CONNECT WITH US  

​ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ; ದತ್ತಿ ಉಪನ್ಯಾಸ

ಮುಂಬಯಿ: ಹುಚ್ಚು ಮನಸ್ಸಿನ ಹತ್ತು ಮುಖಗಳಲ್ಲಿ ಕಾರಂತರ ಹಲವು ರೂಪಗಳನ್ನು ಕಾಣಬಹುದು. ಅಲ್ಲಿ ಕೆಲವು  ಸಾಮಾಜಿಕ ಸತ್ಯಕ್ಕೆ, ಸಮೂಹ ಪರ ನಿಲುವಿಗೆ ವಿರುದ್ಧ ಮುಖಗಳೂ ಕಾಣ ಸಿಕ್ಕರೆ ಅಚ್ಚರಿಪಡಬೇಕಿಲ್ಲ. ಗುಣಾತ್ಮಕವಾದ ಅನೇಕ ಕಟ್ಟುಪಾಡುಗಳನ್ನು ಪಾಲಿಸಿದವರು,  ದಲಿತರ ನೋವನ್ನು ಕಂಡವರು. ಸಮಾಜದ ಬಗ್ಗೆ ಕಾಳಜಿ ಇಟ್ಟು  ಯಶಸ್ವಿಯಾಗಿ ವಾಸ್ತವಿಕ ಕಾದಂಬರಿಗಳನ್ನು ರಚಿಸಿದವರು.  ಸಮಾಜದಲ್ಲಿರುವ  ಪರಿಸ್ಥಿತಿ, ದಲಿತನ ಒಡಲೊಳಗಿನ  ನೆಲದ ಆಸೆಯನ್ನು   ಚೋಮನ ದುಡಿಯ ಮೂಲಕ ತೋರಿಸಿಕೊಟ್ಟರು. ಕಾದಂಬರಿ ಜಗತ್ತಿನಲ್ಲಿ ಮೊತ್ತಮೊದಲ ಬಾರಿಗೆ ಶತ ಶತಮಾನದ ಕತ್ತಲೆಯ ಜಗತ್ತಿನಿಂದ ತನ್ನ ಶ್ರಮವನ್ನು ತನ್ನದೆನ್ನುವ ನೆಲದಲ್ಲಿ ವಿನಿಯೋಗಿಸಬೇಕು ಎನ್ನುವ ಆಸೆಯೊಂದರ ಕಿಡಿಯನ್ನು ಗುರುತಿಸಿದ ಕಾದಂಬರಿಯಿದು. ಈ ಕಾರಣ ದಕ್ಷಿಣ ಕನ್ನಡ ಕರಾವಳಿಯಲ್ಲಿ ಒಕ್ಕಲು ಮಸೂದೆ ಹೆಚ್ಚು ಪರಿಣಾಮಕಾರಿಯಾಗಿದೆ.  ಕಾರಂತರು ಅನುಭಾವವಾದಿ. ಗತಕಾಲವನ್ನು ವರ್ತಮಾನ ಕಾಲದಲ್ಲಿ ಮಾತನಾಡುವವರು. ಈ  ಗುಣವನ್ನು  ಮೈಮನಗಳ ಸುಳಿಯಲಿ, ಸರಸಮ್ಮನ ಸಮಾಧಿ, ಬಾಳ್ವೆಯ ಬೆಳಕು ಇತ್ಯಾದಿ ಕೃತಿಗಳಲ್ಲಿ  ನಾವು ಕಾಣುತ್ತೇವೆ. ಜೀವನ ಬದುಕಿ ತಿಳಿಯಬೇಕಲ್ಲದೆ, ಮಾಹಿತಿಯಾಗಿ ತಿಳಿಯಬಲ್ಲದ್ದಲ್ಲ ಎನ್ನುವ ಕಾರಂತರು ಕಾಯವಾದಿ, ಇಂದ್ರಿಯವಾದಿಯಾಗಿ ನಮ್ಮ ನಡೇಕಾರರ ಆಧ್ಯಾತ್ಮಿಕ ಪರಿಭಾಷೆಗೆ ತೀರಾ ಸಮೀಪವಿರುವವರು. ಲೋಕವೆಂಬುದು ಪ್ರವಾಹ, ಸತ್ಯವೆಂಬುದು ಕಟ್ಟಬೇಕಾದುದು, ಸತ್ಯ ಸಾಪೇಕ್ಷವಲ್ಲದೆ, ಶಾಶ್ವತ, ಸಾರ್ವಕಾಲಿಕವಲ್ಲ ಎಂದು ಸಾಹಿತಿ ಹಾಗೂ ಸರಕಾರಿ  ಪ್ರಥಮ  ದರ್ಜೆ  ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕ ನಿಡಿಯೂರು ಉಡುಪಿ ಇದರ ಸಹ ಪ್ರಾಧ್ಯಾಪಕ ಡಾ|  ಜಯಪ್ರಕಾಶ ಶೆಟ್ಟಿ ಎಚ್‌. ನುಡಿದರು.

