CONNECT WITH US  

ಸರೋಜಾ ಶ್ರೀನಾಥ್‌ರ "ಮೈಸೂರಿನಿಂದ ಮೌಂಟ್‌ ಟಾಂಬೋರವರೆಗೆ' ಕೃತಿ ಬಿಡುಗಡ

ಮುಂಬಯಿ: ಇಂದು ಕನ್ನಡ ಕೃತಿಗಳನ್ನು ಓದುವವರ ಸಂಖ್ಯೆ ಕಡಿಮೆಯಾಗುತ್ತಿದೆ ಅಥವಾ ಓದುವವರಿಲ್ಲ ಎಂದೋ ಲೇಖಕರು ಗಾಬರಿಯಾಗುವುದು ಬೇಡ. ಬರವಣಿಗೆಯ ಕಾಯಕವನ್ನು ನಿಲ್ಲಿಸಬಾರದು. ಓದುಗರು ಯಾವ ಕಾಲಕ್ಕೂ ಸಿಗಬಹುದು. ಪಂಪ ಬರೆಯುವಾಗ ಹೀಗೆಲ್ಲ ಯೋಚಿಸಿದ್ದನೇ. ಹಾಗಾಗಿ ಬರವಣಿಗೆ ನಾವು ನಿರಂತರವಾಗಿ ಮುಂದುವರಿಸಬೇಕು. ಸಾಹಿತ್ಯ ಎನ್ನುವುದು ಸಮುದಾಯವನ್ನು ಬೆಸೆಯುವ ಕೆಲಸವನ್ನು ಮಾಡುತ್ತದೆ ಎಂದು ಮುಂಬಯಿ ವಿವಿಯ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್‌. ಉಪಾಧ್ಯ ಅವರು ಅಭಿಪ್ರಾಯಿಸಿದರು.

ಸುವರ್ಣ ಕರ್ನಾಟಕ ರಾಜ್ಯೋತ್ಸವ  ಪ್ರಶಸ್ತಿ ಪುರಸ್ಕೃತ ಕರ್ನಾಟಕ ಸಂಘ ಮುಂಬಯಿ ಅಶ್ರಯದಲ್ಲಿ ಜು. 30ರಂದು ಸಂಜೆ ಸಮರಸ ಭವನದಲ್ಲಿ ಜರಗಿದ ವಿದುಷಿ ಸರೋಜಾ ಶ್ರೀನಾಥ್‌ ಅವರ ದ್ವಿತೀಯ ಕೃತಿ "ಮೈಸೂರಿನಿಂದ  ಮೌಂಟ್‌ ಟಾಂಬೋರವರೆಗೆ' ಪ್ರವಾಸ ಲೇಖನಗಳ ಕೃತಿಯ ಬಿಡುಗಡೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ನಮಗೆ ಸಾಮಾನ್ಯರ ಅಸಾಮಾನ್ಯ ಸಾಧನೆಗಳ ಪರಿಚಯವಾಗಬೇಕು ಎನ್ನುವುದನ್ನು ಮರೆಯಬಾರದು. ಅಭಿಜಿತ್‌ ಪ್ರಕಾಶನದಿಂದ ಈ ಕೃತಿ  ಹೊರಬಂದಿದೆ. ಈ ಪ್ರಕಾಶನ  ವಿದ್ಯಾರ್ಥಿ ಮಿತ್ರರಿಗಾಗಿ ಆರಂಭಿಸಿದ್ದರೂ ಇಂದು ಮುಂಬಯಿಯ ಹಿರಿಯ ಸಾಹಿತಿಗಳ ಕೃತಿಗಳೂ ಅಭಿಜಿತ್‌ ಪ್ರಕಾಶನದಿಂದ ಬರುತ್ತಿರುವುದು ಅಭಿಮಾನದ ಸಂಗತಿ. ಸಾಹಿತ್ಯ ಬದುಕನ್ನು ಪ್ರೀತಿಸುವಲ್ಲಿ ನೆರವಾಗಬೇಕು. ಅಭಿಜಿತ್‌ ಪ್ರಕಾಶನದ 72ನೆ ಕೃತಿ ಇದಾಗಿದೆ ಎಂದರು.

