CONNECT WITH US  

ತೂತುಕುಡಿ: ಕನಿಷ್ಠ ಒಬ್ಬನಾದರೂ ಸಾಯಬೇಕು ಎಂದಿದ್ದ ಪೊಲೀಸ್‌ ಅಧಿಕಾರಿ

ಚೆನ್ನೈ : ಪರಿಸರಕ್ಕೆ ಅತ್ಯಂತ ಮಾರಕಪ್ರಾಯವಾದುದೆಂದು ಹೇಳಲಾದ, ತಮಿಳು ನಾಡಿನ ತೂತುಕುಡಿಯಲ್ಲಿನ ವೇದಾಂತ ಕಂಪೆನಿಯ, ಸ್ಟೆರಲೈಟ್‌ ಕೈಗಾರಿಕಾ ಘಟಕವನ್ನು ಮುಚ್ಚಬೇಕೆಂದು ಆಗ್ರಹಿಸಿ ಹಿಂಸಾತ್ಮಕ ಪ್ರತಿಭಟನೆಗಿಳಿದ ಸುಮಾರು 5,000 ಜನರ ಗುಂಪನ್ನು ನಿಯಂತ್ರಿಸಲು ಫೈರಿಂಗ್‌ ನಡೆಸಿದ ಪೊಲೀಸರಲ್ಲಿ ಕೆಲವು ಅಧಿಕಾರಿಗಳು "ಕನಿಷ್ಠ ಒಬ್ಬನಾದರೂ ಸಾಯುವಂತಾಗಬೇಕು'' ಎಂದು ಹೇಳಿರುವ ವಿಡಿಯೋ ಚಿತ್ರಿಕೆಯನ್ನು ಎಎನ್‌ಐ ಸುದ್ದಿ ಸಂಸ್ಥೆ ಬಿಡುಗಡೆ ಮಾಡಿದೆ; ಅಂತೆಯೇ ಅದೀಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದೆ. 

ಪೊಲೀಸರು ಸೆಲ್ಫ್ ಲೋಡಿಂಗ್‌ ಅಸಾಲ್ಟ್ ರೈಫ‌ಲ್‌ ಬಳಸಿ ನಡೆಸಿದ ಗೋಲಿಬಾರಿಗೆ ಕನಿಷ್ಠ 11 ಜನರು ಬಲಿಯಾಗಿದ್ದು ಹಲವಾರು ಮಂದಿ ಗಾಯಗೊಂಡಿದ್ದಾರೆ. 

ಪೊಲೀಸ್‌ ಫೈರಿಂಗ್‌ನಲ್ಲಿ 11 ಜನರು ಮೃತಪಟ್ಟಿರುವುದನ್ನು ದೃಢೀಕರಿಸಿರುವ ಮುಖ್ಯಮಂತ್ರಿ ಕೆ ಪಳನಿಸ್ವಾಮಿ ಅವರು ಮೃತರ ಕುಟುಂಬಗಳಿಗೆ ತಲಾ 10 ಲಕ್ಷ ರೂ. ಪರಿಹಾರ ಮಂಜೂರು ಮಾಡಿದ್ದಾರೆ. ಅಂತೆಯೇ ಪೊಲೀಸ್‌ ಫೈರಿಂಗ್‌ ಬಗ್ಗೆ ನ್ಯಾಯಾಂಗ ತನಿಖೆಗೆ ಆದೇಶಿಸಿದ್ದಾರೆ. 

"ಪ್ರತಿಭಟನಕಾರರು ಹಿಂಸಾತ್ಮಕವಾಗಿ ವರ್ತಿಸಿದಾಗ ಸಾರ್ವಜನಿಕ ಸೊತ್ತುಗಳನ್ನು, ಅಮಾಯಕರ ಜೀವಗಳನ್ನು ಉಳಿಸಲು ಪೊಲೀಸರು ಅನಿವಾರ್ಯವಾಗಿ ಕಠಿನ ಕ್ರಮ ತೆಗೆದುಕೊಳ್ಳಬೇಕಾಯಿತು; ಪೊಲೀಸರು ಪ್ರತಿಭಟನಕಾರರ ಹಿಂಸೆಯನ್ನು ನಿಯಂತ್ರಿಸಲೇಬೇಕಿತ್ತು' ಎಂದು ಗೃಹ ಖಾತೆಯನ್ನೂ ಹೊಂದಿರುವ ಸಿಎಂ ಪಳನಿಸ್ವಾಮಿ ಹೇಳಿದ್ದಾರೆ. 

ಸುಮಾರು 5,000 ಸಂಖ್ಯೆಯಲ್ಲಿದ್ದ ಪ್ರತಿಭಟನಕಾರರು ಜಿಲ್ಲಾ ಕಲೆಕ್ಟೋರೇಟ್‌ಗೆ ಮೆರವಣಿಗೆ ನಡೆಸಲು ಬಯಸಿದಾಗ ಪೊಲೀಸರು ಅವರಿಗೆ ಅನುಮತಿ ನಿರಾಕರಿಸಿದ್ದರು. ಇದರಿಂದ ಆಕ್ರೋಶಿತರಾದ ಪ್ರತಿಭಟನಕಾರರು ಹಿಂಸೆಗೆ ಇಳಿದಿದ್ದರು. 

Trending videos

Back to Top