ಮಲ್ಪೆ ಬಂದರಲ್ಲಿ ಉಪಯೋಗಕ್ಕಿಲ್ಲದ ಸ್ಲಿಪ್ವೇ

ಮಲ್ಪೆ: ಮಲ್ಪೆ ಮೀನುಗಾರರ ಬಹುದಿನಗಳ ಬೇಡಿಕೆಯಾಗಿದ್ದ ಸ್ಲಿಪ್ವೇ ಕಾಮಗಾರಿ ಪೂರ್ಣಗೊಂಡು ವರ್ಷಗಳೇ ಕಳೆದರೂ ಉಪಯೋಗಕ್ಕೆ ಮಾತ್ರ ಲಭ್ಯವಾಗಿಲ್ಲ ಇದರ ಪರಿಣಾಮ ಯಂತ್ರಗಳು ತುಕ್ಕು ಹಿಡಿಯುತ್ತಿವೆ.
ಮಲ್ಪೆ ಮೀನುಗಾರಿಕೆ ಬಂದರು ಬಾಪು ತೋಟದ ಬಳಿ ಬಂದರಿನ 3ನೇ ಹಂತದ ಕಾಮಗಾರಿಯೊಂದಿಗೆ ಅದೇ ಪ್ರದೇಶದಲ್ಲಿ ನಿರ್ಮಿಸಲಾದ ಸ್ಲಿಪ್ವೇ ಕಾಮಗಾರಿ ಪೂರ್ಣಗೊಂಡರೂ ಅದರ ನಿರ್ವಹಣೆ ವಿಚಾರದಲ್ಲಿ
ತಲೆದೋರಿದ್ದ ಸಮಸ್ಯೆ ಇದುವರೆಗೂ ಪರಿಹಾರ ಸಿಗದ್ದರಿಂದ ಪಾಳುಬಿದ್ದಿದೆ.
2.35 ಕೋ. ರೂ. ವೆಚ್ಚದ ಸ್ಲಿಪ್ ವೇ ಸುಮಾರು 50 ಸೆಂಟ್ಸ್ ಜಾಗದಲ್ಲಿ 2.35ಕೋಟಿ ವೆಚ್ಚದಲ್ಲಿ ಸ್ಲಿಪ್ವೇ
ನಿರ್ಮಾಣವಾಗಿದೆ. ಮಲ್ಪೆ ಟೆಬಾ ಶಿಪ್ಯಾರ್ಡ್ ಸಂಸ್ಥೆ ಮೆಕಾನಿಕಲ್ ಕಾಮಗಾರಿಗೆ 77 ಲ.ರೂ. ಮತ್ತು ಸಿವಿಲ್ ಕಾಮಗಾರಿಗೆ 75 ಲಕ್ಷ ರೂ.ಗಳನ್ನು ಸಿಎಎಸ್ಆರ್ ನಿಧಿಯಿಂದ ನೀಡಿದೆ. ಉಳಿದ ಮೊತ್ತವನ್ನು ಸರಕಾರದಿಂದ ಭರಿಸಲಾಗಿದೆ. ಇದೆಲ್ಲ ಮಲ್ಪೆ ಮೀನುಗಾರ ಸಂಘದ ನೇತೃತ್ವ ಮತ್ತು ಹೋರಾಟದಿಂದ ನಡೆದಿದೆ.
ಉಪಯೋಗಕ್ಕಿಲ್ಲದ ಉಪ್ಪಿನಕಾಯಿ!
ಬೋಟುಗಳನ್ನು ಮೇಲೆತ್ತಲು ಅತ್ಯಾಧುನಿಕ ತಾಂತ್ರಿಕ ಪರಿಕರಗಳನ್ನು ಅಳವಡಿಸಲಾಗಿದೆ.ಇಲ್ಲಿ ಬೃಹತ್ ಟ್ರಾಲರ್ ಟ್ರ್ಯಾಕ್ಗಳಿವೆ. ಒಮ್ಮೆಲೆ 13 ಬೋಟ್ಗಳನ್ನು ಪಾರ್ಕಿಂಗ್ ಮಾಡಲು ಮತ್ತು 60 ಟನ್ ಭಾರದ ವರೆಗಿನ ಬೋಟ್ಗಳನ್ನು ಮೇಲೆತ್ತಬಹುದಾಗಿದೆ. ಇದೀಗ ಅತ್ಯಾಧುನಿಕ ಕಬ್ಬಿಣದ ಬೃಹತ್ ಟ್ರಾಲರ್ ಸಿಸ್ಟಂ, ಟ್ರಾಲರ್ ಟ್ರಾಕ್ಗಳು, ಬೇರಿಂಗ್ ಗೇರ್ ವೀಲ್ಗಳು ಸಂಪೂರ್ಣ ತುಕ್ಕು ಹಿಡಿದು ಗಿಡಗಂಟಿಗಳಿಂದ ಮುಚ್ಚಿ ಹೋಗಿದೆ.
