CONNECT WITH US  

ಮಹದಾಯಿಗೆ ಆಗ್ರಹಿಸಿ ಉ.ಕ. ಬಂದ್‌ ಇಂದು

ಹುಬ್ಬಳ್ಳಿ: ಮಹದಾಯಿ ವಿವಾದ ಮತ್ತೆ ಭುಗಿಲೆದ್ದಿದ್ದು, ಡಿ.27ರಂದು ಉತ್ತರ ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದೆ.
ಮುಂಜಾಗ್ರತೆ ಕ್ರಮವಾಗಿ ವ್ಯಾಪಕ ಬಂದೋಬಸ್ತ್ ಕೈಗೊಳ್ಳಲಾಗಿದ್ದು, ಅಕ್ಕಮಹಾದೇವಿ ವಿವಿ, ಕವಿವಿ, ಕಾನೂನು ವಿವಿ ಹಾಗೂ ವಿಟಿಯು ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಬಂದ್‌ಗೆ ಮಹದಾಯಿ ವ್ಯಾಪ್ತಿಯ ಧಾರವಾಡ, ಗದಗ, ಬೆಳಗಾವಿ ಹಾಗೂ ಬಾಗಲಕೋಟೆ ಜಿಲ್ಲೆಯ ಕೆಲವು ಭಾಗಗಳಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುವ ಸಾಧ್ಯತೆಯಿದೆ. ಬಂದ್‌ ಹಿನ್ನೆಲೆಯಲ್ಲಿ ಧಾರವಾಡ ಜಿಲ್ಲಾಡಳಿತ ಡಿ.27ರಂದು ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಿದೆ. ಜಿಲ್ಲೆಯಾದ್ಯಂತ ಬಿಗಿ ಪೊಲೀಸ್‌ ಬಂದೋಬಸ್ತ್ ಮಾಡಲಾಗಿದ್ದು, 2 ಕೆಎಸ್‌ಆರ್‌ಪಿ
ಮತ್ತು 10 ಜಿಲ್ಲಾ ಸಶಸ್ತ್ರ ಮೀಸಲು ಪಡೆಯನ್ನು ನಿಯೋಜಿಸಲಾಗಿದೆ. ಬೇರೆ ಜಿಲ್ಲೆಗಳಿಂದ ಧಾರವಾಡ ಜಿಲ್ಲೆ ಪ್ರವೇಶಿಸಿ
ಮುಂದೆ ಹೋಗುವ ವಾಹನಗಳ ಮಾರ್ಗ ಬದಲಾವಣೆ ಮಾಡಲಾಗಿದೆ.

ಮಂಗಳವಾರ ಮಧ್ಯರಾತ್ರಿ 12ರಿಂದ ಬುಧವಾರ ರಾತ್ರಿ 12ರವರೆಗೂ ಮದ್ಯ ಮಾರಾಟ ನಿಷೇಧಿಸಲಾಗಿದೆ. ಇನ್ನುಳಿದಂತೆ ಪ್ರತಿ ಠಾಣೆಯಲ್ಲಿ ಒಬ್ಬ ಪೊಲೀಸರನ್ನು ಹೊರತುಪಡಿಸಿ ಉಳಿದ ಎಲ್ಲ ಪೊಲೀಸ್‌ ಸಿಬ್ಬಂದಿಯನ್ನು ಬಂದ್‌ ನಿರ್ವಹಣೆಗೆ ನಿಯೋಜಿಸಲಾಗಿದೆ ಎಂದು ಧಾರವಾಡ ಜಿಲ್ಲಾ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಸಂಗೀತಾ ತಿಳಿಸಿದ್ದಾರೆ.

ಗದಗ ಜಿಲ್ಲೆಯ ನರಗುಂದ, ರೋಣ, ಗಜೇಂದ್ರಗಡ ಪಟ್ಟಣ ಪ್ರದೇಶದಲ್ಲಿ ಮಾತ್ರ ಪ್ರಾಥಮಿಕ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಮನೋಜ ಜೈನ್‌ ತಿಳಿಸಿದ್ದಾರೆ. ಸೂಕ್ಷ್ಮ ಪ್ರದೇಶವಾಗಿರುವ ಗದಗ ಜಿಲ್ಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ 1,200 ಪೊಲೀಸ್‌ ಸಿಬ್ಬಂದಿ ನೇಮಿಸಲಾಗಿದೆ ಎಂದು ಎಸ್‌ಪಿ ಸಂದೇಶ ಬಾಬು ತಿಳಿಸಿದ್ದಾರೆ.

ಬಾಗಲಕೋಟೆ ಜಿಲ್ಲೆಯಲ್ಲಿ ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಿಲ್ಲ. ಬಂದ್‌ಗೆ ಕರೆ ನೀಡಿರುವ ಸಂಘಟನೆಗಳ ಪ್ರಮುಖರೊಂದಿಗೆ ಚರ್ಚೆ ನಡೆಸಿದ್ದು, ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆ ಸಮಯವಿದೆ. ರಜೆ ಘೋಷಣೆ ಮಾಡುವುದರಿಂದ
ತೊಂದರೆಯಾ ಗುತ್ತದೆ. ಆದ್ದರಿಂದ ಬಂದ್‌ನ್ನು ಶಾಂತ ರೀತಿಯಿಂದ ನಡೆಸಲು ಕೋರಲಾಗಿದೆ ಎಂದು ಜಿಲ್ಲಾಧಿಕಾರಿ ಶಾಂತರಾಂ ಕೆ.ಜಿ "ಉದಯವಾಣಿ'ಗೆ ತಿಳಿಸಿದ್ದಾರೆ.