ಅ. 31ರಂದು ಸುವರ್ಣ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಇದರ ಆಶ್ರಯದಲ್ಲಿ ಮಾಟುಂಗಾ ಪಶ್ಚಿಮದ ಕರ್ನಾಟಟಕ ಸಂಘದ ಸಮರಸ ಭವನದಲ್ಲಿ ಆಯೋಜಿಸಿದ ಸದಾನಂದ ಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ದತ್ತಿ ಉಪನ್ಯಾಸ ಕಾರ್ಯಕ್ರಮದಲ್ಲಿ "ಶಿವರಾಮ ಕಾರಂತರ ಸಾಮಾಜಿಕ ಕಾಳಜಿಗಳು' ಎಂಬ ವಿಷಯದ ಬಗ್ಗೆ ಮಾತನಾಡಿದ ಅವರು, ಮನುಷ್ಯ ತನ್ನ ಕಟ್ಟಳೆಯ ಕಟ್ಟಿನಿಂದ ಬಿಡುಗಡೆ ಹೊಂದದೆಯೇ,  ಜೀವನದ ವಿಷಯದಲ್ಲಿ ಸಮನಾದ ನೋಟಕ್ಕೆ ಬರಲಾರ. ಈ ಕಾಲಘಟ್ಟದಲ್ಲಿ ಕಾರಂತರ ಮೂಕಜ್ಜಿಯ ಕನಸು ಕಾದಂಬರಿಯ ನೆನಪು ಬರುತ್ತದೆ. ಈ ಕತೆಯು ಅದ್ಭುತವಾದದ್ದು. ಸಮಾಜದಲ್ಲಿದ್ದ ಮೂಢ ನಂಬಿಕೆಗಳಿಂದ ನೊಂದ ಜೀವಗಳ ಕತೆಗಳನ್ನು  ಕನಸುಗಾರನ ಮೂಲಕ ತಿಳಿಸಿದ್ದಾರೆ. ಸಮಾಜ ಕಲ್ಪನೆ ಕೇವಲ ವರ್ತಮಾನದ ಸಮಾಜಕ್ಕೆ ಸೀಮಿತವಲ್ಲ. ವರ್ತಮಾನದಲ್ಲಿ ನಾವು ಪಾಲುಗಾರರು. ಕಾರಂತರು ದಿಟವಾದಿ ತನಗೆ ಸರಿ ಕಾಣದ್ದನ್ನು ಹೇಳಲು ಹಿಂಜರಿಯದವರು. ಇದಕ್ಕೆ ಒಳ್ಳೆಯ ಉದಾಹರಣೆ 1973ನೆಯ ತುರ್ತು ಪರಿಸ್ಥಿತಿಯಲ್ಲಿ ಅವರ ಬಿರುದು ಬಾವಲಿಗಳನ್ನು ಹಿಂದಿರುಗಿಸಿ  ರಾಷ್ಟ್ರಪತಿಗೆ ಬರೆದ ಪತ್ರ. ಸಮಾಜದಲ್ಲಿರುವ ಜಾತಿ ವ್ಯವಸ್ಥೆಯನ್ನು  ಅನುಮೋದಿಸದೆ ಜೀವಕೋಟಿ ಒಂದೇ ಜಾತಿ ಎಂದು ಸಾರಿದ ಗಾಂಧೀಜಿ, ಅಂಬೇಡ್ಕರ್‌, ಜ್ಯೋತಿಭಾ ಪುಲೆ, ರವೀಂದ್ರನಾಥ ಠಾಗೂರ್‌ ಅವರ ಸಾಲಿನಲ್ಲಿ ಕಾರಂತರು ಸೇರುತ್ತಾರೆ.  ಮನುಷ್ಯರು ಮನುಷ್ಯರ ದೃಷ್ಟಿಯಲ್ಲಿಯೇ ಒಂದಾಗಿರಬೇಕು. ದೇವರ ದೃಷ್ಟಿಯಲ್ಲಿ ಅಲ್ಲ. ವಾಸ್ತವ ಜಗತ್ತಿನಲ್ಲಿ ಪರಿಹಾರ ಸಿಗಬೇಕು. ಮತಾಂತರವನ್ನು ಕಾರಂತರು ವಿರೋಧಿಸಿದ್ದಾರೆ.   ಮಕ್ಕಳ ಶಿಕ್ಷಣದ ಬಗ್ಗೆ ಅವರಿಗೆ ಕಾಳಜಿ ಇದ್ದ ಅವರು ಚರಿತ್ರೆಯು  ಸತ್ಯವನ್ನು ಮರೆ ಮಾಡುವ ದಾಖಲೆಯಾಗಬಾರದು ಎಂದು ಪ್ರತಿಭಟಿಸಿದ್ದಾರೆ.  ಮಕ್ಕಳಿಗಾಗಿ  ಪಠ್ಯ ಪುಸ್ತಕವನ್ನೂ ಬರೆದರು.   ಆರೋಗ್ಯಕರವಾದ ಸಮಾಜದ ನಿರ್ಮಣವಾಗಬೇಕು  "ಮಾನವ' ಸಮುದಾಯದ ಆಸ್ತಿ, ಲೋಕ ಹಿತಕಾರ್ಯವೇ ಧರ್ಮ ಎಂದು ಸಾರಿದರು ಎಂದು ನುಡಿದು, ಕಾರಂತರ ಸಾಮಾಜಿಕ ಕಾಳಜಿಯ ಬಗ್ಗೆ ವಿವರಿಸಿದರು.

