CONNECT WITH US  

ಕೀಲುಮೂಳೆಗೆ ಆಕರ ಜೀವಕೋಶ ಚಿಕಿತ್ಸೆ: ಕನ್ನಡಿಗ ವೈದ್ಯರ ಸಾಧನೆ  

ಕೀಲುನೋವು, ಮೂಳೆನೋವು ಚಿಕಿತ್ಸೆಗೆ ಸಂಬಂಧಿಸಿ, ಆಕರ ಜೀವಕೋಶ ಚಿಕಿತ್ಸೆಯ ಮೂಲಕ ಮೂಳೆ ಬೆಳವಣಿಗೆಯಾಗುವಂತೆ ಮಾಡುವ ಅಮೂಲ್ಯ ಚಿಕಿತ್ಸಾ ಸಂಶೋಧನೆಯೊಂದು ಅತ್ಯಂತ ಕಡಿಮೆ ದರದಲ್ಲಿ ಜನಸಾಮಾನ್ಯರಿಗೂ ಲಭ್ಯವಾಗುವಂತೆ ಮಾಡಲು ಕರ್ನಾಟಕ ಸಂಜಾತ ಲಂಡನ್‌ ವೈದ್ಯರೊಬ್ಬರು ಮುಂದಾಗಿದ್ದಾರೆ. ಭಾರತದ ಮೇಲಿನ ಅಭಿಮಾನ, ಕರ್ನಾಟಕದ ಮೇಲಿನ ಪ್ರೀತಿ, ಧರ್ಮಸ್ಥಳದ ಮೇಲಿನ ಭಕ್ತಿಯ ಪರಿಣಾಮ ಅವರು ಕೋಟ್ಯಂತರ ರೂ. ಬೆಲೆಬಾಳುವ ತಮ್ಮ ಶೋಧವನ್ನು ಧರ್ಮಸ್ಥಳದ ಮೂಲಕ ಜನಸಾಮಾನ್ಯರಿಗೆ ತಲುಪಿಸುತ್ತಿದ್ದಾರೆ.

ಬೆಳ್ತಂಗಡಿ: ದೈಹಿಕವಾಗಿ ವಿದೇಶದಲ್ಲಿದ್ದರೂ ಅನೇಕ ಭಾರತ ಸಂಜಾತರ ಹೃದಯ ದೇಶವಾಸಿಗಳಿಗಾಗಿ ಮಿಡಿಯುತ್ತದೆ. ಇದಕ್ಕೊಂದು ತಾಜಾ ನಿದರ್ಶನ ಇಲ್ಲಿದೆ - ಲಂಡನ್‌ನಲ್ಲಿ ಪ್ರಖ್ಯಾತ ಮೂಳೆ ಶಸ್ತ್ರಚಿಕಿತ್ಸಾ ತಜ್ಞರಾಗಿ ವೃತ್ತಿ ಬದುಕು ಕಟ್ಟಿಕೊಂಡ ಕುಂದಾಪುರ ಮೂಲದ ಡಾ| ಎ.ಎ. ಶೆಟ್ಟಿ, ತಾನು ನಡೆಸಿರುವ ಅಮೂಲ್ಯ ಸಂಶೋಧನೆಯೊಂದರ ಕೋಟ್ಯಂತರ ರೂ. ಬೆಲೆ ಬಾಳುವ ಫ‌ಲಿತಾಂಶವನ್ನು ಜನಸಾಮಾನ್ಯರ ಉಪ ಯೋಗಕ್ಕಾಗಿ ಧರ್ಮಸ್ಥಳಕ್ಕೆ ಹಸ್ತಾಂತರಿಸಿದ್ದಾರೆ. 

ತನ್ನ ಶೋಧ ಕೇವಲ ಹಣ ಗಳಿಕೆಗೆ ಮೀಸಲಾಗಬಾರದು; ತಾಯ್ನಾಡಿನ ಜನತೆಗೆ ಅದರ ಪ್ರಯೋಜನ ಲಭಿಸಬೇಕೆಂಬ ಅವರ ಹಂಬಲ ಈ ಮೂಲಕ ಸಾರ್ಥಕ್ಯ ಕಂಡಿದೆ. ಇದು ಧರ್ಮಸ್ಥಳದ ಸೇವಾಪ್ರಕಲ್ಪ ಯಶಸ್ವಿಯಾಗಿ ಜನಸಾಮಾನ್ಯರನ್ನು ತಲುಪುತ್ತದೆ ಎಂಬುದು ಗುರುತಿಸಲ್ಪಟ್ಟ ಘಟನೆಯೂ ಹೌದು. 