ಬೋಟು ಮೇಲಕ್ಕೆಳೆಯಲು 25ರಿಂದ 40 ಸಾವಿರ ರೂ. ಪ್ರಸ್ತುತ ಮಲ್ಪೆ ಬಂದರಿನಲ್ಲಿ ಇರುವ ವ್ಯವಸ್ಥೆಯಲ್ಲಿ ಒಂದು ಬೋಟು ಮೇಲಕ್ಕೆ ಎಳೆದು ಸಮುದ್ರಕ್ಕೆ ಇಳಿಸಲು 25 ರಿಂದ 40 ಸಾವಿರವರೆಗೆ ಶುಲ್ಕ ವಿಧಿಸಲಾಗುತ್ತದೆ. ಸ್ಲಿಪ್ವೇಯನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಿದರೆ ಇದಕ್ಕಿಂತ ಹೆಚ್ಚಿನ ಶುಲ್ಕ, ರಿಪೇರಿ ಖರ್ಚುಗಳು ದುಬಾರಿಯಾಗಿಸುವ ಸಾಧ್ಯತೆ ಹೆಚ್ಚಿದೆ. ಇದಕ್ಕಾಗಿ ಮೀನುಗಾರ ಸಂಘಕ್ಕೆ ನಿರ್ವಹಣೆಗೆ ನೀಡಬೇಕೆಂಬ ಬೇಡಿಕೆ ಇದೆ.
ಏನಿದು ಸ್ಲಿಪ್ ವೇ ?
ದುರಸ್ತಿಗಾಗಿ ಮೀನುಗಾರಿಕೆ ದೋಣಿಗಳನ್ನು ನೀರಿನಿಂದ ಮೇಲೆಳೆಯಲು ಮತ್ತು ನೀರಿಗೆ ಬಿಡಲು ಬಳಸುವ ಒಂದು ವ್ಯವಸ್ಥೆ. ಇದು ಇಳಿಜಾರಿನ ಟ್ರ್ಯಾಕ್ನಂತಿದೆ. ಇದನ್ನು ನದಿ ತೀರದ ವಿಶಾಲ ಇಳಿಜಾರು ಪ್ರದೇಶಲ್ಲಿ ನಿರ್ಮಿಸಲಾಗುತ್ತದೆ. ಮಲ್ಪೆಯಲ್ಲಿ 2015ರ ಅಕ್ಟೋಬರ್ನಲ್ಲಿ ಸ್ಲಿಪ್ ವೇ ಕಾಮಗಾರಿ ಆರಂಭಗೊಂಡಿದ್ದು, 2017ರ ಫೆಬ್ರವರಿಯಲ್ಲಿ ಪೂರ್ಣಗೊಂಡಿತ್ತು. ಕಾಮಗಾರಿ ಪೂರ್ಣಗೊಂಡರೂ ಇದು ಬಳಕೆಯಾಗುತ್ತಿಲ್ಲ.
ಮೀನುಗಾರರ ಸಂಘಕ್ಕೆ ನೀಡಿ
ಸ್ಲಿಪ್ವೇ ಶೀಘ್ರ ಉಪಯೋಗಕ್ಕೆ ಲಭ್ಯವಾಗಬೇಕು. ಮಲ್ಪೆ ಬಂದರಿನಲ್ಲಿ ಪ್ರಸ್ತುತ 2,000ಕ್ಕೂ ಅಧಿಕ ಬೋಟುಗಳಿದ್ದು ಮೀನುಗಾರರಿಗೆ ತಮ್ಮ ಬೋಟುಗಳ ದುರಸ್ತಿ ಕಾರ್ಯ ದೊಡ್ಡ ಸಮಸ್ಯೆಯಾಗಿದೆ. ಖಾಸಗಿಗೆ ಇದರ ನಿರ್ವಹಣೆ ನೀಡುವ ಬದಲು ಮೀನುಗಾರ ಸಂಘಕ್ಕೆ ನೀಡಿದರೆ ಕಡಿಮೆ ದರದಲ್ಲಿ ಸೇವೆಯನ್ನು ನೀಡಲು ಸಾಧ್ಯವಾಗುತ್ತದೆ.
- ಸತೀಶ್ ಕುಂದರ್, ಮಲ್ಪೆ ಮೀನುಗಾರರ
ಸಂಘದ ಅಧ್ಯಕ್ಷ
ಉಪಯೋಗಕ್ಕೆ ಲಭ್ಯವಾಗಲಿ
ಮಲ್ಪೆ ಬಂದರಿನಲ್ಲಿ ಸಾವಿರಾರು ಸಂಖ್ಯೆಯಲ್ಲಿ ಬೋಟುಗಳಿವೆ. ದುರಸ್ತಿಗಾಗಿ ಮೇಲೆ ಎಳೆಯುವ ಸಂದರ್ಭದಲ್ಲಿ ಖಾಸಗಿ ಸೇವೆ ದುಬಾರಿ. ಸರಕಾರ ಮೀನುಗಾರರ ಅನುಕೂಲಕ್ಕೆ ನಿರ್ಮಿಸಲಾದ ಸ್ಲಿಪ್ವೇ ಬೇಗನೆ ಉಪಯೋಗಕ್ಕೆ ಲಭ್ಯವಾಗಬೇಕು. ಹೀಗೆ ಪಾಳು ಬಿಟ್ಟರೆ ನೀರಿಗೆ ಹೋಮ ಇಟ್ಟಂತೆ. ಇದರ ಪ್ರಯೋಜನ ಮೀನುಗಾರರಿಗೆ ಲಭ್ಯವಾಗಬೇಕು.
- ಶಿವರಾಮ ಪುತ್ರನ್,
ಹಿರಿಯ ಮೀನುಗಾರರು
- ನಟರಾಜ ಮಲ್ಪೆ