ಕರ್ನಾಟಕ ಸಂಘದ ಮಾಜಿ ಉಪಾಧ್ಯಕ್ಷ, ರಂಗತಜ್ಞ  ಡಾ| ಭರತ್‌ ಕುಮಾರ್‌ ಪೊಲಿಪು ಪ್ರಾಸ್ತಾವಿಕವಾಗಿ ಮಾತನಾಡಿ, ಪ್ರಸಿದ್ಧ ಚಲನಚಿತ್ರ , ಕಿರು ತೆರೆ, ನಾಟಕ ನಿರ್ದೇಶಕ, ರಂಗ ನಟ   ಸದಾನಂದ ಸುವರ್ಣರ ಬಗ್ಗೆ ಹಾಗೂ ಅವರ ಸಾಂಸ್ಕೃತಿಕ ಪ್ರತಿಷ್ಠಾನವು ಪ್ರತಿ ವರ್ಷ ಹಮಿಕೊಳ್ಳುತ್ತಿರುವ ಕಾರ್ಯಕ್ರಮಗಳ ಬಗ್ಗೆ ತಿಳಿಸಿ, ಕಾರ್ಯಕ್ರಮ ನಿರೂಪಿಸಿ, ವಂದಿಸಿದರು. ಸಂಘದ ಗೌ| ಪ್ರ. ಕಾರ್ಯದರ್ಶಿ ಓಂದಾಸ್‌ ಕಣ್ಣಂಗಾರ್‌ ಉಪನ್ಯಾಸಕಾರರನ್ನು ಪರಿಚಯಿಸಿದರು. ಡಾ| ಜಯಪ್ರಕಾಶ್‌ ಶೆಟ್ಟಿ ಎಚ್‌. ಅವರನ್ನು  ಸಂಘದ ಪದಾಧಿಕಾರಿಗಳು ಗೌರವಿಸಿದರು. 

ಸಂಘದ ಕೋಶಾಧಿಕಾರಿ ಎಂ. ಡಿ. ರಾವ್‌ ಉಪಸ್ಥಿತರಿದ್ದರು.  


Trending videos

Back to Top