ಕೃತಿಯನ್ನು ಬಿಡುಗಡೆಗೊಳಿಸಿದ ಸಾಹಿತಿ, ಪತ್ರಕರ್ತ, ಶ್ರೀನಿವಾಸ ಜೋಕಟ್ಟೆ ಅವರು ಮಾತನಾಡಿ, 80ರ ಇಳಿ ವಯಸ್ಸಿನಲ್ಲೂ ಪ್ರವಾಸ ಪ್ರಿಯರಾದ ವಿದುಷಿ ಸರೋಜಾ ಶ್ರೀನಾಥರು ಪ್ರವಾಸ ಎನ್ನುವುದು ನವನವೀನ ದೃಶ್ಯಗಳಿಂದ ನಮ್ಮಲ್ಲಿ ನವ ಚೈತನ್ಯ ಹುಟ್ಟಿಸುವುದು ಎಂದಿದ್ದಾರೆ. ಪ್ರವಾಸ ಆನಂದಕರ ಅನುಭವ ನೀಡುತ್ತದೆ. ಹೀಗಾಗಿ ಕನಿಷ್ಠ ವರ್ಷಕ್ಕೆ ಮೂರು ಹೊಸ ಸ್ಥಳಕ್ಕೆ ಭೇಟಿ  ನೀಡುವ ಮನಸ್ಸು ಮಾಡಬೇಕು. ಸರೋಜಾ ಶ್ರೀನಾಥರು ಪ್ರವಾಸವನ್ನು ಬರೇ ವೀಕ್ಷಣೆಗಷ್ಟೇ ಸೀಮಿತಗೊಳಿಸದೆ ಅಲ್ಲಿನ ಸುಖ - ಸಂಪತ್ತು ಶಾಂತಿಯ ವಾತಾವರಣದ ಕಾರಣಗಳನ್ನೂ ಅರಿಯಲು ಪ್ರಯತ್ನಿಸುತ್ತಾರೆ. ಹಾಗಾಗಿ ಅವರು ಬುದ್ಧ ದೇವಾಲಯಗಳಿಗೆ ಹೆಚ್ಚೆಚ್ಚು ಪ್ರವಾಸ ಮಾಡುವವರು.  ಅದು ಈ ಕೃತಿಯಲ್ಲಿ ಕಂಡು ಬರುವುದು ಎಂದರು.

ಕೃತಿಯನ್ನು ಲೇಖಕಿ ಡಾ| ಪೂರ್ಣಿಮಾ ಶೆಟ್ಟಿ ಪರಿಚಯಿಸಿ ಮಾತನಾಡಿ, ಒಂದು ದೇಶದ ಸಂಸ್ಕೃತಿ ಇನ್ನೊಂದು ದೇಶಕ್ಕಿಂತ ಭಿನ್ನವಿದೆ. ಅದನ್ನು ಕಣ್ಣಾರೆ ಕಂಡಾಗ ಮಾತ್ರ ನಿಜದ ಅರಿವು, ಸಂಸ್ಕೃತಿಯ ಪರಿಚಯ ಎರಡೂ  ಆಗುತ್ತದೆ. ಈ ಕೃತಿಯಲ್ಲಿ ಅಧ್ಯಯನಪೂರ್ಣ ಪ್ರವಾಸ ಕಥನಗಳಿವೆ. ಇವರಿಗೆ ಕನ್ನಡ ಭಾಷೆಯ ಬಗ್ಗೆ ವಿಪರೀತ ಆಸಕ್ತಿ ಇರುವುದನ್ನು ಇಲ್ಲಿ ಗಮನಿಸಬಹುದಾಗಿದೆ. ಓದುಗರಿಗೆ ಆಸಕ್ತಿ ಹುಟ್ಟಿಸುವ ರೀತಿಯಲ್ಲಿ ಸರೋಜಾ ಶ್ರೀನಾಥರು ಪ್ರವಾಸ ಸ್ಥಳಗಳನ್ನು ಪರಿಚಯಿಸುತ್ತಾರೆ ಎಂದು ನುಡಿದರು.