ಲಂಡನ್‌ನಲ್ಲಿ ಖ್ಯಾತರಾದ, ಕಾಲಿನ ಮೂಳೆ, ಮೊಣಕಾಲಿನ ಶಸ್ತ್ರಚಿಕಿತ್ಸಾ ತಜ್ಞ, ಅನಿವಾಸಿ ಭಾರತೀಯ ಡಾ| ಎ.ಎ. ಶೆಟ್ಟಿ ಅವರು ಮೂಳೆ ಚಿಕಿತ್ಸೆಗೆ ಸಂಬಂಧಿಸಿದ ಅಮೂಲ್ಯ ಸಂಶೋಧನೆಯನ್ನು ತಮ್ಮ ಸಹಸಂಶೋಧಕ ದಕ್ಷಿಣ ಕೊರಿಯಾದ ಡಾ| ಎಸ್‌.ಜೆ. ಕಿಮ್‌ ಅವರ ಜತೆಗೂಡಿ ಶೆಟ್ಟಿ ಕಿಮ್‌ ರಿಸರ್ಚ್‌ ಫೌಂಡೇಶನ್‌ ಮೂಲಕ ಧರ್ಮಸ್ಥಳದಲ್ಲಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಸೋಮವಾರ ಹಸ್ತಾಂತರಿಸಿ ದ್ದಾರೆ. ಆ ಮೂಲಕ ವೈದ್ಯಲೋಕದ ರತ್ನ ಎನಿಸಿಕೊಂಡಿದ್ದಾರೆ.

ಸರ್ಜೆರಿಯನ್‌ ನೊಬೆಲ್‌ ಪುರಸ್ಕೃತರು
ಲಂಡನ್‌ನ ವೈದ್ಯಕೀಯ ವಿಜ್ಞಾನ ಸಂಸ್ಥೆಗಳ ನಿರ್ದೇಶಕ ಡಾ| ಎ.ಎ. ಶೆಟ್ಟಿ   (ಅಸೊಡೆ ಅನಂತ್ರಾಮ ಶೆಟ್ಟಿ) ಅವರು ಈ ವರ್ಷ ಮೇಯಲ್ಲಿ ರಾಯಲ್‌ ಕಾಲೇಜ್‌ ಆಫ್‌ ಸರ್ಜನ್ಸ್‌ ಆಫ್‌ ಇಂಗ್ಲಂಡ್‌ನಿಂದ ಪ್ರತಿಷ್ಠಿತ "ಹಂಟೇರಿಯನ್‌ ಮೆಡಲ್‌' ಪುರಸ್ಕಾರಕ್ಕೆ ಭಾಜನರಾಗಿದ್ದರು. ಜಾಗತಿಕ ವೈದ್ಯ ಸಂಶೋಧನ ಕ್ಷೇತ್ರದಲ್ಲಿ ಇದು "ಸರ್ಜಿಕಲ್‌ ನೊಬೆಲ್‌' ಎಂದೇ ಪರಿಗಣಿತವಾಗಿದೆ. 

ಕಳೆದ 200 ವರ್ಷಗಳಲ್ಲಿ ಈ ಪ್ರಶಸ್ತಿ ಪಡೆದ 4ನೇ ಭಾರತೀಯ ಹಾಗೂ ಮೊದಲ ಕನ್ನಡಿಗ ಡಾ| ಎ. ಎ. ಶೆಟ್ಟಿ. ಇವರು ಮೂಲತಃ ಕುಂದಾಪುರ- ಕೋಟೇಶ್ವರದ ಅಸೊಡೆಯವರು. ಕಳೆದ 34 ವರ್ಷಗಳಿಂದ ಲಂಡನ್‌ ನಿವಾಸಿ, ತಜ್ಞ ವೈದ್ಯ, ಪ್ರಾಧ್ಯಾಪಕ.

