CONNECT WITH US  

ಅಲಹಾಬಾದ್‌ ವಿವಿ ನಿಯಮ ಅಖೀಲೇಶ್‌ಗೆ ಮೊದಲೇ ತಿಳಿಸಲಾಗಿತ್ತು: ಯೋಗಿ

ಲಕ್ನೋ : ''ಅಲಹಾಬಾದ್‌ ವಿಶ್ವವಿದ್ಯಾಲಯದ ಯಾವುದೇ ಕಾರ್ಯಕ್ರಮಗಳಿಗೆ ರಾಜಕಾರಣಿಗಳಿಗೆ ಪ್ರವೇಶಾವಕಾಶ ಇರುವುದಿಲ್ಲ ಎಂಬುದನ್ನು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ, ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಗೆ ಮೊದಲಾಗಿಯೇ ತಿಳಿಸಲಾಗಿತ್ತು.  ಆ  ಪ್ರಕಾರ ಅಲಹಾಬಾದ್‌ ವಿವಿಯ ವಿದ್ಯಾರ್ಥಿ ನಾಯಕನ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಪಾಲ್ಗೊಳ್ಳಲೆಂದು ಬಂದಿದ್ದ ಅಖೀಲೇಶ್‌ ಅವರನ್ನು ವಿಮಾನ ನಿಲ್ದಾಣದಲ್ಲೇ ಅಧಿಕಾರಿಗಳು ತಡೆದಿದ್ದರು. ಸಮಾಜವಾದಿ ಪಕ್ಷ ಇನ್ನಾದರೂ ತನ್ನ ಈ ಬಗೆಯ  ಅರಾಜಕ ಚಟುವಟಿಕೆಗಳಿಂದ ದೂರ ಇರಬೇಕು'' ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದಾರೆ. 

ಅಲಹಾಬಾದ್‌ ವಿವಿಯ ವಿದ್ಯಾರ್ಥಿ ಸಂಘಟನೆಯ ಕಾರ್ಯಕ್ರಮಕ್ಕೆ ಪ್ರಯಾಗ್‌ರಾಜ್‌ ಗೆ ಹೋಗಲಿದ್ದ ಅಖೀಲೇಶ್‌ ಯಾದವ್‌ ಅವರು ತಮ್ಮನ್ನು  ಚೌಧರಿ ಚರಣ್‌ ಸಿಂಗ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ತಡೆದು ಪ್ರಶ್ನಿಸುತ್ತಿದ್ದ ಫೋಟೋಗಳನ್ನು ಟ್ಟಿಟರ್‌ ನಲ್ಲಿ ಪೋಸ್ಟ್‌ ಮಾಡಿ, ಸರಕಾರದ ಅಪ್ರಜಾಸತ್ತಾತ್ಮಕ ಕ್ರಮವನ್ನು ಖಂಡಿಸಿದ್ದರು. 

ಆದರೆ ವಾಸ್ತವದಲ್ಲಿ ಅಲಹಾಬಾದ್‌ ವಿವಿ ಯ ರಿಜಿಸ್ಟ್ರಾರರು ಸಾಕಷ್ಟು ಮೊದಲೇ ಯಾದವ್‌ ಅವರ ಆಪ್ತ ಕಾರ್ಯದರ್ಶಿಗೆ ಪತ್ರ ಬರೆದು 'ಅಲಹಾಬಾದ್‌ ವಿವಿಯ ಯಾವುದೇ ಕಾರ್ಯಕ್ರಮಗಳಿಗೆ ರಾಜಕಾರಣಿಗಳಿಗೆ ಪ್ರವೇಶ ಇರುವುದಿಲ್ಲ' ಎಂಬುದನ್ನು  ಸ್ಪಷ್ಟಪಡಿಸಿದ್ದರು. 

ಅಖೀಲೇಶ್‌ ಅವರನ್ನು ತಡೆಯಲಾದ ಘಟನೆಯನ್ನು ಖಂಡಿಸಿರುವ ಬಿಎಸ್‌ಪಿ ಪರಮೋಚ್ಚ ನಾಯಕಿ ಮಾಯಾವತಿ ಅವರು, ''ರಾಜ್ಯದಲ್ಲಿನ ಆಳುವ ಬಿಜೆಪಿ ಪ್ರಜಾಸತ್ತೆ ವಿರೋಧಿ ಕ್ರಮಗಳನ್ನು ಅನುಸರಿಸುತ್ತಿರುವುದು ಸಂಪೂರ್ಣ ಸರ್ವಾಧಿಕಾರಕ್ಕೆ ಉದಾಹರಣೆಯಾಗಿದೆ; ಬಿಜೆಪಿಗೆ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿಕೂಟದ ಬಗ್ಗೆ ಭಯ ಇರುವುದು ಸ್ಪಷ್ಟವಿದೆ'' ಎಂದು ಹೇಳಿದ್ದಾರೆ. 


Trending videos

Back to Top