ವಿಶೇಷ ಅತಿಥಿಯಾಗಿ ಉಪಸ್ಥಿತರಿದ್ದ ಅಬುದಾಬಿಯ ಬ್ಯಾಂಕ್‌ ಪ್ರಬಂಧಕ, ಪತ್ರಕರ್ತ ಮನೋಹರ ತೋನ್ಸೆ ಮಾತನಾಡಿ, ಸಂಗೀತ ಮತ್ತು ನಾಟ್ಯ ಎರಡೂ ಕ್ಷೇತ್ರಗಳ ಅಪೂರ್ವ ಸಂಗಮ ವಿದುಷಿ ಸರೋಜಾ ಶ್ರೀನಾಥ್‌ ಅವರು ದೇಶ ವಿದೇಶಗಳಲ್ಲಿ ತನ್ನದೇ ಆದ ಸಂಗೀತ - ನೃತ್ಯಗಳ ಸಂಶೋಧನೆ ಪ್ರಸ್ತುತಪಡಿಸಿದವರು. ಇಲ್ಲಿನ ಪ್ರವಾಸ ಕೃತಿಯಲ್ಲಿ  ಸ್ಥಳದ ಹಿನ್ನೆಲೆ - ಅಲ್ಲಿನ ಕತೆ ಎಲ್ಲ ಸಂಶೋಧನಾ ದೃಷ್ಟಿಯಲ್ಲಿ ಅವರು ಗಮನಿಸುತ್ತಾರೆ. ಅದರಲ್ಲೂ ಮೌಂಟ್‌ ಟಾಂಬೋರಾದ  ದುರಂತವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ ಎಂದರು.

ಲೇಖಕಿಯ ಪುತ್ರಿ ಡಾ| ಸಿರಿರಾಮ ಅವರು ತನ್ನ ತಾಯಿಯ ಕುರಿತಂತೆ ಪ್ರತಿಕ್ರಿಯಿಸಿ, ಹುಟ್ಟಿ ಬೆಳೆದದ್ದು ಮುಂಬಯಿಯಲ್ಲಾದರೂ ತಾಯಿಯಿಂದಾಗಿ ಕನ್ನಡವನ್ನು ಮಾತನಾಡಲು ಕಲಿತೆ, ಸ್ವಲ್ಪ ಓದಲೂ ಕಲಿತೆ. ಕುವೆಂಪು ಅಂತಹ ದೊಡ್ಡ ದೊಡ್ಡ ಸಾಹಿತಿಗಳು ಅಮ್ಮನಿಂದಲೇ ನನಗೆ ತಿಳಿದದ್ದು. ಕರ್ನಾಟಕ ಸಂಘ ಮುಂಬಯಿ ಕನ್ನಡ ಕೆಲಸ ಕಾರ್ಯಗಳ ಬಗ್ಗೆ ನಾವೆಲ್ಲ ತುಂಬ ಅಭಿಮಾನ ಪಡುತ್ತೇವೆ ಎಂದರು.

