5 ದಿನಗಳಲ್ಲಿ 8.5 ಲಕ್ಷ ಕೋಟಿ ರೂ. ನಷ್ಟ
Team Udayavani, Sep 25, 2018, 8:35 AM IST
ಹೊಸದಿಲ್ಲಿ: ಮುಂಬೈ ಶೇರುಪೇಟೆ ಸತತ ಐದನೇ ಸೆಷನ್ನಲ್ಲೂ ಕುಸಿತ ಕಂಡಿದ್ದು, ಶೇರುದಾರರು ಒಟ್ಟು 8.47 ಲಕ್ಷ ಕೋಟಿ ರೂ. ಕಳೆದುಕೊಂಡಿದ್ದಾರೆ. ಕಳೆದ ವಾರಕ್ಕೆ ಹೋಲಿಸಿದರೆ ಸೆನ್ಸೆಕ್ಸ್ ಶೇ. 5 ಇಳಿಕೆಯಾಗಿದೆ. ಸೋಮವಾರ 536.58 ಅಂಕ ಕುಸಿದು 36,305.02ಕ್ಕೆ ತಲುಪಿದೆ. ಒಟ್ಟು ಕಳೆದ ಐದು ದಿನಗಳಲ್ಲಿ 1,785.62 ಅಂಕ ಕುಸಿದಿದೆ. ನಿಫ್ಟಿ ಸೋಮವಾರ 175.7 ಅಂಕ ಕುಸಿದು 10,967.40ಕ್ಕೆ ತಲುಪಿದೆ.
ವ್ಯಾಪಾರ ನಿಷೇಧಕ್ಕೆ ಸಂಬಂಧಿಸಿ ಅಮೆರಿಕದ ಜೊತೆಗೆ ಚೀನ ಮಾತುಕತೆ ರದ್ದುಗೊಳಿಸಿರುವುದು ಮಾರುಕಟ್ಟೆ ಕುಸಿತಕ್ಕೆ ಕಾರಣ. ಕಳೆದ ವಾರ ಎನ್ಬಿಎಫ್ಸಿ, ಹಣಕಾಸು ಸಂಸ್ಥೆಗಳು ಭಾರೀ ಕುಸಿತಕ್ಕೆ ಕಾರಣವಾಗಿತ್ತು. ಹಣಕಾಸು ಸಂಸ್ಥೆಗಳು, ಮ್ಯೂಚುವಲ್ ಫಂಡ್ ಸಂಸ್ಥೆಗಳಲ್ಲಿ ಸೂಕ್ತ ದ್ರವ್ಯತೆ ಕಾಪಾಡಿಕೊಳ್ಳಲು ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಸಚಿವ ಜೇಟ್ಲಿ ಹೂಡಿಕೆದಾರರಿಗೆ ವಿಶ್ವಾಸ ಮೂಡಿಸುವ ಮಾತನ್ನಾಡಿದ್ದಾರೆ.