ಸಂಶೋಧನೆ
ಮೊಣಕಾಲಿನ ಕೀಲುನೋವು, ಕಾಲು ನೋವು, ಮೂಳೆಮುರಿತಕ್ಕೊಳಗಾದ ಸಂದರ್ಭದಲ್ಲಿ ಆಕರ ಜೀವಕೋಶ (ಸ್ಟೆಮ್‌ ಸೆಲ್‌) ಚಿಕಿತ್ಸೆ ನೀಡುವ ತಂತ್ರಜ್ಞಾನದ ಬಗೆಗೆ ಸಂಶೋಧನೆಯನ್ನು ಡಾ| ಶೆಟ್ಟಿ ನಡೆಸಿ ದ್ದಾರೆ. ಇದರಿಂದಾಗಿ ಯಮಯಾತನೆ ಉಂಟು ಮಾಡುವ ಕಾಲುನೋವು, ಕೀಲುನೋವು, ಮಂಡಿನೋವಿನ ಪರಿ ಹಾರಕ್ಕೆ ಲಕ್ಷಾಂತರ ರೂ. ವೆಚ್ಚದ ಚಿಕಿತ್ಸೆ ಪಡೆಯಬೇಕಿಲ್ಲ; ಅಪಘಾತದಿಂದ ಮೂಳೆ ಮುರಿತಕ್ಕೊಳಗಾದಾಗ ಲೋಹದ ರಾಡ್‌ ಅಥವಾ ಲೋಹದ ಮೂಳೆಯನ್ನು ದೇಹ ದೊಳಕ್ಕೆ ಇಳಿಸಿಕೊಳ್ಳುವ ಅನಿವಾರ್ಯತೆ ಮಾಯವಾಗಲಿದೆ. 

ತ್ವರಿತ ಚಿಕಿತ್ಸೆ
ಮೂಳೆಗಂಟಿನ ಸಮಸ್ಯೆ, ಸಂಧಿವಾತ ಸಮಸ್ಯೆ, ಮೂಳೆಮುರಿತಗಳಿಗೆ ಚಿಕಿತ್ಸೆಯನ್ನು ನಾವು ಆವಿಷ್ಕರಿಸಿರುವ ಆಕರ ಜೀವಕೋಶ ಚಿಕಿತ್ಸಾ ತಂತ್ರಜ್ಞಾನದ ಮೂಲಕ ತ್ವರಿತವಾಗಿ ಹಾಗೂ ಕಡಿಮೆ ಖರ್ಚಿನಲ್ಲಿ ನಡೆಸಬಹುದು ಎಂದು ಡಾ|ಎ.ಎ. ಶೆಟ್ಟಿ ಅವರು "ಉದಯವಾಣಿ'ಗೆ ವಿವರಿಸಿದರು. ಅಪಘಾತಗಳಿಂದ ಮೂಳೆ ಜರ್ಝರಿತವಾದಾಗ, ಮೊಣಗಂಟಿನ ಚಿಕಿತ್ಸೆ ಸಂದರ್ಭ ಲೋಹದ ಮೂಳೆಯನ್ನು ಜೋಡಿಸಲಾಗುತ್ತದೆ. ಸಂಶೋಧಿತ ಹೊಸ ತಂತ್ರಜ್ಞಾನದಲ್ಲಿ ಚಿಕಿತ್ಸೆ ಅವಶ್ಯವುಳ್ಳ ವ್ಯಕ್ತಿಯ ಮೂಳೆಯ ಆಕರ ಜೀವಕೋಶಗಳನ್ನು ತೆಗೆದು, ಪ್ರಯೋಗಾಲಯದಲ್ಲಿ ಅವು ಅಭಿವೃದ್ಧಿ ಹೊಂದುವಂತೆ ಮಾಡಿ, ಮರಳಿ ದೇಹದಲ್ಲಿ ಕೂರಿಸಲಾಗುತ್ತದೆ. ಆಗ ಬದಲಿ ಮೂಳೆ ಅಳವಡಿಕೆ ಅಗತ್ಯವಾಗುವುದಿಲ್ಲ, ಎಲುಬಿನ ಆಕರ ಕೋಶಗಳೇ ಸ್ವಯಂ ವೃದ್ಧಿ ಹೊಂದಿ, ಮೂಳೆ ತಾನಾಗಿ ಜೋಡಣೆಯಾಗುತ್ತದೆ ಎಂದು ಅವರು ವಿವರಿಸಿದರು.