ಕೃತಿಯ ಲೇಖಕಿ ವಿದುಷಿ ಸರೋಜಾ ಶ್ರೀನಾಥರು ತನ್ನ ಪ್ರವಾಸಗಳ ಕುರಿತು ತಿಳಿಸಿ, ತನಗೆ ಬಾಲ್ಯದಿಂದಲೂ ಪ್ರವಾಸ ಇಷ್ಟ. ಜಾತಿ ಭೇದ ಮಾಡದಂತೆ ಬಾಲ್ಯದಲ್ಲಿ ಅಪ್ಪ ಅಮ್ಮ ಬೆಳೆಸಿದ್ದಾರೆ. ಕಾನ್ವೆಂಟ್‌ ಗೆ ಹೋಗುತ್ತಿದ್ದಾಗ ಬಾಲ್ಯದಲ್ಲಿ ಚರ್ಚ್‌ ಗಳಿಗೂ ಹೋಗಿ ಬರುತ್ತಿದ್ದೆವು. ಮನೆಯಲ್ಲೇ ನನಗೆ ಬಾಲ್ಯದಿಂದಲೂ ಎಲ್ಲರಿಗೂ ಗೌರವ ಕೊಡುವಂತೆ ಕಲಿಸಿದ್ದರಿಂದ ಬೆಳೆದ ಅನಂತರವೂ ಅದನ್ನು ಪಾಲಿಸುತ್ತಾ ಬಂದೆ. ಉಪಾಧ್ಯರ ಪ್ರಕಾಶನ, ಕರ್ನಾಟಕ ಸಂಘದ ಗೆಳೆಯರು ಈ ಕೃತಿ ಹೊರ ಬರುವಲ್ಲಿ ಶ್ರಮಿಸಿದವರು ಎಂದು ಕೃತಜ್ಞತೆ ವ್ಯಕ್ತ ಪಡಿಸಿದರು.

ಈ ಸಂದರ್ಭದಲ್ಲಿ ಕರ್ನಾಟಕ ಸಂಘ ಮುಂಬಯಿ ವತಿಯಿಂದ ಶಾಲು, ಸ್ಮರಣಿಕೆ, ಪುಸ್ತಕ ಗೌರವವನ್ನಿತ್ತು ಲೇಖಕಿ ವಿದುಷಿ ಸರೋಜಾ ಶ್ರೀನಾಥ್‌ರನ್ನು ಸಮ್ಮಾನಿಸಲಾಯಿತು. ವೇದಿಕೆಯ ಗಣ್ಯರಿಗೆ ಲೇಖಕಿಯ ಪರವಾಗಿ ಗೌರವ ನೀಡಲಾಯಿತು. 

ಕರ್ನಾಟಕ ಸಂಘ ಮುಂಬಯಿ ಗೌರವ ಕೋಶಾಧಿಕಾರಿ ಓಂದಾಸ್‌ ಕಣ್ಣಂಗಾರ್‌ ಸ್ವಾಗತ ಪ್ರಾಸ್ತಾವಿಕ ಮಾತನಾಡಿ, ಸರೋಜಾ ಶ್ರೀನಾಥ ಅವರು ಕರ್ನಾಟಕ ಸಂಘ ಮುಂಬಯಿ ಮೇಲಿರಿಸಿದ ಪ್ರೀತಿ ಅಭಿಮಾನವನ್ನು ಸ್ನೇಹ ಸಂಬಂಧಕ್ಕೆ ಅವರು ನೀಡುತ್ತಿರುವ ಲೇಖನಗಳನ್ನು ಈ ಸಂದರ್ಭದಲ್ಲಿ ಸ್ಮರಿಸಿದರು. ಸಭಾ ಕಾರ್ಯಕ್ರಮವನ್ನು ಸಂಘದ ಗೌರವ ಕಾರ್ಯದರ್ಶಿ ಡಾ| ಭರತ್‌ ಕುಮಾರ್‌ ಪೊಲಿಪು ನಿರೂಪಿಸಿ ಅತಿಥಿಗಳನ್ನು ಪರಿಚಯಿಸಿದರು. ಸಭಾ ಕಾರ್ಯಕ್ರಮದ ಮೊದಲಿಗೆ ಕನಕ ಸಭಾ ಪರ್ಫಾಮಿಂಗ್‌ ಆರ್ಟ್ಸ್ ಚೆಂಬೂರು ಇದರ ನೃತ್ಯ ಕಲಾವಿದರು ಡಾ| ಸಿರಿರಾಮ ಅವರ ನಿರ್ದೇಶನದಲ್ಲಿ  ನೃತ್ಯ ಪ್ರದರ್ಶಿಸಿದರು.

Trending videos

Back to Top