CONNECT WITH US  

ಬಹುಉದ್ದೇಶದ ರೇಣುಕಾಜಿ ಡ್ಯಾಂ ಯೋಜನೆಗೆ 6 ಸಿಎಂಗಳ ಸಹಿ 

ಹೊಸದಿಲ್ಲಿ: ಬಹುಉದ್ದೇಶಿತ ರೇಣುಕಾಜಿ ಡ್ಯಾಂ ನಿರ್ಮಾಣ ಒಪ್ಪಂದಕ್ಕೆ ಶುಕ್ರವಾರ 6 ರಾಜ್ಯಗಳ ಮುಖ್ಯಮಂತ್ರಿಗಳು ಕೇಂದ್ರ ಜಲಸಂಪನ್ಮೂಲ ಸಚಿವ ನಿತಿನ್‌ ಗಡ್ಕರಿ ಅವರ ಸಮ್ಮುಖದಲ್ಲಿ  ಸಹಿ ಮಾಡಿದ್ದಾರೆ.

ಹರ್ಯಾಣ ಸಿಎಂ ಮನೋಹರ್‌ಲಾಲ್‌ ಖಟ್ಟರ್‌ ಹಿಮಾಚಲ ಪ್ರದೇಶದ ಸಿಎಂ ಜೈರಾಮ್‌ ಠಾಕೂರ್‌, ಉತ್ತರಾಖಂಡದ ಟಿ.ಎಸ್‌.ರಾವತ್‌, ದೆಹಲಿಯ ಅರವಿಂದ್‌ ಕೇಜ್ರಿವಾಲ್‌, ರಾಜಸ್ಥಾನದ ಸಿಎಂ ಅಶೋಕ್‌ ಗೆಹ್ಲೋಟ್‌, ಮತ್ತು ಉತ್ತರಪ್ರದೇಶದ ಯೋಗಿ ಆದಿತ್ಯನಾಥ್‌ ಅವರು ಸಹಿ ಮಾಡಿದ್ದಾರೆ.

ರೇಣುಕಾಜಿ ಡ್ಯಾಂ  ಹಿಮಾಚಲ ಪ್ರದೇಶದ ಸಿರ್‌ಮೌರ್‌ ಜಿಲ್ಲೆಯಲ್ಲಿ ಯಮುನಾ ನದಿಯ ಉಪನದಿಯಾಗಿರುವ ಗಿರಿ ನದಿಗೆ ನಿರ್ಮಿಸಲಾಗುತ್ತಿದ್ದು, 148 ಮೀಟರ್‌ ಎತ್ತರಕ್ಕೆ ನಿರ್ಮಾಣಮಾಡುವ ಗುರಿ ಹಾಕಲಾಗಿದೆ. ಯೋಜನೆ ಮೂಲಕ ದೆಹಲಿ ಮತ್ತು ಇತರ ರಾಜ್ಯಗಳಿಗೆ 23ಕ್ಯುಸೆಕ್‌ ನೀರು ಸರಬರಾಜು ಮಾಡುವ ಯೋಜನೆ ಹಾಕಿಕೊಳ್ಳಲಾಗಿದೆ. ಯೋಜನೆ ಮೂಲಕ ಹರಿವು ಜೋರಾಗಿರುವ ವೇಳೆ 40 ಮೆಗಾ ವ್ಯಾಟ್‌ ವಿದ್ಯುತ್‌ ಉತ್ಪಾದನೆ ಗುರಿಯನ್ನು ಹೊಂದಲಾಗಿದೆ. ಯೋಜನೆಯಿಂದ 1,508 ಹೆಕ್ಟೇರ್‌ ಭೂಮಿ ಜಲಾವೃತವಾಗಲಿದೆ. 

ಡ್ಯಾಂ ನೀರಿನ ಬಳಕೆಗೆ ಒಪ್ಪಂದವಾಗಿದ್ದು, ಹರಿಯಾಣಕ್ಕೆ 47.8 % , ಉತ್ತರ ಪ್ರದೇಶ ಮತ್ತು ಉತ್ತಾರಖಂಡಕ್ಕೆ 33.65 %, ಹಿಮಾಚಲ ಪ್ರದೇಶಕ್ಕೆ 3.15 %, ರಾಜಸ್ಥಾನಕ್ಕೆ 9.3 % ಮತ್ತು ರಾಷ್ಟ್ರ ರಾಜಧಾನಿ ದೆಹಲಿಗೆ 6.04 % ನೀರು ಉಪಯೋಗಕ್ಕೆ ಲಭ್ಯವಾಗಲಿದೆ. 

ಯೋಜನಾ ವೆಚ್ಚದ 90% ನ್ನು ಕೇಂದ್ರ ಸರ್ಕಾರ ನೀಡಲಿದ್ದು ಉಳಿದ ಹಣವನ್ನು ರಾಜ್ಯ ಸರಕಾರಗಳು ಭರಿಸಲಿವೆ. 2015 ರಲ್ಲಿ  4,596.76 ಕೋಟಿ ರೂಪಾಯಿ ಯೋಜನಾ ವೆಚ್ಚವನ್ನು ಅಂದಾಜಿಸಲಾಗಿತ್ತು. 

Trending videos

Back to Top