ಪೇಟೆಂಟ್‌
2012ರಲ್ಲಿ ಲಂಡನ್‌ನಲ್ಲಿ ಡಾ| ಶೆಟ್ಟಿ ಅವರ ಸಂಶೋಧನೆ ಪೂರ್ಣಗೊಂಡಿದ್ದು, 2016 ಜೂ.22ರಂದು ಇಂಗ್ಲಂಡ್‌ ಸರಕಾರ ಮಾನ್ಯತೆ ನೀಡಿದೆ. ಇದರ ಪೇಟೆಂಟ್‌ ಕೂಡ ಡಾ| ಶೆಟ್ಟಿ ಅವರದೇ ಹೆಸರಿನಲ್ಲಿದೆ. ಈ ತಂತ್ರಜ್ಞಾನವನ್ನು ವೈದ್ಯಕೀಯ ರಂಗದ ಯಾವುದೇ ಕಂಪೆನಿ ಚಿಕ್ಕಾಸಿನ ಚೌಕಾಸಿ ನಡೆಸದೆ ಕೋಟ್ಯಂತರ ಡಾಲರ್‌ ಬೆಲೆಗೆ ಖರೀದಿಸುವುದು ನಿಸ್ಸಂಶಯ. ಆದರೆ ದೇಶಾಭಿಮಾನ ಹಾಗೂ ಕನ್ನಡ-ಕನ್ನಡಿಗರ ಮೇಲಿನ ಪ್ರೀತಿ ಹಾಗೂ ಧರ್ಮಸ್ಥಳದ ಮೇಲಿನ ಭಕ್ತಿಗಳಿಂದ ಡಾ| ಶೆಟ್ಟಿ ಅವರು ಚಿಕಿತ್ಸಾ ತಂತ್ರಜ್ಞಾನವನ್ನು ಧರ್ಮಸ್ಥಳಕ್ಕೆ ನೀಡಿದ್ದಾರೆ. ಧಾರವಾಡದಲ್ಲಿರುವ ಎಸ್‌ಡಿಎಂ ಆಸ್ಪತ್ರೆಯಲ್ಲಿ ಈ ಚಿಕಿತ್ಸಾ ಸೌಲಭ್ಯ ದೊರೆಯಲಿದೆ. ಅಲ್ಲಿನ ಆಸ್ಪತ್ರೆಯ ಮೂವರು ವೈದ್ಯರಿಗೆ ಕಳೆದ ಒಂದು ವರ್ಷದಿಂದ ಈ ಬಗ್ಗೆ ವಿದೇಶದಲ್ಲಿ ತರಬೇತಿ ನೀಡಲಾಗಿದ್ದು, ಈಗ ಒಬ್ಬರು ವೈದ್ಯರನ್ನು ಹೆಚ್ಚುವರಿ ತರಬೇತಿಗೆ ಜಪಾನಿಗೆ ಕಳುಹಿಸಲಾಗಿದೆ. ಕಳೆದ ಎರಡು ವರ್ಷಗಳಿಂದ ಅಲ್ಲಿನ ಪ್ರಯೋಗಾಲಯದಲ್ಲಿ ಪ್ರಾಯೋಗಿಕವಾಗಿ ಈ ಕಾರ್ಯ ನಡೆಸಲಾಗುತ್ತಿದೆ.

ಸಾಮಾನ್ಯ ಕಾಲುನೋವು
ದಕ್ಷಿಣ ಭಾರತದಲ್ಲಿ ಕಾಲುನೋವು ಕಾಣಿಸಿಕೊಳ್ಳುವ ಪ್ರಮಾಣ ಕೂಡ ಅಧಿಕ. ಸಾಮಾನ್ಯವಾಗಿ ಹಿರಿಯರು ವಯೋಸಹಜ ಎಂದು ಇದನ್ನು ನಿರ್ಲಕ್ಷಿಸುತ್ತಾರೆ ಅಥವಾ ಶಸ್ತ್ರಚಿಕಿತ್ಸೆಯ ಬದಲಿಗೆ ಸಾಮಾನ್ಯ ಚಿಕಿತ್ಸೆಯ ಮೊರೆ ಹೊಗುತ್ತಾರೆ. ಮೊಣಕಾಲಿನ ಶಸ್ತ್ರಚಿಕಿತ್ಸೆ ಹಾಗೂ ಮೂಳೆಮುರಿತದ ಶಸ್ತ್ರಚಿಕಿತ್ಸೆ ಅತ್ಯಂತ ದುಬಾರಿ ಚಿಕಿತ್ಸೆಯಾಗಿದೆ. ಆಸ್ಪತ್ರೆಗಳಲ್ಲಿ ಇದಕ್ಕೆ ಕನಿಷ್ಠ 3ರಿಂದ 6 ಲಕ್ಷ ರೂ. ವೆಚ್ಚವಾಗುತ್ತದೆ. ಆದರೆ ಡಾ| ಶೆಟ್ಟಿ ಅವರು ತಮ್ಮ ತಂತ್ರಜ್ಞಾನವನ್ನು ಉಚಿತವಾಗಿ ನೀಡಿರುವ ಕಾರಣ ರೂಢಿಗತ ಎಲುಬಿನ ಶಸ್ತ್ರಚಿಕಿತ್ಸೆಗೆ ತಗಲುವ ವೆಚ್ಚದ ಶೇ.20ರಷ್ಟು ವೆಚ್ಚದಲ್ಲಿ (ಇತರ ವೆಚ್ಚಗಳ ಹೊರತಾಗಿ) ಈ ಚಿಕಿತ್ಸೆ ದೊರೆಯಲಿದೆ. ಒಂದರ್ಥದಲ್ಲಿ ಕೇಂದ್ರ ಸರಕಾರದ ಜನೌಷಧಿ ಯೋಜನೆಗೆ ಪೂರಕವಾಗಿ ಇದೆ ಈ ಚಿಕಿತ್ಸಾ ತಂತ್ರಜ್ಞಾನ.

