CONNECT WITH US  

ಮುಂಬಯಿಯಲ್ಲಿ ವಾರಾಂತ್ಯ ಪ್ರಬಲ ಗಾಳಿ, ಜಡಿಮಳೆ ; ಬಿಎಂಸಿ ಕಟ್ಟೆಚ್ಚರ

ಮುಂಬಯಿ : ಮುಂಬಯಿ ಮಹಾನಗರದಲ್ಲಿ ಇಂದು ಜೂನ್‌ 9ರಿಂದ ತೊಡಗಿ ಜೂನ್‌ 12ರ ವರೆಗೆ ಜಡಿಮಳೆ ಆಗುವ ಸಂಭವವಿದೆ ಎಂದ ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ. 

ಇಂದು ಶನಿವಾರ ಮತ್ತು ನಾಳೆ ಭಾನುವಾರ ಮುಂಬಯಿ ಮಹಾ ನಗರ ಪಾಲಿಕೆ ಅಧಿಕಾರಿಗಳು ಮತ್ತು ಸಿಬಂದಿಗಳಿಗೆ ಇರುವ ರಜೆಯನ್ನು ರದ್ದು ಮಾಡಲಾಗಿದ್ದು ಮಳೆ ಸಂಬಂಧಿ ಯಾವುದೇ ತುರ್ತು ಪರಿಹಾರ ಕಾರ್ಯಕ್ಕಾಗಿ ಅವರನ್ನು ಬಳಸಿಕೊಳ್ಳಲು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗಿದೆ.

ಮುಂಗಾರು ಮಾರುತಗಳು ಮುಂದಿನ 24 ತಾಸುಗಳಲ್ಲಿ ಮಧ್ಯ ಅರಬ್ಬೀ ಸಮುದ್ರ ಮತ್ತು ಮುಂಬಯಿ ಸೇರಿದಂತೆ ಇಡಿಯ ಮಹಾರಾಷ್ಟ್ರವನ್ನು ಒಳಗೊಳ್ಳಲಿದ್ದು ವೇಗದ ಗಾಳಿಯೊಂದಿಗೆ ಜಡಿ ಮಳೆ ಆಗುವುದೆಂಬ ಎಚ್ಚರಿಕೆಯನ್ನು ನೀಡಲಾಗಿದೆ. ಮಹಾನಗರದ ಜನರಿಗೆ ಈ ಎರಡು ದಿನಗಳ ಕಾಲ ತಮ್ಮ ಮನೆಗಳಲ್ಲೇ ಉಳಿಯುವಂತೆ ಸಲಹೆ ನೀಡಲಾಗಿದೆ.

ಕರಾವಳಿ ಕರ್ನಾಟಕ, ಗೋವಾ ಮತ್ತು ದಕ್ಷಿಣ ಮಹಾರಾಷ್ಟ್ರ ದಲ್ಲಿ ಮುಂಗಾರು ಚುರುಕಾಗಿದ್ದು ವ್ಯಾಪಕವಾಗಿ ಭಾರೀ ಮಳೆಯಾಗುತ್ತಿದೆ; ಜತೆಗೆ ಗಂಟೆಗೆ 40ರಿಂದ 60 ಕಿ.ಮೀ. ವೇಗದಲ್ಲಿ  ಜೋರಾದ ಗಾಳಿ ಬೀಸುತ್ತಿದೆ. ಈ ಸ್ಥಿತಿ ಜೂನ್‌ 10ರ ಬಳಿಕವೂ ಇರುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಹೇಳಿದೆ. 

ಕೊಂಕಣ್‌ ಮತ್ತು ಗೋವಾ ದೂರ ಸಮುದ್ರಕ್ಕೆ ಹೋಗದಂತೆ ಮೀನುಗಾರರು ಎಚ್ಚರಿಕೆ ನೀಡಲಾಗಿದೆ. ಈ ಎಲ್ಲ ಎಚ್ಚರಿಕೆಗಳನ್ನು ದೃಷ್ಟಿಯಲ್ಲಿರಿಸಿಕೊಂಡು ಬೃಹನ್ಮುಂಬಯಿ ಮುನಿಸಿಪಲ್‌ ಕಾರ್ಪೊರೇಶನ್‌ ಮಳೆ ಸಂಬಂಧಿ ದುರಂತಗಳನ್ನು ನಿರ್ವಹಿಸಲು ಸಜ್ಜಾಗಿ ನಿಂತಿರುವುದಾಗಿ ಮಾಧ್ಯಮ ವರದಿಗಳು ತಿಳಿಸಿವೆ. 

Trending videos

Back to Top