೆ.

ನಂತರ ಖಮ್ರಾ ಮತ್ತು ಆತನ ಗ್ಯಾಂಗ್ ನ ಸದಸ್ಯರು ಲಾರಿ ಹಾಗೂ ಅದರಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿದ್ದರು. ಲಾರಿ ಚಾಲಕರು ಹಾಗೂ ಕ್ಲೀನರ್ಸ್ ಖಮ್ರಾ ಹಾಗೂ ಗ್ಯಾಂಗ್ ನ ಮುಖ್ಯ ಟಾರ್ಗೆಟ್ ಆಗಿತ್ತಂತೆ.

ಮನ್ ದೀಪ್ ಪ್ರದೇಶದಲ್ಲಿ ಖಮ್ರಾ ಸೀರಿಯಲ್ ಕಿಲ್ಲರ್ ಎಂದು ಹೇಳಿದಾಗ ಆತನ ಗೆಳೆಯರು ಮತ್ತು ಸಂಬಂಧಿಕರು ಅಚ್ಚರಿ ಹಾಗೂ ಆಘಾತಕ್ಕೊಳಗಾಗಿದ್ದರು. ಆತ ಒಳ್ಳೆಯ ವ್ಯಕ್ತಿ, ತನ್ನ ಪಾಡಿಗೆ ಬಟ್ಟೆ ಹೊಲಿಯುತ್ತಿದ್ದ. ಆತ ತನ್ನ ಕೈಯಾರೇ ಹಲವಾರು ಜನರ ಪ್ರಾಣ ತೆಗೆದಿದ್ದಾನೆ ಎಂಬುದನ್ನು ನಂಬಲು ಸಾಧ್ಯವಿಲ್ಲ ಎಂದು ನೆರೆಹೊರೆಯವರು ಪ್ರತಿಕ್ರಿಯಿಸಿದ್ದಾರೆ ಎಂದು ವರದಿಯೊಂದು ತಿಳಿಸಿದೆ.

ಮಧ್ಯಪ್ರದೇಶದ ಪೊಲೀಸರನ್ನು ಬಿಹಾರ, ಉತ್ತರಪ್ರದೇಶ ಹಾಗೂ ಬೇರೆ ರಾಜ್ಯಗಳಿಗೂ ಕಳುಹಿಸಲಾಗಿದೆ. ಖಮ್ರಾ ಹಾಗೂ ಆತನ ಗ್ಯಾಂಗ್ ಯಾವೆಲ್ಲ ಪ್ರಕರಣಗಳಲ್ಲಿ ಶಾಮೀಲಾಗಿದೆ ಎಂಬುದನ್ನು ಪತ್ತೆ ಹಚ್ಚಬೇಕಾಗಿದೆ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಪೊಲೀಸ್ ವರದಿ ಪ್ರಕಾರ, 2010ರಲ್ಲಿ ಭೋಪಾಲ್ ನಿಂದ 25 ಕಿಮೀ ದೂರದಲ್ಲಿರುವ ಮನ್ ದೀಪ್ ಕೈಗಾರಿಕಾ ಪ್ರದೇಶದಲ್ಲಿ ಟೈಲರ್ ಆಗಿ ಖಮ್ರಾ ವೃತ್ತಿ ಆರಂಭಿಸಿದ್ದ. ಬಳಿಕ ಹೆಚ್ಚಿನ ಹಣದ ಆಸೆಗಾಗಿ ಈತ ಜಾನ್ಸಿ, ಉತ್ತರಪ್ರದೇಶದ ಕಾಂಟ್ರಾಕ್ಟ್ ಕಿಲ್ಲಿಂಗ್ ಗ್ಯಾಂಗ್ ನ ಜೊತೆ ಸಂಪರ್ಕ ಬೆಳೆಸಿಕೊಂಡಿದ್ದ. ಹೀಗೆ ರಸ್ತೆ ಬದಿ ನಿಲ್ಲಿಸಿದ್ದ ಲಾರಿ ಚಾಲಕ, ಕ್ಲೀನರ್ ಜೊತೆ ಪರಿಚಯ ಮಾಡಿಕೊಂಡು ಮದ್ಯಪಾನಕ್ಕೆ ಆಹ್ವಾನಿಸುತ್ತಿದ್ದ. ಕುಡಿದ ನಂತರ ಚಾಲಕ, ಕ್ಲೀನರ್ ಅನ್ನು ಹತ್ಯೆಗೈಯುತ್ತಿದ್ದ. ಹೀಗೆ 2014ರಲ್ಲಿ ಮೊದಲ ಬಾರಿಗೆ ನಾಗ್ಪುರ್ ಪೊಲೀಸರು ಬಂಧಿಸಿದ್ದರು. ಆದರೆ ಆತ ಜಾಮೀನಿನ ಮೇಲೆ ಬಿಡುಗಡೆಗೊಂಡಿದ್ದ ಎಂದು ತಿಳಿಸಿದೆ.


Trending videos

Back to Top