ತಂತ್ರಜ್ಞಾನ ಹಸ್ತಾಂತರ ಸಂದರ್ಭ ಎಸ್‌ಡಿಎಂ ಆಸ್ಪತ್ರೆ ಧಾರವಾಡದ ಡಾ| ಸುಘೋಷ್‌ ಕುಲಕರ್ಣಿ, ಡಾ| ಮಲ್ಲಿಕಾರ್ಜುನ, ಡಾ| ಶೆಟ್ಟಿಯವರ ಸಲಹೆಗಾರ ವೇಣು ಶರ್ಮ ಮಂಗಳೂರು ಉಪಸ್ಥಿತರಿದ್ದರು.

ಧರ್ಮಸ್ಥಳದ ಮೂಲಕ ನಾಡಿಗೆ ಅರ್ಪಣೆ
ನನಗೇನೂ ಅಪೇಕ್ಷೆ ಇಲ್ಲ. ನಾನು ಹಿಂದಿನಿಂದಲೂ ಧರ್ಮಸ್ಥಳದ ಭಕ್ತ. ಡಾ| ಹೆಗ್ಗಡೆಯವರು ನನ್ನ ಧಾರ್ಮಿಕ ಗುರು. ಭಾರತೀಯನಾಗಿ, ಕನ್ನಡಿಗನಾಗಿ ಈ ದೇಶದ ಜನರಿಗಾಗಿ ಏನಾದರೂ ಕೊಡುಗೆ ನೀಡಬೇಕೆಂಬ ನನ್ನ ಬಹುದಿನಗಳ ಬಯಕೆ ಇಂದು ಈಡೇರಿದೆ. ಮೂಳೆ ಜೋಡಣೆಗೆ ತಂತ್ರಜ್ಞಾನ ಇದೆಯಾದರೂ ಅದು ಅತಿ ದುಬಾರಿ. ಕಡಿಮೆ ಖರ್ಚಿನ ಚಿಕಿತ್ಸೆ ಸಾಧ್ಯವಾಗುವಂತಹ ತಂತ್ರಜ್ಞಾನ ಆವಿಷ್ಕರಿಸಿರುವ ಕಾರಣ ನನಗೆ ಪ್ರಶಸ್ತಿ ದೊರೆತಿದೆ. ಈಗ ಈ ತಂತ್ರಜ್ಞಾನ ಧರ್ಮಸ್ಥಳದ ಮೂಲಕ ನಾಡಿನ ಜನತೆಗೆ ತಲುಪುವಂತೆ ಮಾಡುತ್ತಿದ್ದೇನೆ. ಅದು ಅರ್ಹರನ್ನು ತಲುಪಬೇಕಾದರೆ ಇದೇ ಸೂಕ್ತ ವಿಧಾನ.
- ಡಾ|ಎ.ಎ. ಶೆಟ್ಟಿ, ಖ್ಯಾತ ವೈದ್ಯರು

ಸಾಧನೆ
ಡಾ| ಎ.ಎ. ಶೆಟ್ಟಿ ಅವರ ಕೊಡುಗೆ ಜನೋಪ ಕಾರಿಯಾಗಿದೆ. ಮುಂದೆಯೂ ಅವರು ನಡೆಸುವ ಸಂಶೋ ಧನೆಗಳ ಜತೆಗೆ ನಾವಿರುತ್ತೇವೆ. ಒಬ್ಬ ವ್ಯಕ್ತಿಯ ಸಾಧನೆ ಜನ ಸಾಮಾನ್ಯರಿಗೆ ತಲುಪುವ ಮಹತ್ತರ ಘಳಿಗೆ ಇದು. 
- ಡಾ| ಡಿ. ವೀರೇಂದ್ರ ಹೆಗ್ಗಡೆ, ಧರ್ಮಸ್ಥಳ

- ಲಕ್ಷ್ಮೀ ಮಚ್ಚಿನ


Trending videos

Back to Top