ಬೆಳಗಾವಿ ಜಿಲ್ಲೆಯ ಬೈಲಹೊಂಗಲ, ರಾಮದುರ್ಗ ಹಾಗೂ ಸವದತ್ತಿ ತಾಲೂಕುಗಳಲ್ಲಿ ಮಾತ್ರ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ಜಿಯಾವುಲ್ಲಾ ತಿಳಿಸಿದ್ದಾರೆ.

ಬೆಳಗ್ಗೆ 6ರಿಂದಲೇ ಬಸ್‌ ಬಂದ್‌: ಹುಬ್ಬಳ್ಳಿ- ಧಾರವಾಡದಲ್ಲಿ ಬೆಳಗ್ಗೆ 6 ಗಂಟೆಗೆ ವಾಯವ್ಯ ಸಾರಿಗೆ ಡಿಪೋಗಳಿಗೆ ತೆರಳಿ ಹೊರ ಹೋಗುವ ಬಸ್‌ಗಳನ್ನು ತಡೆಯಲಾಗುವುದು. ನಂತರ ದುರ್ಗದ ಬಯಲು, ದಾಜಿಬಾನ್‌ ಪೇಟೆ, ಗೋಕುಲ ರಸ್ತೆ, ಗೋಪನ ಕೊಪ್ಪ- ಬೆಂಗೇರಿ ಇನ್ನಿತರ ಕಡೆಗಳಿಂದ ಮೆರವಣಿಗೆ ಮೂಲಕ ಆಗಮಿಸಿ ಚನ್ನಮ್ಮ ವೃತ್ತದಲ್ಲಿ ಹೋರಾಟಗಾರರು
ಜಮಾಯಿಸಲಿದ್ದಾರೆ. ಬಂದ್‌ ಯಶಸ್ಸಿಗೆ ಎಲ್ಲ ರೀತಿಯ ಸಿದಟಛಿತೆ ಕೈಗೊಳ್ಳಲಾಗಿದೆ ಎಂದು ಮಹದಾಯಿ ಹೋರಾಟಗಾರ
ಸುರೇಶಗೌಡ ಪಾಟೀಲ ತಿಳಿಸಿದ್ದಾರೆ.

ಪರೀಕ್ಷೆಗಳು ಮುಂದೂಡಿಕೆ: ಬಂದ್‌ ಹಿನ್ನೆಲೆಯಲ್ಲಿ ಡಿ.27ರಂದು ನಡೆಯಬೇಕಿದ್ದ ಕರ್ನಾಟಕ ರಾಜ್ಯ ಕಾನೂನು ವಿವಿ ಪರೀಕ್ಷೆಗಳನ್ನು ಡಿ.31ಕ್ಕೆ ಮುಂದೂಡಲಾಗಿದೆ ಎಂದು ಕರಾಕಾವಿದ ಮೌಲ್ಯಮಾಪನ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಇನ್ನು ಡಿ.27ರಂದು ನಡೆಯಬೇಕಿದ್ದ ಕವಿವಿ 3ನೇ ಸೆಮಿಸ್ಟರ್‌ನ ಪರೀಕ್ಷೆಗಳನ್ನು ಜ.7, 2018ಕ್ಕೆ ಮುಂದೂಡಲಾಗಿದೆ ಎಂದು ಕವಿವಿ ಮೌಲ್ಯಮಾಪನ ಕುಲಸಚಿವ ಡಾ.ಎನ್‌.ವೈ. ಮಟ್ಟಿಹಾಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಡಿ.27ರಿಂದ ನಡೆಯಬೇಕಿದ್ದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ ಪರೀಕ್ಷೆಗಳನ್ನು ಡಿ.29, ಜ.8ರಂದು ನಡೆಸಲಾಗುವುದು ಎಂದು
ವಿಶ್ವವಿದ್ಯಾಲಯದ ಕುಲಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ವಿಜಯಪುರ ಅಕ್ಕಮಹಾದೇವಿ ಮಹಿಳಾ ವಿವಿ ವ್ಯಾಪ್ತಿಯಲ್ಲಿ
ಡಿ.27ರಂದು ನಡೆಯಬೇಕಿದ್ದ ಸ್ನಾತಕ ಪದವಿ (ಯುಜಿ) ಮತ್ತು ಸ್ನಾತಕೋತ್ತರ ಪದವಿ (ಪಿಜಿ) ಪರೀಕ್ಷೆಗಳನ್ನು ಸ್ನಾತಕ ಪದವಿ (ಯುಜಿ) ಪರೀಕ್ಷೆಗಳನ್ನು ಡಿ.28ರಂದು ಹಾಗೂ ಸ್ನಾತಕೋತ್ತರ ಪದವಿ (ಪಿಜಿ) ಪರೀಕ್ಷೆಗಳನ್ನು ಡಿ.2ರಂದು ನಡೆಸಲಾಗುತ್ತದೆ. ಉಳಿದಂತೆ ಯಾವುದೇ ಪರೀಕ್ಷೆಗಳಲ್ಲಿ ಬದಲಾವಣೆ ಇಲ್ಲ ಎಂದು ವಿವಿ ಮೌಲ್ಯಮಾಪನ ಕುಲಸಚಿವ ಪ್ರೊ. ಎಸ್‌.ಬಿ. ಮಾಡಗಿ ತಿಳಿಸಿದ್ದಾರೆ.

Trending videos

Back to Top