CONNECT WITH US  

​ಬಿಲ್ಲವರ ಅಸೋಸಿಯೇಶನ್‌ ವಸಾಯಿ :ಶೈಕ್ಷಣಿಕ ನೆರವು ವಿತರಣೆ, ಯಕ್ಷಗಾನ

ಮುಂಬಯಿ: ಬಿಲ್ಲವರ ಅಸೋಸಿಯೇಶನ್‌ ಮುಂಬಯಿ ಇದರ ವಸಾಯಿ ಸ್ಥಳೀಯ ಸಮಿತಿಯ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸಮಾಜದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ವಿತರಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮವು ಜೂ. 11 ರಂದು ವಸಾಯಿ ಪಶ್ಚಿಮದ ವೀರ ಸಾವರRರ್‌ ನಗರದ ವಿಶ್ವಕರ್ಮ ಸಭಾಗೃಹದಲ್ಲಿ ಜರಗಿತು.

ಸಭಾ ಕಾರ್ಯಕ್ರಮದಲ್ಲಿ ಸಮಿತಿಯ ಹಿರಿಯ ಸ್ಥಾಪಕ ಸದಸ್ಯ ಕೆ. ಡಿ. ಪೂಜಾರಿ, ಕೋಟಿ-ಚೆನ್ನಯ ಕ್ರೀಡೋತ್ಸವದಲ್ಲಿ ವೈಯಕ್ತಿಕ ಚಾಂಪಿಯನ್‌ಶಿಪ್‌ ಪ್ರಶಸ್ತಿ ಪಡೆದ ಗಂಗಾಧರ ಸುವರ್ಣ, ಮಹಿಳಾ ಬಾಕ್ಸಿಂಗ್‌ನಲ್ಲಿ ಚಿನ್ನದ ಪದಕ ಗಳಿಸಿದ ನಿಕಿತಾ ಆರ್‌. ಸುವರ್ಣ ಅವರನ್ನು ಗಣ್ಯರ ಸಮ್ಮುಖದಲ್ಲಿ ಸಮ್ಮಾನಿಸಲಾಯಿತು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ, ವಿದ್ಯಾ ಉಪಸಮಿತಿಯ ಕಾರ್ಯಾಧ್ಯಕ್ಷ ಭಾಸ್ಕರ ಬಂಗೇರ ಮಾತನಾಡಿ, ಸ್ವಜಾತಿ ಬಾಂಧವರ ಪ್ರತಿ ಮಕ್ಕಳು ಶಿಕ್ಷಣವನ್ನು ಪಡೆದು ಸ್ವಾವಲಂಬಿಯಾಗಿ ಬದುಕಬೇಕು. ಸಂಪೂರ್ಣ ಸಾಕ್ಷರತೆಯಿಂದ ಸಮಾಜದ ಅಭಿವೃದ್ಧಿ ಸಾಧ್ಯ ಎಂದರು.

ಭಾರತ್‌ ಬ್ಯಾಂಕಿನ ನಿರ್ದೇಶಕ ಸಿ. ಟಿ. ಸಾಲ್ಯಾನ್‌ ಅವರು ಮಾತನಾಡಿ, ಬಿಲ್ಲವರ ಅಸೋಸಿಯೇಶನ್‌ ಪ್ರತಿಯೊಂದು ಕಾರ್ಯಕ್ರಮದಲ್ಲಿ ಮಕ್ಕಳ ಉಪಸ್ಥಿತಿ ಅಧಿಕವಾಗಿರುವಂತೆ ನೋಡಿಕೊಳ್ಳಬೇಕು. ಇದರಿಂದ ನಮ್ಮ ತುಳುನಾಡ ಸಂಪ್ರದಾಯ, ಬಿಲ್ಲವರ ಕಟ್ಟು ಕಟ್ಟಳೆಗಳು, ಕೂಡು ಕುಟುಂಬದ ಪುನಶ್ಚೇತನಕ್ಕೆ ನಾಂದಿಯಾಗುತ್ತದೆ. ವಸಾಯಿ ಸ್ಥಳೀಯ ಸಮಿತಿಯು ಅರ್ಥಪೂರ್ಣವಾಗಿ ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸುತ್ತಿದೆ ಎಂದು ನುಡಿದರು.

ಸ್ಥಳೀಯ ಸಮಿತಿಯ ಕಾರ್ಯಾಧ್ಯಕ್ಷ ಕರುಣಾಕರ ಜಿ. ಅಮೀನ್‌ ಸ್ವಾಗತಿಸಿದರು. ಕಾರ್ಯದರ್ಶಿ ಲೋಹಿತಾಕ್ಷ ಎಸ್‌. ಅಂಚನ್‌ ಪ್ರಾಸ್ತಾವಿಕವಾಗಿ ಮಾತನಾಡಿ, ಸಮಿತಿಯ ಕಾರ್ಯವೈಖರಿಯನ್ನು ವಿವರಿಸಿದರು. ಉಪ ಕಾರ್ಯದರ್ಶಿ ಚಂದ್ರಶೇಖರ್‌ ಸಾಲ್ಯಾನ್‌ ಕಾರ್ಯಕ್ರಮ ನಿರೂಪಿಸಿದರು.

ವೇದಿಕೆಯಲ್ಲಿ ಭಾರತ್‌ ಬ್ಯಾಂಕಿನ ನಿರ್ದೇಶಕ ಕೆ. ಬಿ. ಪೂಜಾರಿ, ಉಪಾಧ್ಯಕ್ಷ ಕೆ. ಟಿ. ಬಂಗೇರ, ಸಾಂಸ್ಕೃತಿಕ ಉಪಸಮಿತಿಯ ಗೌರವ ಕಾರ್ಯದರ್ಶಿ ಅಶೋಕ್‌ ಕುಕ್ಯಾನ್‌ ಸಸಿಹಿತ್ಲು, ಗೌರವ ಕೋಶಾಧಿಕಾರಿ ರವೀಂದ್ರ ಪಿ., ಗೌರವ ಕಾರ್ಯಾಧ್ಯಕ್ಷ ಆರ್‌. ಜಿ. ಕೂಳೂರು ಉಪಸ್ಥಿತರಿದ್ದರು.
ಸುಮಾರು 25 ಕ್ಕೂ ಅಧಿಕ ಮಕ್ಕಳು ಹಾಗೂ ಎಸ್‌ಎಸ್‌ಸಿ, ಎಚ್‌ಎಸ್‌ಸಿ ಪರೀಕ್ಷೆಗಳಲ್ಲಿ ಅತ್ಯಧಿಕ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪ್ರತಿಭಾ ಪುರಸ್ಕಾರವನ್ನಿತ್ತು ಅಭಿನಂದಿಸಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮದ ಅಂಗವಾಗಿ ಶ್ರೀ ಗುರುನಾರಾಯಣ ಯಕ್ಷಗಾನ ಮಂಡಳಿಯ ಕಲಾವಿದರುಗಳಿಂದ ಗುಂಡದ ಗುಳಿಗೆ ಯಕ್ಷಗಾನ ಪ್ರದರ್ಶನಗೊಂಡಿತು. 

ಚಿತ್ರ-ವರದಿ : ರಮೇಶ್‌ ಅಮೀನ್‌

Trending videos

Back to Top